Sunday 24 July 2011

ಕಥೆಗಾರ್ತಿ ಕೊಡಗಿನ ಗೌರಮ್ಮ


ಕೆ.ಎಸ್.ಧನಂಜಯ,ಮಡಿಕೇರಿ
     ಕೊಡಗಿನ ಗೌರಮ್ಮ ಹೆಸರೆ ಒಂದು ನವ ಚೇತನ ತುಂಬುವಂತದ್ದು. ಇವರು 1931 ರಿಂದ 1929 ರ ಮದ್ಯೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಣ್ಣ ಕಥೆಗಳ ಛಾಪನ್ನು ಬಹಳ ಅಚ್ಚು ಕಟ್ಟಾಗಿ ಒತ್ತಿ ಹೋದ ಕನ್ನಡದ ಕಥೆಗಾರ್ತಿ ಎಂದು ಹೇಳಿದರೆ ಅದು ಉತ್ಪ್ರೇಕ್ಷೆಯಲ್ಲ.  ದಿನಾಂಕ 5.3.1912 ರಲ್ಲಿ ಮಡಿಕೇರಿಯಲ್ಲಿ ಹುಟ್ಟಿದರು. ತದ ನಂತರ 1925 ರ ಸುಮಾರಿಗೆ ಬಿ.ಟಿ ಗೋಪಾಲ ಕೃಷ್ಣ ರವರನ್ನು ವಿವಾಹವಾದರು ಅವರ ಹಿರಿಯ ಮಗ ಬಿ.ಜಿ.ವಸಂತ್ ಈಗಲೂ ಮಡಿಕೇರಿಯಲ್ಲಿ ಕಾವೇರಿ ಕೃಪ ವಿಶ್ವ ಕಲ್ಯಾಣ ಸೇವಾ ಸಮಿತಿವತಿಯಿಂದ ನಡೆಸಲ್ಪಡುವ ಅಶ್ವಿನಿ ಆಸ್ಪತ್ರೆಯಲ್ಲಿ ಸಾಮಾಜಿಕ ಕಳಕಳಿಯಿಂದ ತಮ್ಮ ಇಳಿ ವಯಸ್ಸಿನಲ್ಲೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ ನಾನು ಕೂಡ ಒಂದು ವರ್ಷ ಅದೇ ಆಸ್ಪತ್ರೆಯಲ್ಲಿ ಅವರೊಂದಿಗೆ ದುಡಿಯುವ ಅವಕಾಶ ದೊರೆಯಿತು ಅದು ನನ್ನ ಭಾಗ್ಯವೆಂದೆ ನನ್ನ ನಂಬಿಕೆ. ಅದೇನೆ ಇರಲಿ ಕೊಡಗಿನ ಗೌರಮ್ಮ ತನ್ನ 21 ವರ್ಷದಲ್ಲಿ 27 ಕಥೆಗಳನ್ನು ತಮ್ಮ ಅಮೂಲ್ಯ ಲೇಖನಿಯಿಂದ ಕನ್ನಡ ಸಾರಸತ್ವಲೋಕಕ್ಕೆ ನೀಡಿದ್ದಾರೆಂಬುದು ಗಮನಾರ್ಹವಾದ ವಿಷಯ.ಅವರ ಲೇಖನಿಯಿಂದ ಹರಿದು ಬಂದ ಅವರ 27 ಕಥೆಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ಕಂಬನಿ ಎಂಬ ಕಥಾ ಸಂಕಲನದಲ್ಲಿ 12 ಕಥೆ ಇದ್ದು, ಚಿಗುರು ಎಂಬ ಕಥಾ ಸಂಕಲನದಲ್ಲಿ 9 ಕಥೆಗಳಿವೆ. ಗೌರಮ್ಮನವರ ಕಥೆಗಳಲ್ಲಿ ಪ್ರತಿಭಟನೆಯ ಸ್ವರೂಪ ಮತ್ತು ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ. 2002 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಗೌರಮ್ಮನವರ ಎಲ್ಲಾ ಕಥೆಗಳನ್ನು ಸೇರಿಸಿ ಜೀವನ ಪ್ರೀತಿ ಎಂಬ ಪುಸ್ತಕವನ್ನು ಪ್ರಕಟಿಸಿ ಗೌರವ ಸೂಚಿಸಿದೆ. 
     ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ.ಪಿ.ರಮೇಶ್ ರವರ ನೇತೃತ್ವದಲ್ಲಿ  ಕೊಡಗಿನ ಗೌರಮ್ಮನವರ ಹೆಸರಿನಲ್ಲಿ ಪ್ರತಿ ವರ್ಷ ಕೊಡಗಿನ ಮಹಿಳಾ ಸಾಹಿತ್ಯ ಲೋಕದಲ್ಲಿ ದುಡಿಯುತ್ತಿರುವ ಮಹಿಳಾ ಲೇಖಕಿಯರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸವನ್ನು ನಿರಂತರವಾಗಿ ನಡೆಸುತ್ತಾ ಬರುತ್ತಿದೆ. ಇಲ್ಲಿಯ ತನಕ ಒಟ್ಟು 6 ಜನ ಕೊಡಗು ಜಿಲ್ಲಾ ಮಹಿಳಾ ಸಾಹಿತಿಗಳನ್ನು ಮತ್ತು ಅವರ ಸಾಹಿತ್ಯ ಕೃತಿಯನ್ನು ವಿಮರ್ಶೆಗೊಳಪಡಿಸಿ ಕೊಡಗಿನ ಗೌರಮ್ಮ ಪ್ರಶಸ್ತಿಯನ್ನು ನೀಡುವುದರೊಂದಿಗೆ ತನ್ನ ದಿಟ್ಟ ಹೆಜ್ಜೆಯನ್ನು ಸಾಹಿತ್ಯ ಲೋಕದಲ್ಲಿ ಮಾಡುತ್ತಿದೆ. ಇಲ್ಲಿಯವರೆಗೆ ಶ್ರೀಮತಿ ನಯನ ಕಸ್ಯಪ್ ರವರ "ಮೆಟ್ಟಿಲ ಹಾದಿ" ಕವನ ಸಂಕಲನಕ್ಕೆ,ಬೈತಡ್ಕ ಜಾನಕಿಯವರು ತಮ್ಮ "ಹಸೆಮನೆ",ಮಂಡೆಪಂಡ ಗೀತ ಮಂದಣ್ಣನವರು ತಮ್ಮ "ಮಯೂರ" ಕಾದಂಬರಿಗೆ,ಶ್ರೀಮತಿ ರೇಖಾ ವಸಂತರವರ ತಮ್ಮ "ಕೊಡವ ರಂಗ ಭೂಮಿ" ಸಂಶೋಧನ ಗ್ರಂಥಕ್ಕೆ, ಕಸ್ತೂರಿ ಗೋವಿಂದಮಯ್ಯನವರ ತಮ್ಮ "ಹೆಜ್ಜೆಗಳು" ಕವನ ಸಂಕಲನಕ್ಕೆ, ಕೋರನ ಸರಸ್ವತಿಯವರು "ಕೊಡಗು ಗೌಡ ಸಮುದಾಯ ಸಂಸ್ಕೃತಿ" ಸಂಶೋಧನ ಗ್ರಂಥಕ್ಕೆ ಮತ್ತು ಶ್ರೀಮತಿ ವಿಜಯ ವಿಷ್ಣು ಭಟ್ ಒಂದು ಕೃತಿಗೂ ಕೂಡ  ಗೌರಮ್ಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
         ಗೌರಮ್ಮನವರ ಸಾಹಿತ್ಯದ ಅಭಿವ್ಯಕ್ತಿ ಸೌದಂರ್‍ಯವನ್ನು ಪರಶೀಲಿಸುವುದಕ್ಕಿಂತಲೂ ಅವರ ಸಾಹಿತ್ಯದಲ್ಲಿ ಪ್ರತಿಭಟನೆಯ ಸ್ವರೂಪವನ್ನು ಗಮನಿಸಬೇಕು, 19 ಶತಮಾನದದ ಮೊದಲರ್ದದಲ್ಲಿ ಬಾಳಿ ಕಣ್ಮ್ರರೆಯಾದ ಗೌರಮ್ಮ ಮಹಿಳೆಯಾಗಿ ತಮ್ಮ ಸಮಾಜವನ್ನು ಗ್ರಹಿಸಿದ ಪರಿ ಆಸಕ್ತಿದಾಯಕ, ಮಧ್ಯಮ ವರ್ಗದ ಬ್ರಾಹ್ಮಣ ಸಮಾಜವನ್ನು ಸ್ತ್ರೀ- ಪರುಷರನ್ನು ಸೇರಿದಂತೆ ಗೌರಮ್ಮ ಪರೀಕ್ಷಿಸಿದ ಪರಿ ಮಾತ್ರ ಅಭಿನಂದನಾರ್ಹ. ಬಹುಶಃ ತನ್ನ ಕಾಲದ ಬಹುತೇಕ ಸ್ತ್ರೀಯರಿಗಿಂತ ಹೆಚ್ಚು ಆಧುನಿಕ ವ್ಯಕ್ತಿತ್ವವನ್ನು ಹೊಂದಿದ್ದ ಗೌರಮ್ಮನದು ತನಗಿದ್ದ ವಿದ್ಯೆ ಸಾಮಾಜಿಕ ಕಳಕಳಿ, ಪ್ರಶ್ನಿಸುವ ಪ್ರವೃತ್ತಿ, ಪುರುಷನೊಂದಿಗಿನ ಸ್ತ್ರೀ ಸಮಾಜದ ಸಂಭಂದಗಳ ಸುಧಾರಣೆಗಾಗಿ ಹಂಬಲಿಸುವ ಅವರ ದಿಟ್ಟತನ, ಜೊತೆಗೆ ಪರಂಪರೆಯ ಸಂಪ್ರದಾಯಗಳಲ್ಲಿ ಪ್ರೀತಿಯಿರುವವರ ಕೋಪಕ್ಕು ಒಳಗಾಗದೆ ಇವುಗಳ ವಿರುದ್ದ ಹೋರಾಟದ ಹೆಜ್ಜೆಯನ್ನಿಟ್ಟಾಗ, ನಿಂದನೆಗೂ ಒಳಗಾಗದೆ ಮುನ್ನಡೆದ ಹಾದಿ ಕೂಡ ಗಮನಾರ್ಹವೆ. ಅವರ ಪುನರ್ವಿವಾಹ ಕಥೆ  ವಿದವಾ ವಿವಾಹದಲ್ಲಿನ ಸ್ತ್ರೀ-ಪುರುಷ ನಿಲುವುಗಳ ಟೊಳ್ಳುತನವನ್ನು ಅನಾವರಣ ಮಾಡುತ್ತದೆ. ಲೇಖಕಿಯ ಇಂತಹ ಮನೋಧರ್ಮ ತನ್ನ ಎಲ್ಲಾ ಕಥೆಗಳಲ್ಲಿ ಎದ್ದು ಕಾಣುತ್ತದೆ. ಕೆಲವು ಕಥೆಗಳು ಗಂಡು ಹೆಣ್ಣಿನ ನಡುವಿನ ಸ್ನೇಹವೆಂದರೆ ಲೈಂಗಿಕ ದೃಷ್ಟಿ ಮಾತ್ರವಲ್ಲ, ಸ್ವ ಪ್ರಯೋಜನವಿಲ್ಲದೆ ಪ್ರೇಮವಾಗಳಲಿ ಪ್ರೀತಿಯಾಗಲಿ ಇರಬೇಕು ಎನ್ನುವ ಪ್ರತಿಪಾದನೆಯಿದೆ.
     ಆಹುತಿ ಕಥೆಯಲ್ಲಿ ವರದಕ್ಷಿಣೆಯ ವಿರುದ್ದ ಪ್ರತಿಭಟನೆ ವ್ಯಕ್ತವಾಗಿದೆ. ಮಾನವೀಯ ಮೌಲ್ಯಗಳು ಎದ್ದು ನಿಲ್ಲಬೇಕು ಸಂಪತ್ತು ,ಹಣ ಇವುಗಳ ಅಹಂಕಾರದ ನರ್ತನ ಇದರ ಮುಂದೆ ಗೌಣ್ಯವಾಗಬೇಕು ಎಂಬ ನಿಲುವಿನ ಗೌರಮ್ಮ ಸ್ವಾತಂತ್ರ ಹೋರಾಟದ ಸಮಯಲ್ಲಿ ಗಾಂಧೀಜಿಯವರು ಮಡಿಕೇರಿಗೆ ಭೇಟಿ ನೀಡಿದಾಗ ತನ್ನ ಮನೆಗೆ ಗಾಂಧೀಜಿಯವರು ಬರಲೇ ಬೇಕು ಎಂದು ಹಟ ಮಾಡಿ ಮತ್ತು ಗಾಂಧೀಜಿಯವರು ಮನೆಗೆ ಬಂದಾಗ ತನ್ನ ಮೈ ಮೇಲಿನ ಎಲ್ಲಾ ಒಡವೆಗಳನ್ನು ಬಿಚ್ಚಿ ಕೊಟ್ಟರು, ಗಾಂಧಿಜಿಯವರ ಹೋರಾಟದ ಖರ್ಚಿಗಾಗಿ. ಗಾಂಧೀಜಿಯವರು ಗೌರಮ್ಮನವರ ಮನೆಯಲ್ಲಿ ಸ್ನಾನಕ್ಕಾಗಿ ಉಪಯೋಗಿಸಿದ ಒಂದು ಸಾಬೂನ್ನು ಸುಮಾರು ಕಾಲ ಜೋಪಾನ ಮಾಡಿದ್ದರು ಅದು ಈಗ ಮೈಸೂರು ವಸ್ತು ಸಂಗ್ರಾಲಯದಲ್ಲಿದೆ ಎಂದು ಸಾಹಿತಿ ಪ್ರೋ ಕಾಳೆಗೌಡ ನಾಗವರರವರು ಹೇಳುತ್ತಾರೆ. ಅಲ್ಲಿಂದ ಮುಂದೆ ಗಾಂಧಿಜಿಯವರು ಪುತ್ತೂರಿಗೆ ಹೋಗುತ್ತಾರೆ ಅಲ್ಲಿ ಸಮೇತ ಬಹಳ ಬ್ರಾಹ್ಮಣ ಸಮುದಾಯದ ಮಂದಿ ತಮ್ಮ ಮನೆಗೆ ಆಹ್ವಾನಿಸುತ್ತಾರೆ ಅಲ್ಲಿ ಗಾಂಧೀಜಿಯವರು ನೀವು ದಲಿತರನ್ನು ಮನೆಗೆ ಸೇರಿಸುವುದಿಲ್ಲವಲ್ಲಾ  ಮೊದಲು ಅವರನ್ನು ಗೌರವಿಸಿ ಎಂದು ಹೇಳುತ್ತಾರೆ.
     ನಾನು ಮೊದಲೆ ಹೇಳಿದಂತೆ ಸಮಾಜವನ್ನು ಎದುರು ಹಾಕಿಕೊಳ್ಳದೆ ಸಮಾಜವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಒಂದು ತರಹದ ಆಪ್ತ ಸಮಾಲೋಚನೆ ಮಾಡುವ ರೀತಿ ಬಹಳ ಸೊಗಸಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಮುಖ್ಯವೇ ಹೊರತು ಮದುವೆಯಲ್ಲ ಎನ್ನುವ ಪ್ರತಿಪಾದನೆ. ಇಲ್ಲಿ ಕೆಲವೊಂದು ಕಥೆಗಳು ನೇರ ನಿರೂಪಣೆ ಇದ್ದರೆ ಕೆಲವೊಂದು ಸಂವಾದಗಳ ರೂಪದಲ್ಲಿವೆ. ಇಂತಹ ದಿಟ್ಟ ಕಥೆಗಾರ್ತಿ ತಮ್ಮ 27 ನೇ ವಯಸ್ಸಿಗೆ 21 ಕಥೆಗಳನ್ನು ರಚಿಸಿ ದಿನಾಂಕ 13/4/1939 ರಂದು ಸುಂಟಿಕೊಪ್ಪ ಸಮೀಪದ ಹರದೂರು ಹೊಳೆಯಲ್ಲಿ ( ಅವರ ಪತಿ ಗುಂಡುಕುಟ್ಟಿ ಮಂಜುನಾಥಯ್ಯನವರ ಎಸ್ಟೇಟ್ ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು) ಸುಳಿಗೆ ಸಿಕ್ಕಿ ತನ್ನ ದುರಂತ ಅಂತ್ಯವನ್ನು ಕಾಣುತ್ತಾರೆ ಎನ್ನಲು ಬೇಸರವಾಗುತ್ತದೆ. ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ಎಂದಿಗು ಅಮರವಾಗಿರುತ್ತಾರೆ ಕೊಡಗನ್ನು ಸಾಹಿತ್ಯ ಲೋಕದಲ್ಲಿ ಗುರುತಿಸುವಂತೆ ಮಾಡಿದ ಅವರ ಸೇವೆ ಸ್ಮರಣೀಯ.

ಚಿಗುರು..
1 ಎರಡನೆ ಮದುವೆ 2 ಕಾಗದ ಮಾಲೆ,3 ಬಲಿ, 4 ಒಂದು ಚಿತ್ರ 5 ಪಾಪನ ಮದುವೆ 6 ಅದೃಷ್ಟದ ಆಟ, 7 ನನ್ನ ಮದುವೆ, 8 ಮರದ ಗೊಂಬೆ, 9 ಒಂದು ದಿನ ಮುಂದೆ,

ಕಂಬನಿ
1 ವಾಣಿಯ ಸಮಸ್ಯೆ, 2 ಸನ್ಯಸಿ ರತ್ನ, 3 ಒಂದು ಸಣ್ಣ ಚಿತ್ರ, 4 ಅವನ ಭಾಗ್ಯ, 5 ಕೌಶಲ್ಯ ನಂದನ, 6 ನಾಲ್ಕು ಘಟನೆ, 7 ಪ್ರಾಯಶ್ಚಿತ, 8 ತಪ್ಪತಸ್ಥ ಯಾರು, 9 ಅವನು ಹೋಗಿದ್ದ, 10 ಸುಳ್ಳು ಸ್ವಪ್ನ, 11 ಯಾರು, 12 ಮನುನ ರಾಣಿ


2 comments:

  1. ಕಥೆಗಾರ್ತಿ ಕೊಡಗಿನ ಗೌರಮ್ಮನ ಬದುಕಿನ ಕೆಲವೊಂದು ಪುಟವನ್ನು ನಮಗಾಗಿ ತೆರೆದಿಟ್ಟ ನಿಮಗೆ ಕೃತಜ್ಞತೆಗಳು.

    ReplyDelete
    Replies
    1. ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ ಉಮಾ ಭಟ್ ರವರೇ

      Delete