Monday, 25 July 2011

"ಪತ್ರೊಡೆ" ಮಡಿಕೇರಿ ಮಳೆಗೊಂದೊ ಖಾದ್ಯ

ಕೆ.ಎಸ್.ಧನಂಜಯ,ಮಡಿಕೇರಿ.


     ಹೊರಗೆ ಕಣ್ಣಾಡಿಸಿ ನೋಡುತ್ತೇನೆ ಧೋ...ಧೋ ಎಂದು ಸುರಿಯುವ ಮಳೆ ಎಲ್ಲಿಯು ಹೊರಗೆ ತಿರುಗಾಡಲು ಬಿಡುವು ನೀಡುತ್ತಿಲ್ಲ. ಒಂದು ತರಹದ ಉದಾಸಿನ. ಮನೆಯೊಳಗೆ ಕುಳಿತು ಏನಾದರು ಮಾಡಿ ತಿನ್ನಬಾರದೆ ಎಂದಾಗ ನೆನಪಿಗೆ ಬಂದದ್ದು  ಪತ್ರೊಡೆ. ಹೊರಗೆ ಬಂದು ನನ್ನ ಹಳೆಯ ಕಾರು ತೆಗೆದುಕೊಂಡು ನೇರವಾಗಿ ಮಡಿಕೇರಿಯ ಸಂತೆಗೆ ಹೋದೆ ಅಂದು ಶುಕ್ರವಾರ ಆದರಿಂದ ನನಗೆ ಪತ್ರೊಡೆ ಸೊಪ್ಪಿನ ಸಮಸ್ಯೆ ಬರಲಿಲ್ಲಿ ಹಾಗೆ ತೆಗೆದುಕೊಂಡು ಬಂದು ಮಡದಿಯ ಕೈಗೆ ನೀಡಿ ನಾಳಿನ ಬೆಳಿಗಿನ ತಿಂಡಿ ಪತ್ರೊಡೆ ಆಗಬೇಕು ಎಂದು ಆದೇಶಿಸಿದೆ.
      ನಮ್ಮೂರಿನ ಆಲದ ಮರ, ಹತ್ತಿ ಮರದಲ್ಲಿ ಹೇರಳವಾಗಿ ಸಿಗುವ ಪತ್ರೊಡೆ ಎಲೆಗಳಿಗೆ ಮಡಿಕೇರಿಯ ಸಂತೆಯಲ್ಲಿ ಬಾರಿ ಬೇಡಿಕೆ ಎಕೆಂದರೆ  ಈ ಆಟಿ (ಕರ್ಕಾಟಕ ಮಾಸ)ಯಲ್ಲಿ ಮಾತ್ರ ಪತ್ರೊಡೆ ಕನಿಲೆ ಮತ್ತು ಆಟಿ ಸೊಪ್ಪು ( ಇದು ಆಟಿ ತಿಂಗಳ 18 ನೇ ದಿವಸ ಇದರಲ್ಲಿ ಹದಿನೆಂಟು ಬಗೆಯ ಔಷಧ ಲಭ್ಯ ಎಂಬ ನಂಬಿಕೆ)ಇದನ್ನು ನಾವು ಹೇರಳವಾಗಿ ಉಪಯೋಗಿಸುವುದು. ಕಣ್ಣಿಗೆ ಮುದ ನೀಡುವ ಹಸಿರು ಕ್ರಾಂತಿಯಂತೆ ಕಂಗೊಳಿಸುವ ಈ ಎಲೆಗೆ ಮಲೆನಾಡಿನಲ್ಲಿ ಈ ಸಮಯದಲ್ಲಿ ಬೇಡಿಕೆ ಇರುವುದು ಸಹಜ.
     ಕವಿ ಬಿ. ಆರ್.ಲಕ್ಷ್ಮಣರಾಯರು ಮದುವೆಯ ಹೊಸತನದಲ್ಲಿ ಹೆಂಡತಿಯ ತವರು ಮನೆಗೆ ಹೋಗಿ ಪತ್ರೊಡೆ ತಿಂದ ಅನುಭವ ತುಂಬಾ ಸೊಗಸಾಗಿದೆ ಹೆಂಡತಿಯ ಮನೆಗೆ ಹೊರಟು ತಿಪಟೂರಿನಲ್ಲಿ ಬಸ್ಸು ಕಾಫಿಗೆ ನಿಲ್ಲುತ್ತದೆ. ಆ ಹೊಟೇಲ್ ನಲ್ಲಿ ಒಂದು ನವ ಜೋಡಿ ಇವರ ಎದುರಿಗೆ ಕುಳಿತುಕೊಳ್ಳುತ್ತಾರಂತೆ. ಆ ಹೊಸ ವಧು ಇವರನ್ನು ಕಂಡು ನಮಸ್ಕಾರ ಸಾರ್ ನಾನು ನಿಮ್ಮ ವಿಧ್ಯಾರ್ಥಿ ಎಂದು ಗೌರವದಿಂದ ನಮಸ್ಕರಿಸುತ್ತಾರೆ.ನಂತರ ಬಸ್ಸಿಗ್ಗೆ ಬಂದು ಕುಳಿತ್ತಾಗ ರಾಯರ ಹೆಂಡತಿಯ ಮುಖ ಊದಿ ಯಾರ್ರಿ ಆ ಶಕುಂತಲೆ "ಶಕೂ ನನಗೆ ನೀನೆ ಬೇಕು" ಎಂದು ಪದ್ಯ ಬರೆದಿದ್ದೆರಲ್ಲ ಅವಳೆನಾ ಇವಳು ಎನ್ನುತ್ತಾರೆ ಅದಕ್ಕೆ ರಾಯರು ಅದು ಕಲ್ಪನೆ ಮರಾಯ್ತಿ ಎಂದು ಸುಮ್ಮನಾಗುತ್ತಾರೆ ಸುಮ್ಮನಾದರೆ ಪರವಾಗಿಲ್ಲ ಒಂದೊಂದು ಮನೆಯಲ್ಲಿ ಇಲ್ಲದ ವಿಷಯಕ್ಕೆ ರಾಮಾಯಣವೆ ನಡೆದು ಬಿಡುತ್ತೆ. ಅದೇನೆ ಇರಲಿ ಶಿವಮೊಗ್ಗೆ ತಲುಪಿದ ರಾಯರಿಗೆ ಅಲ್ಲಿ ಬೆಳಗಿನ ತಿಂಡಿ ಪತ್ರೊಡೆ. ಹೆಸರು ಕೇಳಿದರೆನೆ ನನಗಂತು ಬಾಯಲ್ಲಿ ಜೊಲ್ಲು  ಸುರಿಯುತ್ತೆ ಅಷ್ಟಲ್ಲದೆ ನಮ್ಮ ಜಯಂತ ಕಾಯ್ಕಿಣಿಯವರು "ಓದಿನ ರುಚಿ ಪತ್ರೊಡೆ ಸವಿದಂತೆ" ಎಂದಿದ್ದಾರೆಯೆ. ಹೀಗೆ ರುಚಿ ರುಚಿಯಾಗಿದೆ ಎಂದು ಸ್ವಲ್ಪ ಜಾಸ್ತಿ ತಿಂದ ಲಕ್ಷ್ಮಣರಾಯರು ನಂತರ ಮಡದಿಗೆ ನಾಲಿಗೆ ಮಂದವಾಗ್ತಿದೆ ತುರಿಕೆ ಆಗುತ್ತಿದೆ. ಎಂದು ಹೇಳಿದಕ್ಕೆ ಸುಮ್ಮನ್ನಿದ್ದ ಅವರ ಶ್ರೀಮತಿ ರಾತ್ರಿ ಮಲಗುವ ಕೋಣೆಯಲ್ಲಿ ಸುಳ್ಳು ಹೇಳುವವರು ಪತ್ರೊಡೆ ತಿಂದರೆ  ನಾಲಿಗೆ ತುರಿಸುತ್ತದೆ ಎಂದು ಹೇಳಿಯೆ ಬಿಟ್ಟರು. ಈಗಲಾದರೂ ಒಪ್ಪಿಕೊಳ್ಳಿ ತಿಪಟೂರಿನ ಹೊಟೇಲ್ ನಲ್ಲಿ ಸಿಕ್ಕಿದ ಶಕುಂತಲ ನಿಮ್ಮ ಕಾವ್ಯದ ಶಕುಂತಲೆನಾ? ಹೀಗೆ ಪತ್ರೊಡೆ ಸವಿಗೆ ಕನ್ನಡದ ಸಾರಸತ್ವ ಲೋಕ ಮಾರುಹೋಗಿದೆ.
     ಪಂಜೆ,ಅಡಿಗರು,ದುಂಡಿರಾಜ್, ವೈದೇಹಿ, ಭುವನೇಶ್ವರಿ ಹೆಗಡೆಯವರೆಗೆ ಎಲ್ಲರು ಪತ್ರೊಡೆ ಸವಿಯನ್ನು ಸವಿದವರೆ. ಮಾತ್ರವೇಕೆ ಪತ್ರೊಡೆ ಸವಿದ ನಾಲ್ಕು ಕನ್ನಡ ಕವಿವರ್ಯರಿಗೆ ಜ್ಙಾನಪೀಠ ಪ್ರಶಸ್ತಿಯು ಬಂದಿದೆ ಎಂದು ಎಲ್ಲೋ ಓದಿದ ನೆನಪು ಅದು ಕುವೆಂಪು, ಕಾರಂತ,ಕಾರ್ನಾಡ್ ಮತ್ತು ಅನಂತಮೂರ್ತಿ ಇರಬಹುದೇನೋ. ಅದೇನೆ ಇರಲಿ  ಕೃಷ್ಣ ಹುಟ್ಟಿದ ಕೂಡಲೆ ವಾಸುದೇವ ಅವನನ್ನು ರಾತ್ರೋ ರಾತ್ರಿ ಸೆರೆಮೆನೆಯಿಂದ  ಹೊತ್ತೊಯ್ದು ಹೋಗುವಾಗ ಆ ನಟ್ಟಿರುಳಿನಲ್ಲಿ ಪ್ರಳಯ ಸದೃಶ್ಯ ಮಳೆ ಸುರಿಯುತ್ತದೆ ಆಗ ವಾಸುದೇವೆ ಮಗುವನ್ನು ಮಳೆಯಿಂದ ರಕ್ಷಿಸಲು , ಒಂದು ಮಗುವಿನ ಮೇಲೆ ಮತ್ತೊಂದು ಕೆಳಗೆ ಇಟ್ಟು ಮಗುವನ್ನು ರಕ್ಷಿಸಿದರು ಎಂಬ ನಂಬಿಕೆ ಆಗಗಿ ಗೋಕುಲಾಷ್ಟಮಿಯ ಮೂರು ದಿವಸ  ಅದಕ್ಕೆ ಜಾತ ಶೌಚ ಹಾಗಾಗಿ ಆ ಸಮಯದಲ್ಲಿ ಅದನ್ನು ಪತ್ರೊಡೆಯೊಂದಿಗೆ ಸವಿಯುವುದಿಲ್ಲ ಆ ಸಮಯದಲ್ಲಿ ತಿಂದರೆ ತುರಿಕೆ ಇರುತ್ತದೆ,ಮತ್ತು ಕೃಷ್ಣನನ್ನು ಸುತ್ತಿದ ಎಲೆಯಾದರಿಂದ  ಮಗುವಿನ ಮೈ ಎಣ್ಣೆ ಅದಕ್ಕೆ ತಾಕಿದರಿಂದ ಅದಕ್ಕೆ ನೀರು ತಾಗುವುದಿಲ್ಲ ಎಂಬ ಗಾಡವಾದ ನಂಬಿಕೆ ಮಲೆನಾಡಿನ ಜನರಲ್ಲಿ ಇದೆ. ಹಾಗಾಗಿ ಪತ್ರೊಡೆ ಮಾಡುವಾಗ ಆ ಎಲೆಯ ಬೆನ್ನಿನ ಭಾಗಕ್ಕೆ ಮಸಾಲೆ ಹಚ್ಚುವುದು ಸಮೇತ ಆ ಭಗವಾನ ಮೇಲಿನ ಗೌರವದಿಂದಲೇ ಇರಬೇಕು.
     ನೀವು ಒಮ್ಮೆ ಈಗೆ ಮಾಡಿ ನೋಡಿ ಒಂದು ಪಾವು ಅಕ್ಕಿಗೆ ಅರ್ಧ ಹಿಡಿಯಷ್ಟು ಉದ್ದಿನ ಬೇಳೆ ಸೇರಿಸಿ ಬಾಣಲೆಯಲ್ಲಿ ಹುರಿದು ಅದನ್ನು ತಣ್ಣಗಾದ ಮೇಲೆ ನೀರಿನಲ್ಲಿ ನನೆಸಿಡಬೇಕು ಮೂರು ನಾಲ್ಕು ಗಂಟೆಯ ನಂತರ ಅದಕ್ಕೆ ಎರಡು ಚಮಚ ಜೀರಿಗೆ,ನಾಲ್ಕು ಚಮಚ ಕೊತ್ತಂಬರಿ ಬೀಜ,ಒಂದು ಚಮಚ ಅರಸಿನ ಪುಡಿ. ಸ್ವಲ್ಪ ಪುದಿನಾ, ಕೆಂಪು ಒಣ ಮೆನಸಿನಕಾಯಿ, ಲಿಂಬೆ ಗಾತ್ರದ ಹುಣುಸೆ ಹಣ್ಣು ಮತ್ತು ರುಚಿಗೆ ತಕ್ಕ ಉಪ್ಪು.  ಇವಿಷ್ಟನ್ನು ನಮ್ಮ ಮನೆಯಲ್ಲಿರುವ ಅಡಿಮನೆ ಯಂತ್ರದಿಂದ ರುಬ್ಬಿ ತೀರಾ ನುಣ್ಣಗೆ ಬೇಡ, ನಂತರ ಪತ್ರೊಡೆ ಎಲೆಯನ್ನು ತೆಗೆದುಕೊಂಡು ಅದರ ಬೆನ್ನಿನ ಭಾಗಕ್ಕೆ ದೋಸೆಯಂತೆ ಹಚ್ಚಿ ನಂತರ ಇನ್ನೊಂದು ಎಲೆಯನ್ನು ಬೆನ್ನಿನ ಭಾಗದಿಂದ ಮುಚ್ಚಿ ಚಾಪೆ ಸುತ್ತಿದ ಹಾಗೆ ಸುತ್ತಿ ಇಂಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿ ಬೇಕು ಸ್ವಲ್ಪ ಹೊತ್ತಿನ ನಂತರ ಪತ್ರೊಡೆ ರೆಡಿ. ಸಿಹಿಯನ್ನು ಬಯಸುವವರು ಮಸಾಲೆ ಬದಲು ಸಿಹಿ ಬೆರೆಸ ಬಹುದು ಒಟ್ಟಿನಲ್ಲಿ ಮಳೆಗೆ ಖಾರವೆ ಚೆನ್ನಾಗಿರುವುದು ನೀವು ಮಾಡಿ ನೋಡಿ.


Sunday, 24 July 2011

ಕಥೆಗಾರ್ತಿ ಕೊಡಗಿನ ಗೌರಮ್ಮ


ಕೆ.ಎಸ್.ಧನಂಜಯ,ಮಡಿಕೇರಿ
     ಕೊಡಗಿನ ಗೌರಮ್ಮ ಹೆಸರೆ ಒಂದು ನವ ಚೇತನ ತುಂಬುವಂತದ್ದು. ಇವರು 1931 ರಿಂದ 1929 ರ ಮದ್ಯೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಣ್ಣ ಕಥೆಗಳ ಛಾಪನ್ನು ಬಹಳ ಅಚ್ಚು ಕಟ್ಟಾಗಿ ಒತ್ತಿ ಹೋದ ಕನ್ನಡದ ಕಥೆಗಾರ್ತಿ ಎಂದು ಹೇಳಿದರೆ ಅದು ಉತ್ಪ್ರೇಕ್ಷೆಯಲ್ಲ.  ದಿನಾಂಕ 5.3.1912 ರಲ್ಲಿ ಮಡಿಕೇರಿಯಲ್ಲಿ ಹುಟ್ಟಿದರು. ತದ ನಂತರ 1925 ರ ಸುಮಾರಿಗೆ ಬಿ.ಟಿ ಗೋಪಾಲ ಕೃಷ್ಣ ರವರನ್ನು ವಿವಾಹವಾದರು ಅವರ ಹಿರಿಯ ಮಗ ಬಿ.ಜಿ.ವಸಂತ್ ಈಗಲೂ ಮಡಿಕೇರಿಯಲ್ಲಿ ಕಾವೇರಿ ಕೃಪ ವಿಶ್ವ ಕಲ್ಯಾಣ ಸೇವಾ ಸಮಿತಿವತಿಯಿಂದ ನಡೆಸಲ್ಪಡುವ ಅಶ್ವಿನಿ ಆಸ್ಪತ್ರೆಯಲ್ಲಿ ಸಾಮಾಜಿಕ ಕಳಕಳಿಯಿಂದ ತಮ್ಮ ಇಳಿ ವಯಸ್ಸಿನಲ್ಲೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ ನಾನು ಕೂಡ ಒಂದು ವರ್ಷ ಅದೇ ಆಸ್ಪತ್ರೆಯಲ್ಲಿ ಅವರೊಂದಿಗೆ ದುಡಿಯುವ ಅವಕಾಶ ದೊರೆಯಿತು ಅದು ನನ್ನ ಭಾಗ್ಯವೆಂದೆ ನನ್ನ ನಂಬಿಕೆ. ಅದೇನೆ ಇರಲಿ ಕೊಡಗಿನ ಗೌರಮ್ಮ ತನ್ನ 21 ವರ್ಷದಲ್ಲಿ 27 ಕಥೆಗಳನ್ನು ತಮ್ಮ ಅಮೂಲ್ಯ ಲೇಖನಿಯಿಂದ ಕನ್ನಡ ಸಾರಸತ್ವಲೋಕಕ್ಕೆ ನೀಡಿದ್ದಾರೆಂಬುದು ಗಮನಾರ್ಹವಾದ ವಿಷಯ.ಅವರ ಲೇಖನಿಯಿಂದ ಹರಿದು ಬಂದ ಅವರ 27 ಕಥೆಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ಕಂಬನಿ ಎಂಬ ಕಥಾ ಸಂಕಲನದಲ್ಲಿ 12 ಕಥೆ ಇದ್ದು, ಚಿಗುರು ಎಂಬ ಕಥಾ ಸಂಕಲನದಲ್ಲಿ 9 ಕಥೆಗಳಿವೆ. ಗೌರಮ್ಮನವರ ಕಥೆಗಳಲ್ಲಿ ಪ್ರತಿಭಟನೆಯ ಸ್ವರೂಪ ಮತ್ತು ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ. 2002 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಗೌರಮ್ಮನವರ ಎಲ್ಲಾ ಕಥೆಗಳನ್ನು ಸೇರಿಸಿ ಜೀವನ ಪ್ರೀತಿ ಎಂಬ ಪುಸ್ತಕವನ್ನು ಪ್ರಕಟಿಸಿ ಗೌರವ ಸೂಚಿಸಿದೆ. 
     ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ.ಪಿ.ರಮೇಶ್ ರವರ ನೇತೃತ್ವದಲ್ಲಿ  ಕೊಡಗಿನ ಗೌರಮ್ಮನವರ ಹೆಸರಿನಲ್ಲಿ ಪ್ರತಿ ವರ್ಷ ಕೊಡಗಿನ ಮಹಿಳಾ ಸಾಹಿತ್ಯ ಲೋಕದಲ್ಲಿ ದುಡಿಯುತ್ತಿರುವ ಮಹಿಳಾ ಲೇಖಕಿಯರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸವನ್ನು ನಿರಂತರವಾಗಿ ನಡೆಸುತ್ತಾ ಬರುತ್ತಿದೆ. ಇಲ್ಲಿಯ ತನಕ ಒಟ್ಟು 6 ಜನ ಕೊಡಗು ಜಿಲ್ಲಾ ಮಹಿಳಾ ಸಾಹಿತಿಗಳನ್ನು ಮತ್ತು ಅವರ ಸಾಹಿತ್ಯ ಕೃತಿಯನ್ನು ವಿಮರ್ಶೆಗೊಳಪಡಿಸಿ ಕೊಡಗಿನ ಗೌರಮ್ಮ ಪ್ರಶಸ್ತಿಯನ್ನು ನೀಡುವುದರೊಂದಿಗೆ ತನ್ನ ದಿಟ್ಟ ಹೆಜ್ಜೆಯನ್ನು ಸಾಹಿತ್ಯ ಲೋಕದಲ್ಲಿ ಮಾಡುತ್ತಿದೆ. ಇಲ್ಲಿಯವರೆಗೆ ಶ್ರೀಮತಿ ನಯನ ಕಸ್ಯಪ್ ರವರ "ಮೆಟ್ಟಿಲ ಹಾದಿ" ಕವನ ಸಂಕಲನಕ್ಕೆ,ಬೈತಡ್ಕ ಜಾನಕಿಯವರು ತಮ್ಮ "ಹಸೆಮನೆ",ಮಂಡೆಪಂಡ ಗೀತ ಮಂದಣ್ಣನವರು ತಮ್ಮ "ಮಯೂರ" ಕಾದಂಬರಿಗೆ,ಶ್ರೀಮತಿ ರೇಖಾ ವಸಂತರವರ ತಮ್ಮ "ಕೊಡವ ರಂಗ ಭೂಮಿ" ಸಂಶೋಧನ ಗ್ರಂಥಕ್ಕೆ, ಕಸ್ತೂರಿ ಗೋವಿಂದಮಯ್ಯನವರ ತಮ್ಮ "ಹೆಜ್ಜೆಗಳು" ಕವನ ಸಂಕಲನಕ್ಕೆ, ಕೋರನ ಸರಸ್ವತಿಯವರು "ಕೊಡಗು ಗೌಡ ಸಮುದಾಯ ಸಂಸ್ಕೃತಿ" ಸಂಶೋಧನ ಗ್ರಂಥಕ್ಕೆ ಮತ್ತು ಶ್ರೀಮತಿ ವಿಜಯ ವಿಷ್ಣು ಭಟ್ ಒಂದು ಕೃತಿಗೂ ಕೂಡ  ಗೌರಮ್ಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
         ಗೌರಮ್ಮನವರ ಸಾಹಿತ್ಯದ ಅಭಿವ್ಯಕ್ತಿ ಸೌದಂರ್‍ಯವನ್ನು ಪರಶೀಲಿಸುವುದಕ್ಕಿಂತಲೂ ಅವರ ಸಾಹಿತ್ಯದಲ್ಲಿ ಪ್ರತಿಭಟನೆಯ ಸ್ವರೂಪವನ್ನು ಗಮನಿಸಬೇಕು, 19 ಶತಮಾನದದ ಮೊದಲರ್ದದಲ್ಲಿ ಬಾಳಿ ಕಣ್ಮ್ರರೆಯಾದ ಗೌರಮ್ಮ ಮಹಿಳೆಯಾಗಿ ತಮ್ಮ ಸಮಾಜವನ್ನು ಗ್ರಹಿಸಿದ ಪರಿ ಆಸಕ್ತಿದಾಯಕ, ಮಧ್ಯಮ ವರ್ಗದ ಬ್ರಾಹ್ಮಣ ಸಮಾಜವನ್ನು ಸ್ತ್ರೀ- ಪರುಷರನ್ನು ಸೇರಿದಂತೆ ಗೌರಮ್ಮ ಪರೀಕ್ಷಿಸಿದ ಪರಿ ಮಾತ್ರ ಅಭಿನಂದನಾರ್ಹ. ಬಹುಶಃ ತನ್ನ ಕಾಲದ ಬಹುತೇಕ ಸ್ತ್ರೀಯರಿಗಿಂತ ಹೆಚ್ಚು ಆಧುನಿಕ ವ್ಯಕ್ತಿತ್ವವನ್ನು ಹೊಂದಿದ್ದ ಗೌರಮ್ಮನದು ತನಗಿದ್ದ ವಿದ್ಯೆ ಸಾಮಾಜಿಕ ಕಳಕಳಿ, ಪ್ರಶ್ನಿಸುವ ಪ್ರವೃತ್ತಿ, ಪುರುಷನೊಂದಿಗಿನ ಸ್ತ್ರೀ ಸಮಾಜದ ಸಂಭಂದಗಳ ಸುಧಾರಣೆಗಾಗಿ ಹಂಬಲಿಸುವ ಅವರ ದಿಟ್ಟತನ, ಜೊತೆಗೆ ಪರಂಪರೆಯ ಸಂಪ್ರದಾಯಗಳಲ್ಲಿ ಪ್ರೀತಿಯಿರುವವರ ಕೋಪಕ್ಕು ಒಳಗಾಗದೆ ಇವುಗಳ ವಿರುದ್ದ ಹೋರಾಟದ ಹೆಜ್ಜೆಯನ್ನಿಟ್ಟಾಗ, ನಿಂದನೆಗೂ ಒಳಗಾಗದೆ ಮುನ್ನಡೆದ ಹಾದಿ ಕೂಡ ಗಮನಾರ್ಹವೆ. ಅವರ ಪುನರ್ವಿವಾಹ ಕಥೆ  ವಿದವಾ ವಿವಾಹದಲ್ಲಿನ ಸ್ತ್ರೀ-ಪುರುಷ ನಿಲುವುಗಳ ಟೊಳ್ಳುತನವನ್ನು ಅನಾವರಣ ಮಾಡುತ್ತದೆ. ಲೇಖಕಿಯ ಇಂತಹ ಮನೋಧರ್ಮ ತನ್ನ ಎಲ್ಲಾ ಕಥೆಗಳಲ್ಲಿ ಎದ್ದು ಕಾಣುತ್ತದೆ. ಕೆಲವು ಕಥೆಗಳು ಗಂಡು ಹೆಣ್ಣಿನ ನಡುವಿನ ಸ್ನೇಹವೆಂದರೆ ಲೈಂಗಿಕ ದೃಷ್ಟಿ ಮಾತ್ರವಲ್ಲ, ಸ್ವ ಪ್ರಯೋಜನವಿಲ್ಲದೆ ಪ್ರೇಮವಾಗಳಲಿ ಪ್ರೀತಿಯಾಗಲಿ ಇರಬೇಕು ಎನ್ನುವ ಪ್ರತಿಪಾದನೆಯಿದೆ.
     ಆಹುತಿ ಕಥೆಯಲ್ಲಿ ವರದಕ್ಷಿಣೆಯ ವಿರುದ್ದ ಪ್ರತಿಭಟನೆ ವ್ಯಕ್ತವಾಗಿದೆ. ಮಾನವೀಯ ಮೌಲ್ಯಗಳು ಎದ್ದು ನಿಲ್ಲಬೇಕು ಸಂಪತ್ತು ,ಹಣ ಇವುಗಳ ಅಹಂಕಾರದ ನರ್ತನ ಇದರ ಮುಂದೆ ಗೌಣ್ಯವಾಗಬೇಕು ಎಂಬ ನಿಲುವಿನ ಗೌರಮ್ಮ ಸ್ವಾತಂತ್ರ ಹೋರಾಟದ ಸಮಯಲ್ಲಿ ಗಾಂಧೀಜಿಯವರು ಮಡಿಕೇರಿಗೆ ಭೇಟಿ ನೀಡಿದಾಗ ತನ್ನ ಮನೆಗೆ ಗಾಂಧೀಜಿಯವರು ಬರಲೇ ಬೇಕು ಎಂದು ಹಟ ಮಾಡಿ ಮತ್ತು ಗಾಂಧೀಜಿಯವರು ಮನೆಗೆ ಬಂದಾಗ ತನ್ನ ಮೈ ಮೇಲಿನ ಎಲ್ಲಾ ಒಡವೆಗಳನ್ನು ಬಿಚ್ಚಿ ಕೊಟ್ಟರು, ಗಾಂಧಿಜಿಯವರ ಹೋರಾಟದ ಖರ್ಚಿಗಾಗಿ. ಗಾಂಧೀಜಿಯವರು ಗೌರಮ್ಮನವರ ಮನೆಯಲ್ಲಿ ಸ್ನಾನಕ್ಕಾಗಿ ಉಪಯೋಗಿಸಿದ ಒಂದು ಸಾಬೂನ್ನು ಸುಮಾರು ಕಾಲ ಜೋಪಾನ ಮಾಡಿದ್ದರು ಅದು ಈಗ ಮೈಸೂರು ವಸ್ತು ಸಂಗ್ರಾಲಯದಲ್ಲಿದೆ ಎಂದು ಸಾಹಿತಿ ಪ್ರೋ ಕಾಳೆಗೌಡ ನಾಗವರರವರು ಹೇಳುತ್ತಾರೆ. ಅಲ್ಲಿಂದ ಮುಂದೆ ಗಾಂಧಿಜಿಯವರು ಪುತ್ತೂರಿಗೆ ಹೋಗುತ್ತಾರೆ ಅಲ್ಲಿ ಸಮೇತ ಬಹಳ ಬ್ರಾಹ್ಮಣ ಸಮುದಾಯದ ಮಂದಿ ತಮ್ಮ ಮನೆಗೆ ಆಹ್ವಾನಿಸುತ್ತಾರೆ ಅಲ್ಲಿ ಗಾಂಧೀಜಿಯವರು ನೀವು ದಲಿತರನ್ನು ಮನೆಗೆ ಸೇರಿಸುವುದಿಲ್ಲವಲ್ಲಾ  ಮೊದಲು ಅವರನ್ನು ಗೌರವಿಸಿ ಎಂದು ಹೇಳುತ್ತಾರೆ.
     ನಾನು ಮೊದಲೆ ಹೇಳಿದಂತೆ ಸಮಾಜವನ್ನು ಎದುರು ಹಾಕಿಕೊಳ್ಳದೆ ಸಮಾಜವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಒಂದು ತರಹದ ಆಪ್ತ ಸಮಾಲೋಚನೆ ಮಾಡುವ ರೀತಿ ಬಹಳ ಸೊಗಸಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಮುಖ್ಯವೇ ಹೊರತು ಮದುವೆಯಲ್ಲ ಎನ್ನುವ ಪ್ರತಿಪಾದನೆ. ಇಲ್ಲಿ ಕೆಲವೊಂದು ಕಥೆಗಳು ನೇರ ನಿರೂಪಣೆ ಇದ್ದರೆ ಕೆಲವೊಂದು ಸಂವಾದಗಳ ರೂಪದಲ್ಲಿವೆ. ಇಂತಹ ದಿಟ್ಟ ಕಥೆಗಾರ್ತಿ ತಮ್ಮ 27 ನೇ ವಯಸ್ಸಿಗೆ 21 ಕಥೆಗಳನ್ನು ರಚಿಸಿ ದಿನಾಂಕ 13/4/1939 ರಂದು ಸುಂಟಿಕೊಪ್ಪ ಸಮೀಪದ ಹರದೂರು ಹೊಳೆಯಲ್ಲಿ ( ಅವರ ಪತಿ ಗುಂಡುಕುಟ್ಟಿ ಮಂಜುನಾಥಯ್ಯನವರ ಎಸ್ಟೇಟ್ ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು) ಸುಳಿಗೆ ಸಿಕ್ಕಿ ತನ್ನ ದುರಂತ ಅಂತ್ಯವನ್ನು ಕಾಣುತ್ತಾರೆ ಎನ್ನಲು ಬೇಸರವಾಗುತ್ತದೆ. ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ಎಂದಿಗು ಅಮರವಾಗಿರುತ್ತಾರೆ ಕೊಡಗನ್ನು ಸಾಹಿತ್ಯ ಲೋಕದಲ್ಲಿ ಗುರುತಿಸುವಂತೆ ಮಾಡಿದ ಅವರ ಸೇವೆ ಸ್ಮರಣೀಯ.

ಚಿಗುರು..
1 ಎರಡನೆ ಮದುವೆ 2 ಕಾಗದ ಮಾಲೆ,3 ಬಲಿ, 4 ಒಂದು ಚಿತ್ರ 5 ಪಾಪನ ಮದುವೆ 6 ಅದೃಷ್ಟದ ಆಟ, 7 ನನ್ನ ಮದುವೆ, 8 ಮರದ ಗೊಂಬೆ, 9 ಒಂದು ದಿನ ಮುಂದೆ,

ಕಂಬನಿ
1 ವಾಣಿಯ ಸಮಸ್ಯೆ, 2 ಸನ್ಯಸಿ ರತ್ನ, 3 ಒಂದು ಸಣ್ಣ ಚಿತ್ರ, 4 ಅವನ ಭಾಗ್ಯ, 5 ಕೌಶಲ್ಯ ನಂದನ, 6 ನಾಲ್ಕು ಘಟನೆ, 7 ಪ್ರಾಯಶ್ಚಿತ, 8 ತಪ್ಪತಸ್ಥ ಯಾರು, 9 ಅವನು ಹೋಗಿದ್ದ, 10 ಸುಳ್ಳು ಸ್ವಪ್ನ, 11 ಯಾರು, 12 ಮನುನ ರಾಣಿ


Saturday, 16 July 2011

ಸ್ತ್ರೀ ಎಂದರಷ್ಟೆ ಸಾಕೇ ?

ಕೆ.ಎಸ್.ಧನಂಜಯ,ಮಡಿಕೇರಿ.

     ಭಾರತೀಯ ಸಂಸ್ಕೃತಿಯಲ್ಲಿ ಕುಡಿಯುವ ನೀರಿನಿಂದ ಹಿಡಿದು ಉಸಿರಾಡುವ ಗಾಳಿ ತನಕ ಸ್ತ್ರೀಯ ಉಲ್ಲೇಖವಿದೆ,ಹಾಗಾದರೆ ಇಷ್ಟೊಂದು ಇತಿಹಾಸವಿರುವ ಭಾರತೀಯ ಸಂಸ್ಕೃತಿಯಲ್ಲಿ ಝಾನ್ಸಿ ರಾಣಿ,ಕಿತ್ತೂರು ಚೆನ್ನಮ್ಮ,ಅನಿಬೆಸೆಂಟ್ ಅಷ್ಟೇ ಎಕೆ ಮೊನ್ನೆಯ ಕಲ್ಪನ ಚಾವ್ಲ ,ನೆನ್ನೆಯ ಅಶ್ವಿನಿ ಅಕ್ಕುಂಜೆ ತನಕ ಯಾಕೆ ಒಬ್ಬೊಬ್ಬರೆ ಯಾಕೆ ಸಿಗುತ್ತಾರೆ ಗಂಡಸರಂತೆ ಅವ್ಯರ್‍ಯಾಕೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ,ಹೆಂಗಸರು ಪುರುಷರಿಗಿಂತ ತೀರಾ ಕಡಿಮೆ ಪ್ರಮಾಣದಲ್ಲಂತು ಇಲ್ಲ? ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆ ಫಲಿತಾಂಶ ಬರುವಾಗ ಪುರುಷರಿಗಿಂತ ಹೆಚ್ಚಿಗೆ ಮೇಲುಗೈ ಸಾಧಿಸುವ ನಮ್ಮ ಹೆಣ್ಣು ಮಕ್ಕಳು ಎಲ್ಲಿ ಹೋದರು ? ಆಗೋಂದು ಪ್ರಶ್ನೆ ನನಗೆ ಕಾಡುತ್ತಿದೆ. ಅದಕ್ಕೆ ಉತ್ತರ ನಾವು ಅವರನ್ನು ಮೇಲೆ ಬರುವುದಕ್ಕೆ ಪ್ರೋತ್ಸಹ, ಸಹಕಾರ ಕೊಡುತ್ತಿಲ್ಲವಾ? ಮಾತ್ರವಲ್ಲ ಪುರುಷ ಪ್ರಧಾನ ಸಮಾಜದ ಶೋಷಣೆಯೆ? ಒಂದು ಕಡೆ ಶೇಕಡ ೩೩ ರ ಬಗ್ಗೆ ಮಾತನಾಡುವ ನಾವು ಸುಮ್ಮನೆ ಆಗಿ ಬಿಡುತ್ತೇವೆ,ದುಡಿಮೆ ಕ್ಷೇತ್ರದಲ್ಲಿರುವ ಹೆಣ್ಣು ಮಕ್ಕಳಿಗೆ ನಾವು ಎಷ್ಟು ಗೌರವ ನೀಡುತ್ತೇವೆ?ಅಷ್ಟೆಲ್ಲ ಏಕೆ ಇತ್ತೀಚಿನ ಮೈಸೂರು ವಿವಿಯ ಪಿ ಹೆಚ್ ಡಿ ವಿಧ್ಯಾರ್ಥಿಯ ಗೋಳನ್ನೆ ಗಮನಿಸಿ, ಆಕೆ ಪ್ರತಿಭಟಿಸಿದೆ ತಪ್ಪಾ?ಅದಕ್ಕೆ ಆಕೆ ಅದೆಷ್ಟು ಆಯೋಗಗಳು,ಸಮಿತಿಯ ಮುಂದೆ ಹೋಗಿ ತನ್ನ ಗೋಳನ್ನು ತೋಡಿಕೊಳ್ಳ ಬೇಕಾಯಿತು, ದುರಂತ ಎಂದರೆ ಅಂತಹ ಸಮಿತಿಗಳಲ್ಲಿ ಗಂಡಸರೆ ಜಾಸ್ತಿ ಇರುತ್ತಾರೆ. ಅದು ಆಕೆಯ ಮಾನಸಿಕ ಸ್ಥಿತಿಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಅದು ಹೆಂಗಸರ ತೊಂದರೆಗಳು ಅದನ್ನು ನಾವು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲಾ? ನಮ್ಮ ಅಮ್ಮನ ವಿಷಯಕ್ಕೆ ಬಂದಾಗ ಮೃದು ಆಗುವ ನಾವು ಬೇರೆ ಹೆಂಗಸರ ವಿಷಯದಲ್ಲಿ ಯಾಕೆ ಇಷ್ಟೊಂದು ನೀಚರಾಗಿ ಬಿಡುತ್ತೇವೆ?
      ಜನನಿ ಜನ್ನ ಭೂಮಿಶ್ಛ ಸ್ವರ್ಗದಾಪಿ ಗರೀಯಸೀ ಅಂತ ಹೇಳ್ತಿವಿ ಜನ್ಮ ಭೂಮಿಯನ್ನು ಗೌರವಿಸಲು ಹಿಂದೆ ಮುಂದೆ ನೋಡ್ತಿವಿ. ಅದು ನೆನ್ನೆಯ ಸ್ತ್ರೀ ಸಮಸ್ಯೆಯಿಂದ ಹಿಡಿದು ಇಂದಿನ ಭಯೊತ್ಪಾದನೆವರೆಗೂ ಹಾಗೇಯೆ ಇದೆ ಅಲ್ವಾ? ನಮ್ಮ ಭಾರತೀಯ ಸೇನೆಯಲ್ಲಿ ಸುಮಾರು ೧೫೦೦ ಅಧಿಕಾರಿಗಳು ಇರಬಹುದು ಎಂದು ಅಂದಾಜಿಸಿದರೆ ಅವರ ಸಮಸ್ಯೆಯೆ ಬೇರೆ, ಕಛೇರಿಯಲ್ಲಿ ಕೆಲಸ ಮಾಡುವ ಮೇಡಂ ಒರಟು ಮಾತನಾಡ್ತಾಲೆ ಅಂದರೆ ಅವಳು ನಾಗರಿಕತೆ ಇಲ್ಲದವಳೆ ? ನಾವೇಕೆ ಲಿಂಗ ಸೂಕ್ಷ್ಮತೆಯನ್ನು ಅರ್ಥೈಸಿ ಅವರನ್ನು ದುಡಿಕೊಳ್ಳುವುದಿಲ್ಲಾ?ಇದು ಕೆಲವು ಪುರುಷ ಅಧಿಕಾರಿಗಳಿಗೆ ಯಾಕೆ ಅರ್ಥವಾಗುವುದಿಲ್ಲಾ? ಗಂಡಸಿನಂತೆ ಒಬ್ಬ ಹೆಂಗಸು ಸಹ ತನ್ನ ಅಹಂಕಾರ, ಗುರುತಿಸಿಕೊಳ್ಳುವಿಕೆ, ತನ್ನ ಜಾಗ ಸ್ಥಾನಗಳಿಗೆ ತೊಂದರೆಯಾದಾಗ ತನ್ನದೆ ರೀತಿಯಲ್ಲಿ ಪ್ರತಿಭಟಿಸುತ್ತಾಳೆ.ಒಬ್ಬ ಪುರುಷ ಅಧಿಕಾರಿ ಮಹಿಳಾ ಸಹೊದ್ಯೋಗಿಯನ್ನು ದುಡಿಸಿಕೊಳ್ಳುವಾಗ ಅವಳಲ್ಲಿಯ ಪ್ರಾಕೃತಿಕ ಬದಲಾವಣೆಯನ್ನು ಗೌರವಿಸಿ ಅವಳೊಂದಿಗೆ ವ್ಯವಹರಿಸ ಬೇಕು.ಎಕೆಂದರೆ ಒಂದು ಹೆಣ್ಣು ಗಂಡಸಿಗಿಂತ ಕೆಲವೊಂದು ವಿಷಯದಲ್ಲಿ ಭಿನ್ನವಾಗಿರುತ್ತಾಳೆ.ಕೆಲವು ಸಲ ನೀವೇ ಗಮನಿಸಿ ಪ್ರತಿನಿತ್ಯ ಸೌಮ್ಯವಾಗಿ ಸಂತೋಷವಾಗಿ ನೆರೆಯವರನ್ನು ಮಾತನಾಡಿಸುವ ಒಬ್ಬ ಮಹಿಳಾ ಉದ್ಯೋಗಿ ಇದ್ದಕ್ಕಿದ್ದ ಹಾಗೇ ಸಿಡುಕುತ್ತಾಳೆ. ಸಣ್ಣ ಮಾತಿಗು ವಾದಿಸುತ್ತಾಳೆ, ಕಿರುಚಾಡುತ್ತಾಳೆ, ಕಲಸದಲ್ಲಿ ತಪ್ಪುಗಳನ್ನು ಮಾಡುತ್ತಾಳೆ ಮತ್ತೆ ಗೊಳೋ ಎಂದು ಅಳುತ್ತಾಳೆ ಇದು ಕೇವಲ ಆಫೀಸಿನ ಕಥೆಯಲ್ಲ, ನಮ್ಮ ನಮ್ಮ ಮನೆಗಳ ಕಥೆಯು ಹೌದು. ಹಾಗಾದಾಗ ಅದು ಆಕೆಯ ಮಾಸಿಕ ಚಕ್ರದ ದಿವಸಗಳು ಎಂದು ಒಬ್ಬ ಬುದ್ದಿವಂತನಾದವನು ಅರ್ಥೈಸಬೇಕು.ವೈಜ್ಞಾನಿಕವಾಗಿ ಆಕೆಯ ದೇಹದಲ್ಲಿ ಈಸ್ಟ್ರೋಜನ್ ಎಂಬ ಹಾರ್ಮೋನು ಖಾಲಿಯಾಗಿದೆ. ಆಕೆ ದೈಹಿಕವಾಗಿ ಬಲಹೀನಳು, ಮಾನಸಿಕವಾಗಿ ಕುಗ್ಗಿರುತ್ತಾಳೆ ಅಂತಹ ಸಮಯದಲ್ಲಿ ಮಡದಿಯನ್ನು ಸಹ ಬಹಳ ಎಚ್ಚರಿಕೆಯಿಂದ ಮಾತನಾಡಿಸಬೇಕು.ಈಸ್ಟ್ರೋಜನ್ ಹಾಮೋನು ಹೆಂಗಳೆಯರ ಪಾಲಿನ ಸಂಜೀವಿನಿ ಅಂತ ಹೇಳಬಹುದು ಅದು ಬಿಡುಗಡೆಯಾದಾಗ ಮಾತ್ರ ಆಕೆ ಲವಲವಿಕೆ ಪಡೆದುಕೊಳ್ಳುತ್ತಾಳೆ. ಅದಕ್ಕೆ ನಮ್ಮ ಹಿರಿಯರು ಬಹಳ ಹಿಂದೆ ಅಂತಹ ಸಮಯದಲ್ಲಿ ಆಕೆಗೆ ಬೇರೆ ಕೋಣೆಯಲ್ಲಿ ಇರಲು ಹೇಳಿ ಆಕೆಯನ್ನು ಮುಟ್ಟಬಾರದು ಎಂದು ಹೇಳುತ್ತಿದ್ದರು ಆದರೆ ಅದು ಬರ್‍ತಾ ಬರ್‍ತಾ ತುಂಬಾ ಮುಜುಗರದ ವಿಷಯವಾಯಿತ್ತೇನೋ ನಿಜ. ಆದರೆ ಆಕೆಗೆ ಒಂದು ವಿಶ್ರಾಂತಿ ಕೊಡದೆ ಹೋದರೆ ಹೇಗೆ ?ಅಂತಹ ಸಮಯದಲ್ಲಿ ಸಮಧಾನದಿಂದ ವರ್ತಿಸದ್ದಿದ್ದರೆ ಹೇಗೆ ?ನೋಡಿ ಎಲ್ಲಿ ಹೆಂಗಸರನ್ನು ದೇವರೆಂದು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರಂತೆ ಅದು ಕೇವಲ ಪುಸ್ತಕದ ಬದನೆಕಾಯಿ ಆಗಬಾರದಲ್ಲಾ ಎನಂತೀರಾ ?

Saturday, 2 July 2011

ಅದೇ ಆ ಟಿ.ವಿ..........!

ಕೆ.ಎಸ್.ಧನಂಜಯ, ಮಡಿಕೇರಿ.    ಮನುಷ್ಯ ತನ್ನ ಉದ್ದಾರವನ್ನು ತಾನೇ ಮಾಡಿಕೊಳ್ಳ ಬೇಕು ತನ್ನ ಅವನತಿಯನ್ನು ತಾನೇ ಮಾಡಿಕೊಳ್ಳಬಾರದು, ತನಗೆ ತಾನೆ ಮಿತ್ರನು ತಾನೇ ಶತ್ರುವು ಎಂಬ ಒಂದೇ ಒಂದು ತತ್ವದ ಅಡಿಯಲ್ಲಿ ಈ ಜಗತ್ತಿನಲ್ಲಿರುವ ಅದೆಷ್ಟು ಜನರ ಬದುಕು ನಿಂತಿದೆ.ಇದನ್ನು ಅರಿತು ಅದೆಷ್ಟು ಜನರು ಅಂತಹ ಘನ ಘೋರವಾದ ತಪ್ಪನ್ನು ಮಾಡಲು ಸ್ವತಃ ಬಯಸುವುದಿಲ್ಲ. ಇಂತಹ ತತ್ವಗಳಿಂದ ಅದೆಷ್ಟು ಜೀವಗಳು ಈಗಲೂ ದೂರವಿದೆ ಎಂದರೆ ತಿಳಿದಿಲ್ಲವೆಂದು ಹೇಳಬಹುದು. ಇಂದು ಈ ಸುಂದರ ಜಗತ್ತಿಗೆ ಕಾಲಿಡುವ ಅದೆಷ್ಟು ಮುಗ್ದ ಮನಸ್ಸಿಗೆ ಇಂತಹ ಚಿಂತನೆಗಳನ್ನು ತುಂಬುವ ಅಗತ್ಯತೆ ಇದೆ.
     ಚಿಂತೆ ಮಾಡಬಾರದು ಆದರೆ ಚಿಂತನೆಗಳನ್ನು ಮಾಡಲೇ ಬೇಕು, ಬದುಕನ್ನು ರೂಪಿಸುವವು ಈ ಚಿಂತನೆಗಳು ನಮ್ಮನ್ನು ಮನುಷ್ಯನ ಹತ್ತಿರಕ್ಕೆ ಕರೆದುಕೊಂಡು ಹೋಗುವಂತಹವುಗಳು ಇಂತಹ ಚಿಂತನೆಗಳು.ಚಿಂತೆ ಮತ್ತು ಚಿತೆ ಒಂದೇ ನಾಣ್ಯದ ಎರಡು ಬದಿ ಇದ್ದಂತೆ ಚಿಂತೆ ಮನುಷ್ಯನ ಆಂತರಿಕ ಬದುಕನ್ನು ಸುಟ್ಟರೆ ಚಿತೆ ದೇಹವನ್ನ ಸುಡುತ್ತದೆ. ಚಿಂತನೆ ಬದುಕನ್ನು ಗಟ್ಟಿಯಾಗಿಸುತ್ತದೆ. ಇದು ಒಬ್ಬ ವಿಧ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ನಿಂತಿರುವ ಚಿಂತನೆ. ಎಕೆ ಇಂತಹ ಅಮೂಲ್ಯವಾದ ಬದುಕು ಇಂತಹ ದುರಂತಕ್ಕೆ ಶರಣಾಗುತ್ತಿದೆ? ಬದುಕನ್ನು ನಿರೂಪಿಸಿ ಸಾಧಿಸ ಬೇಕಾದ ಏಕಮಾತ್ರ ಹೊಣೆಗಾರಿಕೆಯನ್ನು ಹೊರಲಾಗದ ನಾವು ಇತರರ ಒಳಿತನ್ನು,ಕೆಡುಕನ್ನು ಹೊರಲು ಸಾದ್ಯವೇ ? ನಮ್ಮವರು ಏಕೆ ಆತ್ಮಹತ್ಯೆಯ ಗುಲಾಮರಾಗುತ್ತಿದ್ದಾರೆ? ಇಂತಹ ಪ್ರಶ್ನೆಗಳು ಮೇಲಿಂದ ಮೇಲೆ ಬರುತ್ತದೆ. ಬಂದರೆ ಅದಕ್ಕೆ ಉತ್ತರವನ್ನು ಹುಡುಕುವುದರಲ್ಲಿ ಏಕಾಗ್ರತೆಯನ್ನು ಕೇಂದ್ರಿಕರಿಸಬೇಕು. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇಂತಹ ನೂರೆಂಟು ಕೆಟ್ಟ ಯೋಚನೆಗಳು ನಮ್ಮಗಳ ತಲೆ ತಿನ್ನುತ್ತಿರುತ್ತದೆ ಅದರೆ ನಾವು ಖುಷಿಯಾಗಿದ್ದಾಗ ಅದಕ್ಕೆ ಮಣೆ ಹಾಕುವುದಿಲ್ಲಾ. ಬದುಕಿಗೊಂದು ಆಘಾತ,ಚಿಂತೆ ಪ್ರವೇಶ ಪಡೆದಿದ್ದರೆ ನಾವು ಕ್ಷಣ ಕಾಲದಲ್ಲಿ ಅದಕ್ಕೆ ಬಹಳ ಕೆಟ್ಟದಾದ ಉತ್ತರವನ್ನು ನಮ್ಮ ಬದುಕಿನ ಪುಟಗಳಲ್ಲಿ ದಾಖಲಿಸಿ ಬಿಡುತ್ತೇವೆ. ಆ ಆಘಾತ ಮತ್ತು ಕೆಟ್ಟ ಚಿಂತನೆ ಧೀರ್ಘಕಾಲದಿಂದ ಕಾಡುತ್ತಿದ್ದರೆ ಮಾತ್ರ ಸಮಾಜದಲ್ಲಿ ಉತ್ತಮರು ಎಣಿಕೊಂಡವರೂ ಕೂಡ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದನ್ನು ದೂರದಿಂದ ಚಿಂತಿಸುವವರಿಗೆ ಇವರು ಅಪರಾದಿಗಳು, ಬದುಕನ್ನು ಮನ್ನಡೆಸಲು ಬಾರದವ  ಎಂದು ಹೇಳಿ ಬಿಡುತ್ತೇವೆ. ಸಮಸ್ಯೆ ಬರುವುದೆ ಮನುಷ್ಯನಿಗೆ ಹೊರತು ಮರಕಲ್ಲ, ಮನುಷ್ಯನ ಬದುಕು ಸಮಸ್ಯೆಯಲ್ಲಿ ಸಿಲುಕಿ ಸೊಗಸು ಕಾಣಬೇಕು ಎಂದು ಬಲ್ಲವರು ಹೇಳುತ್ತಾರೆ. ಹಾಗಾದರೆ ಅದರ ಸವಿಹೆ ಬೇರೆ, 
     ಆದರೆ ಮೊನ್ನೆ ಬೆಂಗಳೂರಿನಲ್ಲಿ ತನ್ನ ಬಿಸಿಯೂಟ ಮಾಡಿಕೊಡುವ ಸಹಾಯಕಿ ಸತ್ತಲೆಂದು ಆತ್ಮಹತ್ಯೆ ಮಾಡಿಕೊಂಡ ಎರಡನೆ ತರಗತಿ ಮಗು, ಆ ಮುಗ್ದ ಮನಸ್ಸನ್ನು ಅಪರಾದಿ ಹೆಡಿ ಎಂದು ಹೇಳಲು ಸಾಧ್ಯವೆ? ಇಲ್ಲ, ಆ ಮುಗ್ದ ಮನಸ್ಸು ಬೆಳೆದಿರಲಿಲ್ಲ,ಅದರಲ್ಲಿ ಮುಗ್ದತೆ ಇದೆ , ಚಿಂತನೆಗಳು ಹೇಗೆ ಬರಲು ಸಾಧ್ಯ ? ನಾವು ಮಕ್ಕಳನ್ನು ಅವರು ಕೇಳಿದೆಲ್ಲ ನೀಡಿ ಸಾಕಿ ಸಲಹುತ್ತೇವೆ ವಿಧ್ಯಭ್ಯಾಸ ನೀಡಿ ಮುನ್ನಡೆಸುತ್ತೇವೆ. ನಮ್ಮ ದ್ವೇಶ,ಅಸೂಹೆ, ಮನಸ್ತಾಪವನ್ನು ಆ ಮುಗ್ದ ಮನಸುಗಳ ಮುಂದೆ ತರೆದಿಡುತ್ತೇವೆ. ಆದರೆ ಚಿಂತನೆಗಳ ವಿಷಯಕ್ಕೆ ಬಂದಾಗ ನಾವು ಶೂನ್ಯರಾಗುತ್ತೇವೆ. ಅಂತಹ ಒಂದು ವಿಷಯಗಳನ್ನು ಹೇರುವುದರಲ್ಲಿ ನಾವು ಬಹಳ ಹಿಂದೆ ಬಿದ್ದಿದ್ದೇವೆ. ಆತನ ತಂದೆ-ತಾಯಿಯಂತೆ ಇನ್ನು ಅನೇಕರಿದ್ದಾರೆ ಪರಿಕ್ಷೆಯ ಸಮಯದಲ್ಲಿ ಟಿ.ವಿ.ನೋಡಬಾರದು ಇನೊಂದು ಮತ್ತೊಂದು ಮಗದೊಂದು ಎಂದು. ಅಷ್ಟಕ್ಕೆಲ್ಲಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಸಾಕಷ್ಟು ಇವೆ. ಆತ್ಮಹತ್ಯೆಯೆಂಬ ಕೆಟ್ಟ ಚಿಂತನೆಯನ್ನು ಆ ಮುಗ್ದ ಮನಸಿಗೆ ಹೇಳಿ ಕೊಟ್ಟವರಾರು? ಆತ್ಮಹತ್ಯೆಯನ್ನು ಈ ರೀತಿಯಾಗಿ ಮಾಡಬೇಕು ಅದರ ಮಾರ್ಗವನ್ನು ತಿಳಿಸಿದವರ್‍ಯಾರು? ಅದೇ ಆ ಟಿ,ವಿ ಸುಮಾರು ೧೦೦ ಕ್ಕೆ ೭೦ ಭಾಗದಷ್ಟು ಅಪಾಯಕಾರಿ ವಿಷಯವನ್ನು, ಕೆಟ್ಟ ವಿಷಯವನ್ನು ಧೀರ್ಘವಾಗಿ ಬಿಂಬಿಸುವ ಅದೇ ಟಿ.ವಿ. ದೂರದ ಅನೈತಿಕ ವಿಷವನ್ನು ಧೀರ್ಘವಾಗಿ ಬಿಂಬಿಸಿ ನೈತಿಕ ವಿಷಯವನ್ನು ಕಡಿತಗೊಳಿಸುವ, ಅಪರಾದ,ವಿಚಾರಪರ ಚಿಂತೆ ಇಲ್ಲದ ಧಾರವಾಹಿ, ಸಾಹಿತ್ಯವಿಲ್ಲದ ಹಾಡುಗಳು,ಮುಗ್ದ ಮನಸ್ಸನ್ನು ತಿರುಗಿಸುವ ಅಶ್ಲೀಲ ನೃತ್ಯಗಳು. ಹೌದು ಬದುಕಿನ ಅದೆಷ್ಟು ಸುಂದರ ಚಿಂತನೆಗಳನ್ನು ಮರೆಮಾಡಿ ಆತ್ಮಹತ್ಯೆಯನ್ನಾಗಲಿ, ಕೊಲೆಯನ್ನಾಗಲಿ ಹೀಗೆಯೇ ಮಾಡಬೇಕು ಎಂದು ತಿಳಿ ಹೇಳುವ ಸಿನಿಮಾಗಳು ಅದನ್ನು ಜನರ ಮನೆಗಳಿಗೆ, ಮನಗಳಿಗೆ ಪ್ರತಿನಿತ್ಯ ತಲುಪಿಸುವ ಮೂರ್ಖರ ಪೆಟ್ಟಿಗೆ. ಇದನ್ನು ನೋಡ ಬೇಡ ಎಂದು ಹೇಳಿದರೆ, ಇದಕ್ಕಾಗಿ ನಿನ್ನ ಜೀವನದ ಅಮೂಲ್ಯ ಸಮಯವನ್ನು ಕಳೆದುಕೊಳ್ಳ ಬೇಡ ಎಂದು ಹೇಳಿದರೆ ತಪ್ಪೆ? ಆತ್ಮಹತ್ಯೆ, ಛೇ.. ಇದು  ಏನೆ ಇರಲಿ ನಮ್ಮ ಮಕ್ಕಳಲ್ಲಿ ಮಾನವೀಯ, ವಿಚಾರಪರ, ಚಿಂತನೆಗಳನ್ನು ತುಂಬುವ ಅಗತ್ಯವಿದೆ. ಹೇಗೆಂದರೆ ಹಾಗೆ ಲಂಗು ಲಗಾಮಿಲ್ಲದೆ ಚಲಿಸುವ ಆ ಮನಸ್ಸುಗಳಿಗೆ ಚಿಂತನೆ ತುಂಬುವ ಅಗತ್ಯವಿದೆ ಪಠ್ಯದ ಜೊತೆ ಜೊತೆಯಲ್ಲಿ ವಿಚಾರ ಪರ ಚಿಂತನೆ ಬೆಳೆಸ ಬೇಕಾಗಿದೆ ಏನಂತೀರಾ ? ``