Wednesday 22 February 2012

ಮಾತಿನಿಂದಲೇ ನಗೆ, ಮಾತಿನಿಂದಲೇ ಹೊಗೆ.....

  ಧನಂಜಯ ಮಡಿಕೇರಿ

     ಹನ್ನೆರಡನೇ ಶತಮಾನದಲ್ಲಿ ಬಾಳಿ ಬದುಕಿದ ಒಬ್ಬ ಆದರ್ಶ ಪುರುಷ ನಮಗೆ ಇನ್ನು ನೆನಪಾಗಿ ಕಾಡುತ್ತಾರೆಂದರೆ  ಆ ವ್ಯಕ್ತಿಯ ಬದುಕು ಆದರ್ಶ ನಡತೆ ಹೇಗಿರಬೇಕು, ಮಿಗಿಲಾಗಿ, ಅವರ ಬದುಕಿನ ತತ್ವಗಳು ಇಂದು ಅಲ್ಲಿಯೂ ಇಲ್ಲಿಯೂ ಚರ್ಚೆಯಾಗುತಿವೆ, ಅವರ ಮೂಲದ ಪ್ರಶ್ನೆಯಾಗುತ್ತಿದೆ. ಋಷಿ  ಮೂಲವನ್ನೂ  ನದಿ ಮೂಲವನ್ನೂ, ಹೆಣ್ಣಿನ ಮೂಲವನ್ನೂ ಕೇಳಬಾರದು ಎಂಬ ವೇದವಾಕ್ಯ ಮೂಲೆ ಗುಂಪಾಗಿ ಪರಸ್ಪರ ಬಡಿದಾಟ ಸ್ವ-ಪ್ರತಿಷ್ಠೆ ಪ್ರಧಾನವಾಗುತ್ತಿರುವಾಗ ಇವೆಲ್ಲವನ್ನೂ ಯಾವುದೋ ಒಂದು ದೃಷ್ಟಿಯಿಂದ ದೂರದಿಂದ ನೋಡುತ್ತಿರುವ ಬಸವಣ್ಣ ಮಾತ್ರ ತಾನು ಪ್ರೀತಿಸಿದವರನ್ನು ಪ್ರೀತಿಸುವುದು ಮಾನವ ಧರ್ಮ, ತನ್ನ ಪ್ರೀತಿಸಿದವರನ್ನು ಪ್ರೀತಿಸುವದು ಪರಧರ್ಮ, ತನ್ನ ಬೈದು ನಿಂದಿಸುವವರನ್ನು ಪ್ರೀತಿಸುವದು ಮಹೋಧರ್ಮ, ಎಂದು ನಕ್ಕು ಸುಮ್ಮನಾಗಿರಬಹುದು ಬಸವಣ್ಣ ಸಾಧಿಸಿದ್ದು ಇಂತಹ ಮಹೋಧರ್ಮವನ್ನೇ. ಬೈದು ನಿಂದಿಸುವವರಿಗೆ ಮಹಾತ್ಮರು ಯಾವಾಗಲು ತಮ್ಮ ಹೃದಯದಲ್ಲಿ ಸ್ಥಾನ ಮೀಸಲಿಟ್ಟಿರುತ್ತಾರೆ.
ಅಂತಹ ದಾರ್ಶನಿಕರು ಈ ದೇಶದಲ್ಲಿ ಬಾಳಿ ಹೋಗಿದ್ದಾರೆಂದು ನಂಬಿರುವ ಜನ ನಾವು ಹಾಗೂ ಅದಕ್ಕಾಗಿ ಕೆಲವು ಇತಿಹಾಸ ಪುರಾವೆಗಳು ಸಿಕ್ಕುತ್ತವೆ. ಮನುಷ್ಯ ಇನ್ನೊಬ್ಬರ ಮೇಲೆ ದ್ವೇಷ ಸಾಧಿಸಿದರೆ ತನಗಾಗುವ  ಹಾನಿಯೇ ಹೆಚ್ಚು ಆದರೆ ಇಂದಿನ ಆಧುನಿಕ ಸಮಾಜದಲ್ಲಿ “ಹಾನಿ” ಎಂಬುವದು ಪ್ರಚಾರತೆಯ ಪಾಲಾಗುತ್ತಿದೆ. ಹನ್ನೆರಡನೆಯ ಶತಮಾನದಲ್ಲಿ ನಡೆದ ಈ ವಿಚಾರ ಕ್ರಾಂತಿ ಇಪ್ಪತೊಂದನೆಯ ಶತಮಾನದ ಈ ಸಮಾಜಕ್ಕೂ ಆದರ್ಶವಾದದ್ದು ಎಂದಾದರೆ ಅದು ಬಸವಣ್ಣನವರ ವ್ಯಕ್ತಿತ್ವವನ್ನೂ ಎತ್ತಿ ತೋರಿಸುತ್ತದೆ. ಮಹಾತ್ಮರು ಸಮಾಜದಲ್ಲಿ ಮನುಷ್ಯ ಹೇಗಿರಬೇಕೆಂಬುದನ್ನು ಕಲಿಸುತ್ತಾರೆ, ಹಾಗೆ ಬಾಳುತ್ತಾರೆ, ಮದ್ಯಮರು ಆಡುತ್ತಾರೆ,ಅಧಮರು ಮಾತನಾಡುತ್ತಾರೆ  ಮಾಡುವದಿಲ್ಲ. ಬಸವಣ್ಣನವರು ಈ ಉತ್ತಮರಲ್ಲಿ ಒಬ್ಬರು  ಅವರ ವಚನಗಳು ಅವರಂತೆಯೇ ಸತ್ವವನ್ನು ಬಿಂಬಿಸುವ ಕೈಗನ್ನಡಿಗಳು.
ಸಮಾಜದಲ್ಲಿಯ ಏರು ಪೇರು ಅವರಿಗೆ ಅಸಹನೀಯ ಅವುಗಳನ್ನು ಹೋಗಲಾಡಿಸುವ ಸಲುವಾಗಿ ಹಗಲಿರುಳು ಪರಿಶ್ರಮಿಸಿದ್ದಾರೆ. ಇದಕ್ಕಾಗಿ ವೇದಶಾಸ್ತ್ರಗಳಲ್ಲಿರುವ ಲೋಪ ದೋಷಗಳನ್ನೂ ಎತ್ತಿ ಹೇಳುವುದಕ್ಕೂ ಸಿದ್ದರಿದ್ದಾರೆ. ಇದು ಅವರ ಧೀರತನ ಅಂತಹ ಒಬ್ಬ ಧೀಮಂತ ವ್ಯಕ್ತಿಯನ್ನು ವಿಶ್ವದ ಅತಿದೊಡ್ಡ ಜಾತ್ಯತೀತ ರಾಷ್ಟ್ರದಲ್ಲಿ ಒಂದು ಜಾತಿಗೆ ಸಭಂದಪಟ್ಟವನೆಂದು ಚಿತ್ರಿಸಲು ಹೊರಟಿರುವದು ಮಾತ್ರ ತೀರಾ ಖಂಡನೀಯ. ನಿರಂಕಾರವೇ ಬಸವಣ್ಣನವರ ವ್ಯಕ್ತಿತ್ವ ವಿಕಾಸನದ ಮೂಲ ದ್ರವ್ಯ. ಇದು ಅವರ ಅನೇಕ ವಚನಗಳಲ್ಲಿ ಕಂಡು ಬರುತ್ತದೆ. ಅಹಂಕಾರಿಯಾದವನು ಎಂದು ದೊಡ್ಡವ ಎನಿಸಲಾರ. ಬಸವಣ್ಣನವರು ತಮ್ಮ ನಡೆ ನುಡಿ, ಆಚಾರ ವಿಚಾರಗಳಲ್ಲಿ ಇದನ್ನು ಎತ್ತಿ ತೋರ್ಪಸಿದ್ದಾರೆ. ಬಸವಣ್ಣನವರು ಅಂದಿನ ವ್ಯವಸ್ಥೆ ಬಗ್ಗೆ ಸಿಡಿಮಿಡಿಗೊಂಡ ವಿಷಯ ನಿರೂಪಣೆ ತೇಪ ಜೋಡಿಸಿದಂತಾಗಿದೆ ಬಸವಣ್ಣನವರನ್ನು ಮಹಾತ್ಮರ ಸಾಲಿನಲ್ಲಿ ನಿಲ್ಲಿಸಲು ಇರುವ ಅನೇಕ ಕಾರಣಗಳಲ್ಲಿ ದಲಿತರನ್ನು ಎತ್ತಿ ಹಿಡಿದಿರುವುದು ಪ್ರಮುಖವಾಗಿದೆ. ವರ್ಣಾಶ್ರಮವನ್ನೇ ನಂಬಿಕೊಂಡು ಅದನ್ನೇ ಬೋದಿಸುತ್ತಾ ಆಚರಿಸುತ್ತಾ ಬಂದವರಿಗೆ ಇದು ಒಂದು ಕೊಡಲಿಯ ಪೆಟ್ಟು.
          ಬಸವಣ್ಣನವರು ದಾರ್ಶನಿಕರಾಗಿ, ತತ್ವಜ್ಞಾನಿಗಳಾಗಿ, ಯುಗಪುರುಷರಾಗಿ, ಭಕ್ತಿ ಭಂಡಾರಿಯಾಗಿ, ಮಾನವತಾವಾದಿಯಾಗಿ, ಅಹಿಂಸಾವಾದಿಯಾಗಿ ಸಾವಿರಾರು ಸಂಘ ಸಂಸ್ಥೆಗಳು ಸಹಸ್ರಾರು ತಲೆಮಾರುಗಳಲ್ಲಿ ಮಾಡಲು ಅಸಾಧ್ಯವಾದ ಮಹಾನ್ ಸಾಧನೆಗಳನ್ನು ಬಸವಣ್ಣನವರು ತಮ್ಮ ಜೀವಿತ ಅವಧಿಯಲ್ಲಿ ಮಾಡಿ ತೋರಿಸಿದ್ದಾರೆ. ಇಂತಹ ಒಬ್ಬ ಮಹಾನ್ ವ್ಯಕ್ತಿಯನ್ನು ಜಾತಿಯ ಮೂಲದೊಂದಿಗೆ ಜೋತು ಹಾಕಿ ವಿಷಯವನ್ನೂ ಬೀದಿಯಲ್ಲಿ ಬಿಟ್ಟಿರುವುದು ಮಾತ್ರ ತೀರ ಖೇದಕರ. ಬಸವಣ್ಣ ನವರು ಅಂಥವರಿದರು ಇಂಥವರಿದ್ದರು ಅನ್ನು ಬಗ್ಗೆ ಒಂದು ಕೃತಿಗಳನ್ನೂ ತರುವುದು ಕೂಡ  ಉಚಿತವಲ್ಲ. ಸಮಾಜದ ಒಂದು ವರ್ಗವನ್ನು ಒಂದು ವ್ಯವಸ್ಥೆಯನ್ನೂ ತಿದ್ದಿ ಇಂದಿಗೂ ಜನರ ಮನಸಿನಲ್ಲಿ ಒಬ್ಬ ಧೀರ ವ್ಯಕ್ತಿ ಎನ್ನುವುದು ಮಾತ್ರ ಇಲ್ಲಿ ಪ್ರಸ್ತುತ. ತನ್ನದೆಲ್ಲವನ್ನೂ ಕಳೆದುಕೊಂಡು ತನ್ನ ಆಚಾರ ವಿಚಾರಗಳಿಗೆ ಶರಣು ಹೊಡೆದು ಇನ್ನೊಬ್ಬರ ಗುಲಾಮನಾಗಿ ಬದುಕುವುದರಲ್ಲಿ ಯಾವ ಪುರುಷಾರ್ಥವಿದೆ. ಸ್ವಾತಂತ್ರವಿಲ್ಲದ ವ್ಯಕ್ತಿ ಸಾಯುವ ಮುಂಚೆಯೇ ಸಾವಿರ ಸಾರಿ ಸತ್ತಂತೆ ಎನ್ನುವ ಬಸವಣ್ಣನವರು ಸದಾ ಗುಲಾಮಗಿರಿಯನ್ನು ತಿರಸ್ಕರಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹೀಗೆ ಎಲ್ಲಾ ಅರ್ಥಗಳಲ್ಲಿಯೂ ವ್ಯಕ್ತಿಯ ಸ್ವಾತಂತ್ರಕ್ಕೆ ಮೊದಲ ಪ್ರಾಶಸ್ತ್ಯ ನೀಡಿದ್ದಾರೆ.
ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ
ಆಡಿಹರಯ್ಯ, ಹಾಡಿಹರಯ್ಯ ಮನಬಂದ ಪರಿಯಲ್ಲಿ
ಲೋಕ ದಿಚ್ಚೆಯ ನಡೆವನಲ್ಲ, ಲೋಕದಿಚ್ಚೆಯ ನುಡಿದವನಲ್ಲ
          ಎಂಬ ಬಸವಣ್ಣನವರ ಮಾತು ಅಂದಿನ ಕಾಲದಲ್ಲಿ ಹೊಸ ಪರಿಸರಕ್ಕೆ ನಾಂದಿಯಾಯಿತು. ಒಟ್ಟಿನಲ್ಲಿ ನೂರು ಜನರಲ್ಲಿ ಒಬ್ಬ ಶೂರ, ಸಾವಿರ ಜನರಲ್ಲಿ ಒಬ್ಬ ಪಂಡಿತ, ಹತ್ತು ಸಾವಿರಕೊಬ್ಬ ವಾಗ್ಮಿ, ಹುಟ್ಟುತ್ತಾನೆ. ಆದರೆ ತ್ಯಾಗಿಗಳು ಹುಟ್ಟುವುದು ತುಂಬಾ ದುರ್ಲಭ ಎಂಬುವದರಲ್ಲಿ ಬಸವಣ್ಣನವರು ಬಾಳಿ ಹೋದ ಸಮಾಜದಲ್ಲಿ ನಾವಿದ್ದೇವೆ ಎಂದರೆ  ಅದಕಿಂತ ಸಂತೋಷ ಮತ್ತೇನಿದೆ. ವಸ್ತುಸ್ಥಿತಿಯೇ ಹೀಗಿರುವಾಗ ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ ಎಂದು ಸಾವನ್ನು ಸಹ ನಗು ಮುಖದಿಂದಲೇ ಆಹ್ವಾನಿಸುವ ಶೂರತನ, ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ಈ ಹಿನ್ನಲೆಯಲ್ಲಿ ಪ್ರಸ್ತುತ ಚರ್ಚೆ, ವಾದ ವಿವಾದಗಳಿಂದ ಬಸವಣ್ಣನವರಿಗೆ ಏನೂ ಹಾನಿ ಇಲ್ಲ. ಬಸವಣ್ಣನವರನ್ನು ಹೊಗಳುವುದು ತೆಗಳುವುದು ಕೇಳುವುದಕ್ಕೆ ಇಂದು ಬಸವಣ್ಣನವರು ಇಲ್ಲದಿರಬಹುದು ಆದರೆ ಅವರ ವಚನ ಸಾಹಿತ್ಯ ಇನ್ನು ಜೀವಂತವಾಗಿದೆ.. ಅದರ ಬಗ್ಗೆ ಚರ್ಚೆ ಅನಾವಶ್ಯಕ ಚರ್ಚೆ ಮಾಡಿದರೆ ಮಾತಿನಿಂದಲೇ ನಗೆ ಮಾತಿನಿಂದಲೇ ಹೊಗೆ ಅನ್ನದೆ ಬೇರೆ ದಾರಿ ಯಾವುದಯ್ಯ?


1 comment: