Friday, 16 January 2026

ನಾನು ಬದುಕುತ್ತೇನೆ  ಹೇಗೋ ಅಲ್ಲ, ಉತ್ತಮ ಪ್ರಜೆಯಾಗಿ

    
ಕೆ.ಎಸ್‌ .ಧನಂಜಯ

ಮಾದಕ ವಸ್ತು ಇತ್ತೀಚಿನ ದಿನಗಳಲ್ಲಿ ಯುವ ಜನತೆಯ ಮದ್ಯೆ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ. ಡ್ರಗ್ಸ್ಎನ್ನುವುದು ಒಂದು ಪದವಲ್ಲ ಅದು ಯುವ ಮನಸ್ಸಿನ ಮೇಲೆ ಬೀಳುವ ಅಂಧಕಾರದ ನೆರಳುಕ್ಷಣಿಕ ಸುಖದ ಭ್ರಮೆಯನ್ನು ತೋರಿಸಿ, ಶಾಶ್ವತ ನೋವಿನ ದಾರಿಯತ್ತ ಕರೆದುಕೊಂಡು ಹೋಗುವ ಮೌನ ವಂಚಕ. ಅದು ಸ್ನೇಹವಲ್ಲ, ಸಹಾಯವಲ್ಲ, ಆಶ್ರಯವೂ ಅಲ್ಲ ಮೆದುಳಿನ ನೈಸರ್ಗಿಕ ಬೆಳಕನ್ನು ಆರಿಸಿ
ಕೃತಕ ಹೊಳಪಿನಿಂದ ಬದುಕನ್ನು ಮಂಕಾಗಿಸುವ ಅಪಾಯಕಾರಿ ಮೋಸ.  ವಿದ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳು ಕಳೆದುಹೋದರೆ ಅವು ಮರಳಿ ಬರಲಾರವು  ಆದ್ದರಿಂದ, ಇಂದೇ ಒಂದು ದೃಢ ನಿರ್ಧಾರಕ್ಕೆ ಬನ್ನಿ

ಇಂದು ಡ್ರಗ್ಸ್ ಅನ್ನು ಕೆಲವರು ಟ್ರೆಂಡ್, ಸ್ಟೈಲ್, ಕೂಲ್ನೆಸ್  ಅಂತ ಕರೆಯುತ್ತಾರೆ. ಆದರೆ ನಿಜ ಹೇಳಬೇಕೆಂದರೆ  ಡ್ರಗ್ಸ್ ಒಂದು ನಿಧಾನವಾದ ಆತ್ಮಹತ್ಯೆ.  ಮಾದಕ ವಸ್ತು ಮಾರಾಟ, ಸೇವನೆ ಮತ್ತು ಸಾಗಾಟ NDPS ಕಾಯ್ದೆಯಡಿಯಲ್ಲಿ ಪೊಲೀಸರಿಗೆ FiR ದಾಖಲಿಸುವ ಅವಕಾಶವಿದೆ, 2 ವರ್ಷ ಸೆರೆವಾಸ ಎಲ್ಲವೂ ಇದರಲ್ಲಿ ಸೇರಿದೆ. ಮಾದಕ ವಸ್ತುಗಳು ಮನಸ್ಥಿತಿಯನ್ನು ಹದಗೊಳಿಸುವ ಅಥವಾ ಮೂಡ್ ಕೊಡುವ  ಸಾಧನವಂತು ಅಲ್ಲವೇ ಅಲ್ಲ. ಯುವಕನಾಗಿರುವುದು ಅಪಾಯ ತೆಗೆದುಕೊಳ್ಳುವುದಕ್ಕೆ ಅಲ್ಲ ಯುವಕನಾಗಿರುವುದು ಜವಾಬ್ದಾರಿ ಹೊರುವುದಕ್ಕೆ. ಡ್ರಗ್ಸ್‌ ಎನ್ನುವುದು  ಮೆದುಳಿನ ನೈಸರ್ಗಿಕ ರಾಸಾಯನಿಕವನ್ನು ಕುಗ್ಗಿಸಿ, ತಾತ್ಕಾಲಿಕ ರಾಸಾಯನಿಕದ ಮೂಲಕ ಮೆದುಳಿನ ಕಾರ್ಯವಿಧಾನವನ್ನು ಏರು ಪೇರು ಮಾಡುವ ಸಾಧನ. ಮಾದಕ ವಸ್ತು ಉಪಯೋಗಿಸುವುದರಿಂದ ಮೆದುಳಿನಲ್ಲಿ ಬದಲಾವಣೆ ಉಂಟಾಗಿ ಹೆಚ್ಚಾಗಿ ಬಳಸುವಂತೆ ಪ್ರಚೋದಿಸುತ್ತದೆ. ವ್ಯಸನಕ್ಕೆ ಒಳಾಗಾದ ವ್ಯಕ್ತಿಯನ್ನು ಗಂಭೀರ ಅಪರಾಧದಲ್ಲಿ ತೊಡಗುವಂತೆ ಮಾಡುತ್ತದೆ.  ವಾಹನ ಚಾಲನೆ ಮಾಡುವಾಗ ಡ್ರಗ್ಸ್ ತೆಗೆದುಕೊಂಡು ವಾಹನ ಚಾಲನೆ ಮಾಡುವುದು ಮಾತ್ರವಲ್ಲ ಅದು ವಿಪರೀತ ವೇಗವಾಗಿ ವಾಹನ ಚಾಲನೆ ಮಾಡುವುದಕ್ಕೂ ಅಪಘಾತವಾಗುವುದಕ್ಕೂ ಪ್ರೇರಪಿಸುವ ಎಲ್ಲಾ ಸಾಧ್ಯತೆ ಇರುತ್ತದೆ. ದುರ್ಬಲ ಮತ್ತು  ಕಡಿಮೆ ಮನೋ ಸಾಮರ್ಥ್ಯದ ವ್ಯಕ್ತಿಗಳು ಇದಕ್ಕೆ ಹೆಚ್ಚು ಬಲಿಯಾಗುತ್ತಾರೆ. ಸೋಮಾರಿತನ ಮತ್ತು ದೈನಂದಿನ ವರ್ತನೆಯಲ್ಲಿ ಬದಲಾವಣೆ, ಏಕಾಂಗಿತನ ಬಯಸುವುದು, ಸಮಾಜ ಮತ್ತು ಜನರಿಂದ ದೂರವೇ ಉಳಿಯುವುದು ಇದರ ಪ್ರಮುಖ ಲಕ್ಷಣ.

ಡ್ರಗ್ಸ್ ಸೇವನೆಯಿಂದ ಡೋಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ ಇದನ್ನು ಸೇವಿಸುವವರಲ್ಲಿ ಹೆಚ್ಚಾಗಿ ಮೆದುಳಿನ ಸಂದೇಶ ಪುನಾರವರ್ತನೆಯಾಗುತ್ತದೆ, ಅಂದರೆ ಅಪರಾಧಗಳನ್ನು ಮಾಡಲು ಪ್ರಚೋದನೆ. ಮೆದುಳಿನ ಸೂಕ್ಷ್ಮತೆ ಕಡಿಮೆಯಾಗುವುದು, ವಸ್ತು ಮತ್ತು ವಿಷಯದಲ್ಲಿ ಆಸಕ್ತಿ ಕಡಿಮೆಯಾಗುವುದು, ಆಲೋಚನಾ ಕ್ರಮದಲ್ಲಿ ಗೊಂದಲವಾಗುವುದಲ್ಲದೆ ಯಾವುದೇ ಪ್ರಯೋಜನವಿಲ್ಲ. ಕಲಿಕೆ, ನಿರ್ಧಾರ, ತೀರ್ಪು, ಮತ್ತು ವರ್ತನೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನಸ್ಸು ದುರ್ಬಲವಾಗುವುದರ ಜೊತೆಗೆ, ಖಿನ್ನತೆ, ಮತ್ತು ಸಮಾಜದ ತಿರಸ್ಕಾರಕ್ಕೆ ಒಳಗಾಗಿ, ತೀವ್ರ ತರಹದ ಖಾಯಿಲೆಗೆ ಒಳಗಾಗಬಹುದು. ಮಾತ್ರವಲ್ಲ ನಡುಗುವಿಕೆ, ನಿದ್ರೆ ಮತ್ತು ಹಸಿವಿನಲ್ಲಿ ಏರು ಪೇರು, ಮೂರ್ಛೆ ಹೋಗುವುದು, ತೂಕದಲ್ಲಿ ಏರಿಳಿತ, ಅತಿಯಾದ ಅಥವಾ ಅತೀರೇಕದ ಚಟುವಟಿಕೆಗಳು ಮಾಡುವಂತೆ ಪ್ರಚೋದಿಸುವ ಸಾಧ್ಯತೆಯೇ ಹೆಚ್ಚು.  ಮನೋ ವೈದ್ಯರ ಮತ್ತು ಆಪ್ತ ಸಮಾಲೋಚನೆ ಮೂಲಕ ಚಿಕತ್ಸೆ ಇದ್ದರೂ ವಿಧ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳು ಇದರಲ್ಲೇ ಕಳೆದು ಹೋದರೆ ಹೇಗೆ?

ವಿದ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳು ಕಳೆದುಹೋದರೆ ಅವು ಮರಳಿ ಬರಲಾರವು. ಡ್ರಗ್ಸ್‌ ಎನ್ನುವುದು ಒಂದು ಬಾರಿ ಸ್ಪರ್ಶಿಸಿದರೆ ಸಾಕು, ಆಲೋಚನೆಗಳ ಹಗ್ಗ ಸಡಿಲಗೊಳ್ಳುತ್ತದೆ. ಗುರಿಗಳು ಮಸುಕಾಗುತ್ತವೆ, ಕನಸುಗಳು ನಿಧಾನವಾಗಿ ಉಸಿರುಗಟ್ಟುತ್ತವೆ. ಡ್ರಗ್ಸ್ ಸುಖ ಕೊಡದು  ಅದು ಆಸೆ ಹುಟ್ಟಿಸುತ್ತದೆ ಆಸೆ ತೃಪ್ತಿ ಕೊಡುವುದಿಲ್ಲ  ಅದು ವ್ಯಸನವಾಗಿ ಬಂಧಿಸುತ್ತದೆ. ಅಂತಹ ವ್ಯಸನಕ್ಕೆ ಸಿಲುಕಿದ ವ್ಯಕ್ತಿ ಒಬ್ಬನೇ ಅಲ್ಲ, ಅವನೊಂದಿಗೆ ಕುಟುಂಬ, ಸಮಾಜ, ಭವಿಷ್ಯ ಎಲ್ಲವೂ ಗಾಯಗೊಳ್ಳುತ್ತವೆ. ಡ್ರಗ್ಸ್ ವಿರುದ್ಧ ಹೋರಾಟ ಕಾನೂನಿನ ವಿಷಯ ಮಾತ್ರವಲ್ಲ  ಅದು ಆತ್ಮಜಾಗೃತಿಯ ಆವಾಹನೆ.  ಆಗಾಗಿ ಇಂದೇ ಒಂದು ಉತ್ತಮವಾದ ನಿರ್ಧಾರಕ್ಕೆ ಬನ್ನಿ, ಮಾದಕ ವಸ್ತು ತೆಗೆದುಕೊಳ್ಳುವುದಿಲ್ಲ ಅದರ ಬಳಿಗೆ ಹೋಗುವುದಿಲ್ಲ ಎಂದು ಇಂದೇ ನಿರ್ಧರಿಸಿ ನಿಮ್ಮ ಬದುಕು ನಿಮ್ಮ ಕೈಯಲ್ಲಿದೆ, ನಾನು ಬದುಕುತ್ತೇನೆ ಹೇಗೂ ಅಲ್ಲ ಉತ್ತಮ ಪ್ರಜೆಯಾಗಿ ಎನ್ನುವುದನ್ನು ಇಂದೇ ಶಪಥ ಮಾಡಿ.

No comments:

Post a Comment