ಏನಾದರೂ ಆಗು, ಮೊದಲು ಮಾನವನಾಗು
ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ನುಡಿ ಪ್ರಚಲಿತದಲ್ಲಿದೆ
“ಪಂಪನಿಂದ ಕುವೆಂಪು ತನಕ” ಮನುಷ್ಯ ಜಾತಿ ತಾನೊಂದೇ ವಲಂ ಎಂದು ಘೋಷಿಸಿದ ಪಂಪ ವರ್ಣ ಗೋಪುರದ ತುತ್ತ
ತುದಿಯವನು ಅದರ ನಂತರ ಬಂದ ಬಸವಣ್ಣ ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಜಾತಿ ಪದ್ಧತಿಯನ್ನು ಮೇಲ್ತರದಳಷ್ಟೇ
ವಿರೋಧಿಸುತ್ತಾರೆ ಆದರೆ ಆಧುನಿಕ ಸಂದರ್ಭದಲ್ಲಿ ಜಾತಿ ಪದ್ಧತಿಯನ್ನು ವಿರೋಧಿಸಿ ನಿಷ್ಟೂರ ಅಭಿಪ್ರಾಯಗಳಿಂದ
ಕೊಚ್ಚಿ ಹಾಕಿದ ಕುವೆಂಪು ವರ್ಣ ಗೋಪುರದ ಅತ್ಯಂತ ಕೆಳಗಿನ ಶ್ರೇಣಿಯ ಮೊದಲ ಶೂದ್ರ ಲೇಖಕ. ಮನುಜ ಮತ ವಿಶ್ವಪಥ ಎಂಬ ಪರಿಕಲ್ಪನೆಯಲ್ಲಿ ವಿಶ್ವಮಾನವ ಸಂದೇಶವನ್ನು
ಹುಟ್ಟು ಹಾಕಿದ್ದ ಕುವೆಂಪು ಸರ್ವಕಾಲಕ್ಕೂ ಮೇಲ್‌ಸ್ತರದಲ್ಲಿ ನಿಲ್ಲುತ್ತಾರೆ.
ಕುವೆಂಪು ಮೌಲ್ಯಗಳ ಆವರಣದಲ್ಲಿ ಬದುಕಿದವರು,
ಬದುಕು ಅವರಿಗೆ ಅತ್ಯಂತ ಮಹತ್ವಪೂರ್ಣವಾದದ್ದು ಬದುಕಿನ ಸ್ವಚ್ಛಂದತೆಯನ್ನು ಬಿಡಿ ಬಿಡಿಯಾಗಿ ತೆಗೆದುಕೊಂಡವರಲ್ಲ,
ಸಮಗ್ರವಾದದ್ದು ಆತ್ಮೀಯವಾದದ್ದು ಏನಿದೆಯೋ ಅದೆಲ್ಲವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಬಾಳಿನ
ಸಮಸ್ತ ಸಂವೇದನೆಗಳಿಗೂ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ ನಿಸರ್ಗದ ಹುಚ್ಚು, ಅಸಮಾನತೆಯ ಕಿಚ್ಚು,
ಶೋಷಣೆಯ ಅಸಹ್ಯ, ಇವು ಅವರ ಬರವಣಿಗೆಯಲ್ಲಿ ಹೆಚ್ಚಾಗಿ ಗೋಚರಿಸುವಂತದ್ದು. ಮಾನವೀಯತೆ ಸರ್ವ ಸಮಾನತೆ
ಸಮತಾವಾದವನ್ನು ಬೋಧಿಸುವ ಕುವೆಂಪು, ವರ್ಗ ಸಂಘರ್ಷಕ್ಕಾಗಲಿ ಶೋಷಣೆಗಾಗಲಿ ತೀವ್ರ ವಿರೋಧಿ. ಎಲ್ಲರ ಬದುಕು ಸರಳವೋ ಸುಂದರವೂ ಆಗಬೇಕು ವಿಶ್ವ ಶಾಂತಿ ನೆಲೆಸಿರಬೇಕು
ಎಂದು ಅಪೇಕ್ಷಿಸುವ ಅವರು ಮನುಷ್ಯನನ್ನು ಕಿತ್ತು ತಿನ್ನುವ ಪರಿಸ್ಥಿತಿಯನ್ನು ಕಿಂಚಿತ್ತು ಸಹಿಸುತ್ತಿರಲಿಲ್ಲ.
ಅಜ್ಞಾನ ಅಂಧಕಾರಗಳು ತೊಲಗಿ ಬದುಕಿನ ಬಡತನ ನಿವಾರಣೆಯಾಗಿ ಎಲ್ಲರೂ ಒಂದಾಗಿ ಸೋದರ ಮನೋಭಾವದಿಂದ ಬಾಳಬೇಕು
ಎಂಬುವುದು ಅವರ ಜೀವನದ ಆಶಯವಾಗಿತ್ತು. ಆ ಮೂಲಕ ಅವರು ಸಾರ್ವಜನಿಕವಾಗಿ ಕೊಡುವ ಕರೆ ಇಂದಿಗೂ ರಿಂಗಣಿಸುತ್ತಿದೆ
ಸಿಲುಕದಿರಿ
ಮತವೆಂಬ ಮೋಹದ ಜ್ಞಾನಕ್ಕೆ
ಮತಿಯಿಂದ
ದುಡಿಯಿರೈ ಲೋಕ ಹಿತಕ್ಕೆ
ಆ
ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು
ಸೇರಿರೈ ಮನುಜ ಮತಕ್ಕೆ ವಿಶ್ವ ಪಥಕ್ಕೆ
ಜಾತಿ, ಮತ, ದೇವರುಗಳ ನೆಲೆಗಳಿಂದ ಹೊರಬಂದು,
ನಿಸರ್ಗದ ನೆಲೆಯಲ್ಲಿ ನಾವೆಲ್ಲರೂ ಮನುಜ ಮತವೆಂಬ ಒಂದೇ ಗುಂಪಿನವರು ಎಂಬ ವಾಸ್ತವವನ್ನು ಅರಿತುಕೊಂಡು,
ಪರಸ್ಪರ ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ ಬಾಳಬೇಕೆಂಬ ಆಶಯದೊಂದಿಗೆ ವಿಶ್ವ ಮಾನವ ಸಂದೇಶದಲ್ಲಿ
ಪಂಚ ಮಂತ್ರಗಳನ್ನು ಪ್ರತಿಪಾದಿಸುತ್ತಾರೆ ಪ್ರತಿಯೊಂದು ಮಗುವೂ ಹುಟ್ಟುತ್ತಲೆ - ವಿಶ್ವಮಾನವ. ಬೆಳೆಯುತ್ತಾ
ನಾವು ಅದನ್ನು 'ಅಲ್ಪಮಾನವನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು 'ವಿಶ್ವಮಾನವ'ನ್ನಾಗಿ ಮಾಡುವುದೇ
ವಿದ್ಯೆಯ ಕರ್ತವ್ಯವಾಗಬೇಕು. ಹುಟ್ಟುವಾಗ 'ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ,
ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ
ಅವನನ್ನು 'ಬುದ್ಧ'ನನ್ನಾಗಿ, ಅಂದರೆ ವಿಶ್ವ ಮಾನವನ್ನಾಗಿ, ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ,
ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ
'ಅನಿಕೇತನ'ರಾಗಬೇಕು. ಕುವೆಂಪುರವರ ಜಲಗಾರ ಮತ್ತು ಶೂದ್ರ ತಪಸ್ವಿ ಸಮಾಜದ ಅವೈಚಾರಿಕ ರೋಗಗ್ರಸ್ತ ಮನೋಭಾವಕ್ಕೆ
ಹಿಡಿದ ಕನ್ನಡಿಗಳಾಗಿವೆ. ಕುವೆಂಪು ವೈಜ್ಞಾನಿಕ ಸಮಾಜದ ತಳಹದಿಯ ಮೇಲೆ ತಮ್ಮ ವರ್ಗ ಸ್ವರೂಪ ಧೋರಣೆಗಳನ್ನ
ಬೆಳೆಸಿಕೊಂಡವರು, ಸರ್ವರಿಗೂ ಸಮಪಾಲು ಸಮ ಬಾಳು ಎನ್ನುವುದು ಅವರ ಬದುಕಿನ ಧ್ಯೇಯವಾಗಿತ್ತು. ಮಾನವ
ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ
ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ
ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ
ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊಂದು ಹೊಸ ಧರ್ಮಕ್ಕೆ
ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪು ಗುಂಪಾಗಿ ಒಡೆದಿವೆ; ಯುದ್ಧಗಳನ್ನು
ಹೊತ್ತಿಸಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲ ಕಾರಣವೆಂಬಂತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ
ಇನ್ನು ಮುಂದೆ ಮತ-ಮೌಢ್ಯ ಒಪ್ಪಿಗೆಯಾಗದು. ಆಚಾರ್ಯ ವಿನೋಬಾ
ಭಾವೆಯವರು ಹಿಂದೆ ಹೇಳಿದಂತೆ
'ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ- ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ.
ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; "ಮನುಜಮತ". ಆ ಪಥ ಈ ಪಥ ಅಲ್ಲ;
"ವಿಶ್ವಪಥ". ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ
"ಸರ್ವೋದಯ". ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; "ಸಮನ್ವಯ"ಗೊಳ್ಳುವುದು.
ಮಿತ ಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್
ದೃಷ್ಟಿಯಿಂದ ಕಾಣುವ "ಪೂರ್ಣದೃಷ್ಟಿ".
ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲ ಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆಸುವವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೆ ಸೇರದೆ, ಪ್ರತಿಯೊಬ್ಬನೂ ತಾನು ಕಂಡು ಕೊಳ್ಳುವ 'ತನ್ನ' ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು. ಯಾವ ಒಂದು ಗ್ರಂಥವೂ 'ಏಕೈಕ ಪರಮ ಪೂಜ್ಯ' ಧರ್ಮ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ 'ದರ್ಶನ'ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು ಸರ್ವಮತಗಳಿಗಿಂತಲೂ ಶುದ್ಧ ಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದದ್ದು ಆ ಗುರು ಈ ಆಚಾರ್ಯ ಆ ಧರ್ಮಶಾಸ್ತ್ರ ಈ ಮನಸ್ಮೃತಿ ಮೊದಲಾದವು ಏನೇ ಹೇಳಲಿ ಎಲ್ಲವನ್ನು ವಿಮರ್ಶಿಸುವ ಪರೀಕ್ಷಿಸುವ ಓರೇಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ. ಕುವೆಂಪು ಈ ನಾಡಿನ ಇತಿಹಾಸದಲ್ಲಿ ಈ ನಾಡ ನೆಲದ ಬದುಕಿನಲ್ಲಿ ಕೆಂಡದುಂಡೆಯಾಗಿ ನಿಸರ್ಗ ಪ್ರೀತಿ ಪೋಣಿಸಿದ ಹಸಿರ ದಂಡೆಯಾಗಿ ಸಮ ಸಮಾಜದ ಆಶಯವಾಗಿ ಯಾವತ್ತೂ ಇರುತ್ತಾರೆ. ಅವರ ತಕಾರಾರು ಇರುವುದು ಮೌಢ್ಯ ಅಜ್ಞಾನ ಮತ್ತು ಸಂಪ್ರದಾಯಗಳನ್ನು ಪ್ರಚಾರ ಮಾಡುತ್ತಾ ಸಾಮಾಜಿಕ ಅನಾರೋಗ್ಯವನ್ನು ಹರಡುತ್ತಿರುವವರ ವಿರುದ್ಧ. ಜಾತಿ ಮತಗಳು ಈ ದೇಶದ ಜನರ ಬದುಕಿಗೆ ಬಡಿದಿರುವ ಭೀಕರ ರೋಗಗಳು ವ್ಯಕ್ತಿಯನ್ನು ಪ್ರೀತಿಸಲು ಸಾಧ್ಯವೇ ಇಲ್ಲದಂತ ಮಾಡಿರುವ ಈ ಕೋಟೆಗಳನ್ನು ನೆಲಸಮ ಮಾಡಿದಾಗ ಮಾತ್ರ ಬದುಕು ಸುಂದರವಾಗಿರಲು ಸಾಧ್ಯ. ಅವರ ಮಾರ್ಗದರ್ಶಕ ಮಾತನ್ನು ನೆನೆಯುವ ಮತ್ತು ಅದರಂತೆ ನಡೆದುಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ ಆದ್ದರಿಂದ ಕುವೆಂಪು ಇಂದಿಗೂ ಎಂದಿಗೂ ಪ್ರಸ್ತುತವೆನಿಸುತ್ತಾರೆ.
No comments:
Post a Comment