ಮಾತಿನಾಚೆ ನಗುವ ಮಿಂಚ
ಹೇಗೆ ಹಿಡಿದು ತೋರಲಿ? 🥰🥰
ಎಷ್ಟೋ ವರ್ಷಗಳ ನಂತರವೂ, ನನ್ನ ಮನಸ್ಸಿನ ಒಂದು ನಿಜವಾದ ಮೂಲೆಯಲ್ಲಿ ನೀನು ಇಂದು ಕೂಡಾ ಮೃದುವಾಗಿ, ನಿಶ್ಶಬ್ದವಾಗಿ ಬದುಕಿರುವೆ. ನಮ್ಮ ದಾರಿಗಳು ಒಂದೇ ದೀಪದಿಂದ ಬೆಳಗಿದವು, ನಂತರ ಬೇರೆ ದಿಕ್ಕಿನಲ್ಲಿ ಹರಡಿಕೊಂಡವು. ಆದರೆ ಬೆಳಕು ಒಂದೇ ಆಗಿದ್ದರಿಂದ, ದೂರವಾದರೂ ನಾನು ನಿನ್ನ ನೆರಳನ್ನು ನನ್ನೊಳಗೆ ಎಂದೂ ಕಳೆದುಕೊಂಡಿರಲಿಲ್ಲ. ಜಗತ್ತು ನಮ್ಮಿಬ್ಬರ ಭೇಟಿಗೆ ಎಷ್ಟು ಬಣ್ಣಗಳು, ಎಷ್ಟು ಅರ್ಥಗಳು, ಎಷ್ಟು ವ್ಯಾಖ್ಯಾನಗಳನ್ನು ನೀಡಲಿ ನಾವು ಎನಾಗಿದ್ದೆವೋ, ಹೇಗಿದ್ದೇವು, ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬರಿಗೊಬ್ಬರು ಏನು, ಹೇಗೆ ನಡೆದುಕೊಂಡೆವು ಎಂದು ನಮ್ಮಿಬ್ಬರಿಗಷ್ಟೇ ಗೊತ್ತು. ಪ್ರತಿ ದಿನ ನಿನ್ನ ನೆನಪು ನನ್ನ ಹೃದಯಕ್ಕೆ ಅಂಟಿಕೊಂಡೇ ಇರುತ್ತದೆ. ಆದರೆ ಈ ನೆನಪುಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಹಂಚಿಕೊಂಡರೆ ನೋವು ಹೆಚ್ಚುತ್ತದೆ, ಮೌನಿಸಿದ್ದರೆ ಹೃದಯ ತುಂಬಿ ಕಕ್ಕುತ್ತದೆ.
ಸಾಕಷ್ಟು ಬಾರಿ ನೀನು ನಮ್ಮ ಮನೆಗೆ ಬಂದು ಉಳಿದು ಹೋಗಿದ್ದೆ. ಆ ದಿನಗಳ ಬೆಳಕು ಇಂದಿಗೂ ನನ್ನ ಮನೆಯಲ್ಲಿ ಜೀವಂತವಾಗಿದೆ. ನಿನ್ನ ಜೊತೆ ಕೈ ಕೈ ಹಿಡಿದು ನದಿಯ ದಡದಲ್ಲಿ ನಡೆದ ಆ ಹಾದಿಗಳುಇಂದಿಗೂ ನನ್ನ ಜೀವನದ ಅತ್ಯಂತ ಪವಿತ್ರ ನೆನಪುಗಳೇ. ನೀನು ಜಗತ್ತಿಗೆ ಕಣ್ಮರೆಯಾಗಿರಬಹುದು ಆದರೆ ನಿನ್ನ ಸ್ಪರ್ಶ, ನಿನ್ನ ಮಾತು ನಿನ್ನ ನೋಟ ಪ್ರತಿ ಕ್ಷಣವೂ ನನ್ನೊಳಗೆ ಜೀವಂತ. ಹೇಗೆ ಮರೆಯಲಿ ನಿನ್ನ ? ಹೇಗೆ ಮರೆಯಲಿ ನಿನ್ನೊಡನೆ ಕಳೆದ ಆ ಜೀವನದ ಚಿಕ್ಕ ಚಿಕ್ಕ ಅಮೂಲ್ಯ ಕ್ಷಣಗಳನ್ನು ? ನಿನ್ನನ್ನು ಪ್ರೀತಿಯಿಂದ, ಕಣ್ಣೀರಿನಿಂದ, ಸ್ಮರಣೆಯಿಂದ ಸ್ಮರಿಸುತ್ತಾ ಈ ಸಾಲುಗಳನ್ನು ಬರೆಯುತ್ತಿರುವೆ ಬರೆಯುವಾಗ ನನ್ನ ಕಣ್ಣಾಲಿಗಳು ತುಂಬಿ ಬರುತ್ತಿದೆ. ಎಷ್ಟೋ ವರ್ಷಗಳ ನಂತರವೂ, ನನ್ನ ಮನಸ್ಸಿನ ಒಂದು ನಿಜವಾದ ಮೂಲೆಯಲ್ಲಿ ನೀನು ಇಂದು ಕೂಡಾ ಮೃದುವಾಗಿ, ನಿಶ್ಶಬ್ದವಾಗಿ ಬದುಕಿರುವೆ , ಜಗತ್ತಿನ ಪಾಲಿಗೆ ನೀನು ಸತ್ತಿರಬಹುದು ನನಗೆ ನನ್ನೋಳಗೆ ಇನ್ನೂ ಜೀವಂತ ಇರುತ್ತೀಯ. ಪ್ರೀತಿಯೆಂದರೆ ಒಂದೇ ದಾರಿಗೆ ನಡೆಯಬೇಕೆಂಬ ನಿಯಮವಿಲ್ಲ ಎಂಬುದನ್ನು ನನ್ನ ಜೀವನವೇ ಆಗಿದ್ದಾಗ ನೀನೆ ನನಗೆ ಹೇಳಿಕೊಟ್ಟ ಪಾಠ. ಬಾಲ್ಯದಲ್ಲಿ ಹಿಡಿದ ನಿನ್ನ ಕೈಯ ಬಿಸಿಯ ಸ್ಪರ್ಶ ಇನ್ನು ಹಾಗೇಯೆ ಇದೆ ಇಂದಿಗೂ ನೀನು ನನ್ನ ಕೈ ಬಿಟ್ಟಿಲ್ಲ ಎನ್ನುವ ನೆನಪು ಕಾಲ ಬದಲಾಯಿತು, ಜೀವನ ನಮ್ಮನ್ನು ಬೇರೆ ಮನೆಗಳಿಗೆ, ಬೇರೆ ಕರ್ತವ್ಯಗಳಿಗೆ ಕರೆದೊಯ್ದಿತು, ನಾನೂ ನನ್ನ ಬದುಕನ್ನು ಕಟ್ಟಿಕೊಂಡೆ,ನೀನೂ ನಿನ್ನ ಸಂತೋಷವನ್ನು ಹುಡುಕಿಕೊಂಡೆ. ಆದರೂ ಹೃದಯದ ಮೌನ ಮೂಲೆಯಲ್ಲಿ ನಾವು ಇಬ್ಬರೂ ಪರಸ್ಪರ ಬಾಗಿಲು ತೆರೆದಿಟ್ಟಿದ್ದೆವು ಬರುವೆಯಾ ಎಂಬ ನಿರೀಕ್ಷೆಗೆ ಅಲ್ಲ,ಬರಲಿಲ್ಲ ಎಂಬ ಮೌನ ಗೌರವಕ್ಕೆ. ಇಂದು ನೀನು ಈ ಲೋಕದಲ್ಲಿಲ್ಲವೆಂಬ ಸುದ್ದಿ ಹೃದಯಕ್ಕೆ ಸುಳಿಯಂತೆ ತಾಗಿದಾಗ, ನಾನು ಕಣ್ಣೀರಲ್ಲಿ ಹುಡುಕಿದ್ದು ನಿನ್ನ ನೋವಲ್ಲ ನಿನ್ನ ಸಂತೋಷ ಎಂದಿಗೂ ನಾನು ಬಯಸಿದ್ದು ನೀನು ಎಲ್ಲೋ ಒಂದು ಕೋಣೆಯಲ್ಲಿ ಶಾಂತವಾಗಿರು ಎಂದು ಆದರೆ ಇಂದು ನಿನ್ನದಾಗಿ ಉಳಿದಿರುವುದು ಒಂದು ಮೌನ ಪ್ರೀತಿ, ಒಂದು ಮಧುರ ನೆನಪು, ಮತ್ತು ನನ್ನ ಹೃದಯದ ಒಳಗಿನ ಶಾಶ್ವತ ಸ್ಥಳ. ನೀನು ಇಲ್ಲದೆ ಜೀವನ ಮುಂದುವರಿದರೂ,ನಿನ್ನ ನೆನಪುಗಳಿಲ್ಲದೆ ಅದು ಸಂಪೂರ್ಣವಲ್ಲ. ನೀನು ಬದುಕಿದ್ದ ದಿನಗಳು ಪ್ರೀತಿಯ ಅರ್ಥ ಕಲಿಸಿದವು. ನೀನು ಇಲ್ಲದ ದಿನಗಳು ನೆನಪಿನ ಮೌಲ್ಯ ಕಲಿಸುತ್ತಿವೆ. ಇಂದು ನೀನು ಕಣ್ಣಿಗೆ ಕಾಣದಿದ್ದರೂ ನಿನ್ನ ಪ್ರೀತಿ ಮತ್ತು ನೀನು ಎಂದಿಗೂ ಮಸುಕಾಗುವುದಿಲ್ಲ.
ನೀ ಬಂದೆ ಬೆಳಗಿದೆ, ರೂಪ ಕೊಟ್ಟೆ ನಂತರ ಶಾಂತವಾಗಿ ಮತ್ತೊಂದು ಲೋಕದತ್ತ ಹೊರಟು ಹೋದೆ. ನಾವು ಹಂಚಿಕೊಂಡ ಮೌನ ಕ್ಷಣಗಳು, ನಗು, ನೋವುಗಳು ಇವೆಲ್ಲಾ ಈಗ ನನ್ನ ಆತ್ಮದ ಒಂದು ಭಾಗ. ನಿನ್ನನ್ನು ಈ ಲೋಕದಿಂದ ಕರೆಯುವ ದೇವರ ನಿರ್ಧಾರವನ್ನು ಎಂದೂ ನಾನು ಪ್ರಶ್ನೆ ಮಾಡಲ್ಲ ನೀನು ಈ ಜಗತ್ತಿನಿಂದ ನಿರ್ಗಮಿಸಿದನ್ನು ನಾನು ದುಃಖದಿಂದ ಅಲ್ಲ ಭಕ್ತಿಯಿಂದ ಸ್ವೀಕರಿಸುತ್ತೇನೆ ಬಹುಶಃ ನಿನ್ನ ಆತ್ಮಕ್ಕೆ ಈ ಮನುಷ್ಯ ಜೀವನ ಸಾಕಾಗಲಿಲ್ಲ ಎನಿಸುತ್ತಿದೆ , ಆ ದೇಹ ಇನ್ನೊಂದು ಶಾಂತಿಯ ದಾರಿಯನ್ನು ಬಯಸಿತೋ ಎನೋ ? ಅದನ್ನು ನಾನು ಗೌರವಿಸುತ್ತೇನೆ. ಇಷ್ಟೂ ತನಕ ಎಲ್ಲೀಯೋ ಸುಖದಿಂದ ಇದ್ದೀಯ ಎನ್ನುವ ಖುಷಿ ಇತ್ತು ಇನ್ನೂ ಆ ಖುಷಿಯೂ ಇಲ್ಲ, ನೀನು ಇಲ್ಲವೆಂಬ ಸುದ್ದಿ ಕೇಳಿದಾಗ ಅದು ನನ್ನನ್ನು ನೆಲಕ್ಕೊರಗಿಸಿತು ಆದರೆ ಅಲ್ಲೇ ಬಿದ್ದಿದ್ದಾಗ ಆಕಾಶದತ್ತ ನೋಡಿದ ಕ್ಷಣದಲ್ಲಿ ಒಂದು ಸ್ಪಷ್ಟತೆ ಒಳಗೆ ಮೂಡಿತು ಪ್ರೀತಿ ಎಂದರೆ ದೇಹದ ವಿಷಯವಲ್ಲ ಅದು ಆತ್ಮದ ಸಂಬಂಧ, ಪರಸ್ಪರ ದೇಹಕ್ಕೆ ಯಾವತ್ತೂ ನಾವು ಆದ್ಯತೆ ನೀಡಲಿಲ್ಲ ಎನ್ನುವುದು ಬೇರೆ ಮಾತು. ಇಂದೂ ಕೂಡ ರಾತ್ರಿ ಗಾಳಿ ಮೃದುವಾಗಿ ಸ್ಪರ್ಶಿಸಿದಾಗ ಅದರೊಳಗೆ ನಿನ್ನ ಮೌನ ಸಾನ್ನಿಧ್ಯವಿದೆ ಪ್ರಾರ್ಥನೆಗೆ ಕೈ ಜೋಡಿಸಿದಾಗ ನಿನ್ನ ನೆನಪಿನ ದೀಪ ಬೆಳಗುತ್ತದೆ ನಕ್ಷತ್ರಗಳನ್ನು ನೋಡಿದಾಗ ನಿನ್ನ ಶಾಂತ ನಗು ಅದರ ಬೆಳಕುಗಳಲ್ಲಿ ಕರಗುತ್ತದೆ. ನೀನು ಈಗ ದೇವರ ಅಂಗಳದಲ್ಲಿ, ಲೋಕದ ನೋವುಗಳಿಂದ ದೂರ,ಶುದ್ಧ ಬೆಳಕಿನ ನಡುವೆ ಅಲ್ಲಿ ನಿನ್ನ ಆತ್ಮ ಶಾಂತವಾಗಿರುವ ವಿಚಾರ ನನ್ನ ಮನಕ್ಕೆ ಆರಾಮ ಈ ಜನ್ಮ ನಮ್ಮನ್ನು ದೂರವಿಟ್ಟರೂ, ಮತ್ತೊಂದು ಜನ್ಮದ ಮಾರ್ಗದಲ್ಲಿಈ ಪ್ರೀತಿಯ ಬೆಳಕು ಮತ್ತೆ ನಮ್ಮನ್ನು ಸೇರ್ಪಡಿಸಬಹುದು ಭಗವಂತನ ಇಚ್ಚೆಯಂತೆ ಇಂದಿಗೂ ನೀನು ನನ್ನ ಪ್ರಾರ್ಥನೆಗಳಲ್ಲಿ, ನನ್ನ ಮೌನಗಳಲ್ಲಿ, ನನ್ನ ಹೃದಯದ ನಿಶ್ಶಬ್ದ ದೇವಾಲಯದಲ್ಲಿಎಂದೂ ಬೆಳಗುತ್ತಿರುವೆ ನಿನಗಾಗಿ ನಿನ್ನ ನೆನಪಿಗಾಗಿ ನಾವು ಹಂಚಿಕೊಳ್ಳದ ಬದುಕಿಗಾಗಿ ಪ್ರೀತಿಯೊಂದು ನಿರಂತರ ಕಾಯುತ್ತೆ ಸುಮ್ಮನೆ ನಗುತ್ತಾ.
No comments:
Post a Comment