ಧನಂಜಯ ಮಡಿಕೇರಿ
ಸೈನ್ಯ ,ಚಾಂಪಿಯನ್ ಟ್ರೋಫಿ
ಮತ್ತು ಬಿಗ್ ಬಾಸ್ ಈ ಮೂವರಲ್ಲಿ ಯಾರು ಹಿತವರು ಎಂಬ ಪ್ರಶ್ನೆ ಉದ್ಭವವಾದರೆ ನಿಮ್ಮ ಉತ್ತರ ಏನು?
ಆದರೆ ನನ್ನ ಉತ್ತರ ಮಾತ್ರ ಸೈನ್ಯ. ಇತ್ತೀಚಿಗೆ ಮುಗಿದ ಚಾಂಪಿಯನ್ ಟ್ರೋಫಿ ಕ್ರಿಕೇಟ್,
ಇತ್ತೀಚಿಗೆ ಮುಗಿದ ಈ ಟಿ.ವಿ ಕನ್ನಡ ವಾಹಿನಿಯ ಬಿಗ್ ಬಾಸ್ ಇವು ಮೂರು ವಿಷಯಗಳನ್ನು ಗಮನಿಸಿದಾಗ
ನನಗೊಂದು ಪ್ರಶ್ನೆ ಉದ್ಭವವಾಯಿತು ಅದನ್ನು ನಿಮ್ಮ ಮುಂದೆ ಇಟ್ಟು ಬಿಡುವ ಎನ್ನುವ ಕಸರತ್ತು ಈ
ಲೇಖನ.
ನಮ್ಮ ಈ ಟಿ.ವಿ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಬಿಗ್ ಬಾಸ್ ಕಾರ್ಯಕ್ರಮ ಕನ್ನಡದ ಪ್ರಥಮ
ರಿಯಾಲಿಟಿ ಶೋ ಎಂಬ ಹೆಗ್ಗಳಿಕೆ ಈ ವಾಹಿನಿಗೆ ಇದ್ದರೂ, ಸಮಾಜಕ್ಕೆ ಈ ಕಾರ್ಯಕ್ರಮದ ಮೂಲಕ ಸಂದೇಶ ಇಲ್ಲದೇ ಹೋದರು ಈ ಕಾರ್ಯಕ್ರಮದ ಮೂಲಕ ಅದರ
ಟಿ.ಆರ್.ಪಿ ( ಟೆಲಿವಿಷನ್ ರೇಟಿಂಗ್ ಪಾಯಿಂಟ್) ಜಾಸ್ತಿಯಾಗಿದ್ದು ಮಾತ್ರ ಸುಳ್ಳಲ್ಲ. ಕೆಲವು
ದೃಶ್ಯಗಳನ್ನು ನಾನು ಕೂಡ ವೀಕ್ಷಣೆ ಮಾಡಿದ್ದೇನೆ ನನ್ನಂತೆ ಹಲವರು ವೀಕ್ಷಿಸಿ ಇದೆಂತಾ ಕಾರ್ಯಕ್ರಮ
ಎನ್ನುತ್ತಾ ಸಂಪೂರ್ಣ ಅಧ್ಯಾಯ ಮುಗಿಯುವವರೆಗೆ ನೋಡಿದವರು ಅದೇಷ್ಟೋ ಮಂದಿ ನಮ್ಮ ಮಧ್ಯೆ ಇದ್ದಾರೆ. ಒಟ್ಟಿನಲ್ಲಿ ಸಮಾಜಕ್ಕೆ
ಸಂದೇಶವಿಲ್ಲದೆ ಮುಕ್ತಾಯಗೊಂಡ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಎನ್ನುವುದು ಮಾತ್ರ ಸುಳ್ಳಲ್ಲ.
ಇನ್ನು ಇತ್ತೀಚೆಗೆ ಮುಕ್ತಾಯಗೊಂಡ
ಚಾಂಪಿಯನ್ ಟ್ರೋಫಿ ಕ್ರಿಕೇಟ್, ಭಾರತದ ಮಟ್ಟಿಗೆ ಕ್ರಿಕೇಟ್ ಒಂದು ಜನಪ್ರಿಯ ಕ್ರೀಡೆ ಏನೋ ಸರಿ, ಅದಕ್ಕಿರುವ ಜನ ಬೆಂಬಲ ಬೇಡವೆಂದರೂ ನಮ್ಮ ದೇಶದಲ್ಲಿ ಅದಕ್ಕಾಗಿ ತುಡಿಯುವ ಮಿಡಿಯುವ ಸಾಕಷ್ಟು
ಮಸಸ್ಸುಗಳು ನಮ್ಮ ಮಧ್ಯೆ ಇವೇ. ಅದು ಪರೋಕ್ಷವಾಗಿ ಆ ಕ್ರೀಡೆಗೆ ಇರುವ ಜನಪ್ರಿಯತೆಯು ಹೌದು. ಒಂದು
ಕಾಲದಲ್ಲಿ ಜಂಟಲ್ ಮ್ಯಾನ್ ಗೇಮ್ ಎಂಬ ಹೆಗ್ಗಳಿಕೆ ಇದ್ದ ಕ್ರಿಕೇಟ್ ಕ್ರಮೇಣವಾಗಿ ಆ ಪಟ್ಟವನ್ನು
ಕಳೆದುಕೊಂಡರು, ಅದರ ಜನಪ್ರಿಯತೆ ಮಾತ್ರ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿರುವುದು ಕೂಡ
ಅಷ್ಟೇ ಸತ್ಯ. ಕೆಲವರಿಗೆ ಕ್ರಿಕೇಟ್ ಜೂಜು, ಮನೋರಂಜನೆ ಮತ್ತೆ ಕೆಲವರಿಗೆ ಅದೊಂದು ಸೋಮಾರಿಗಳನ್ನು
ಸೃಷ್ಟಿಸುವ ಕ್ರೀಡೆ ಹಲವರಿಗೆ ಅದೊಂದು ಧರ್ಮ. ಒಟ್ಟಿನಲ್ಲಿ ಅವರವರ ಭಾವಕ್ಕೆ ಭಕುತಿಗೆ.
ಇತ್ತೀಚೆಗೆ ಮುಕ್ತಾಯವಾದ ಚಾಂಪಿಯನ್ ಟ್ರೋಫಿ
ಕ್ರಿಕೇಟ್ ಮ್ಯಾಚ್ ಫಿಕ್ಸಿಂಗ್ ಮತ್ತು ಹಗರಣಗಳಿಂದ ಕುಸಿದ ಭಾರತೀಯ ಕ್ರಿಕೇಟ್ ಗೆ ಚೇತರಿಕೆ ನೀಡುವುದರೊಂದಿಗೆ ಮತ್ತಷ್ಟು ಅದರ
ಮಾರುಕಟ್ಟೆಯನ್ನು ಹೆಚ್ಚಿಸಿಕೊಂಡಿದೆ ಎನ್ನಬೇಕು.
ಇವೆರಡನ್ನೂ ಅವಲೋಕಿಸಿದರೆ
ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಮನರಂಜನೆಗೆ ಸೀಮಿತವಾಗಿ ಸಮಾಜಕ್ಕೆ ಯಾವುದೇ ಸಂದೇಶವಿಲ್ಲದ
ಕಾರ್ಯಕ್ರಮವಾದರೆ, ಚಾಂಪಿಯನ್ ಟ್ರೋಫಿ ಕ್ರಿಕೇಟ್ ಕೇವಲ ಮನರಂಜನೆಗೆ ಸೀಮಿತವಾಯಿತು. ಆದರೆ ಉತ್ತರಖಂಡ
ರಾಜ್ಯದಲ್ಲಿ ನಡೆದ ರಾಷ್ಟ್ರೀಯ ದುರಂತ ಒಂದಷ್ಟು ನೋವು, ದೇಶದ ಸೈನಿಕರು ಮತ್ತು ಅದರ ಕಾರ್ಯದ
ಬಗ್ಗೆ ದೇಶದ ಎಲ್ಲಾ ಜನರ ಅಂತರಂಗದ ದೃಷ್ಟಿಯನ್ನು ತೆರೆಸಿದ್ದು ಸುಳ್ಳಲ್ಲ. ದೇಶದ ಸೈನ್ಯದ
ಅಂಗವಾಗಿರುವ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್(ITBP) ತಂಡ
ಮತ್ತು ಅದರ ಜವಾನರು ಜೀವದ ಹಂಗು ತೊರೆದು ನಮ್ಮ ಜನರ ಕೆಲಸ ಮಾಡಿದ್ದು ಇದೆಯಲ್ಲ ಅದು ಇಂದಿನ ಯುವ
ಪೀಳಿಗೆಗೆ ನಮ್ಮ ದೇಶ ಎಂದರೆ ಏನು ? ಅಲ್ಲಿಯ ಜನರು ಯಾರು ನಮಗೆ ಏನು ಸಂಭಂದ ಮತ್ತು ನಾವು
ಅವರಿಗಾಗಿ ಏಕೆ ಕೆಲಸ ಮಾಡಬೇಕು? ಎನ್ನುವುದನ್ನು ಮಾಡಿ ತೋರಿಸಿದರಲ್ಲ ಅದು ನಿಜವಾದ ಸಂದೇಶ. (ಅದನ್ನು
ಎಷ್ಟು ಮಂದಿ ಇಷ್ಟ ಪಟ್ಟಿದಾರೋ ನೋಡಿದ್ದಾರೋ ಅದು ಬೇರೆ ವಿಷಯ) ಅದು ದೇಶದ ಸಾಕಷ್ಟು ಮಂದಿಯ
ಅಂತರಂಗದ ದೃಷ್ಟಿ ತೆರೆಸಿರುವುದು ಸುಳ್ಳಲ್ಲ. ದೇಶದ ಸೈನ್ಯವೆಂದರೇನು ಅದರ
ಕೆಲಸವೇನು ಅದರ ಬದ್ದತೆಗಳು ಏನು? ಎಂದು ಅದನ್ನು ದೇಶದ ಜನರಿಗೆ ಮೂಲೆ ಮೂಲೆ ತಲುಪಿಸಿದ ಕೀರ್ತಿ
ಮಾತ್ರ ನಮ್ಮ ದೃಶ್ಯ ಮಾಧ್ಯಮಗಳದ್ದು ಮತ್ತು ಸಾಮಾಜಿಕ ತಾಣಗಳದ್ದು. ಇದನ್ನೆಲ್ಲ ಯೋಚಿಸಿದರೆ ನಾವು
ಎಲ್ಲೋ ಒಂದು ಕಡೆ ಮಾತಿಗೆ ಸೀಮಿತವಾಗುತ್ತಿದ್ದೇವೆ. ನಮ್ಮ ನುಡಿ ನಡೆಯಷ್ಟು ತೂಕವಿಲ್ಲ, ಇದರ
ಮಧ್ಯೆ ನಾವು ಗಮನಿಸ ಬೇಕಾದ ವಿಷಯವೆಂದರೆ ಚಾಂಪಿಯನ್ ಟ್ರೋಫಿ ಗೆದ್ದ ಪ್ರತಿಯೊಬ್ಬ ಆಟಗಾರನಿಗೆ
ಒಂದು ಕೋಟಿ ಬಹುಮಾನ , ಸಮಾಜಕ್ಕೆ ಯಾವುದೇ ಸಂದೇಶವಿಲ್ಲದ
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗೆದ್ದವರಿಗೆ ೫೦ ಲಕ್ಷ, ದೇಶಕ್ಕಾಗಿ ತನ್ನ ಸಂಸಾರ ಮಕ್ಕಳನ್ನು ತೊರೆದು
ಅದೆಷ್ಟೋ ಕಿ.ಮೀ ದೂರದಲ್ಲಿ ಈ ದೇಶ ನನ್ನ ತಾಯಿ , ಇಲ್ಲಿಯ ಜನರು ನನ್ನ ಸಂಸಾರ ಎಂದು
ದುಡಿಯುತ್ತಿರುವ ಸೈನಿಕ ತನ್ನ ಮಕ್ಕಳನ್ನು ಅನಾಥವಾಗಿಸಿ ಮಡದಿಯನ್ನು ವಿಧವೆಯಾಗಿಸಿ ದೇಶಕ್ಕಾಗಿ
ದುಡಿಯುತ್ತಾ ಮಡಿದರೆ ಕೇವಲ ೨೦ ಲಕ್ಷ.! ದುರಂತವೆಂದರೆ ಇದಲ್ಲವೇ ?
ನಾವು ಈ ದೇಶದಲ್ಲಿ ಒಂದು ನೂರಾ
ಇಪ್ಪತ್ತೆರಡು ಕೋಟಿ ಜನರಿದ್ದೇವೆ ಏನು ಪ್ರಯೋಜನ.? ತಲಾ ಒಂದು ರುಪಾಯಿ ನೀಡಲು ನಮಗೆ ಯೋಗ್ಯತೆ
ಇಲ್ಲವೇ.? ದೇಶದ ಸಾರ್ವಜನಿಕ ವ್ಯವಸ್ಥೆ, ಸೈನಿಕನ ಬಗ್ಗೆ ಗಂಟೆಗಟಲೆ ಮಾತನಾಡುವ ನಾವು ನಮಗಿರುವ
ಬದ್ದತೆ ಇದೇನಾ ಎನ್ನುವುದು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಒಬ್ಬ ಸೈನಿಕನಾಗಲಿ ಅಥವಾ ಒಬ್ಬ
ಸಾಮಾನ್ಯ ವ್ಯಕ್ತಿಯಾಗಲಿ ಯೋಚಿಸ ಬೇಕಾಗಿರುವುದು ನಾವು ಹುಟ್ಟಿದ್ದು ಇಲ್ಲಿ, ನನ್ನನ್ನು
ಕಾಪಾಡಿದ್ದು ಈ ದೇಶದ ಸಾರ್ವಜನಿಕ ವ್ಯವಸ್ಥೆ, ನನ್ನನ್ನು ಬೆಳೆಸಿ ಕಾಪಾಡಿ ನನಗೆ ಸಮಾಜದಲ್ಲಿ
ಒಂದು ಗೊತ್ತಾದ ಸ್ಥಾನ ನೀಡಿದ್ದು ಈ ದೇಶದ ಕಾನೂನು ಕಟ್ಟುಪಾಡು. ಇಂತಹ ಸನ್ನಿವೇಶದಲ್ಲಿ ನಮ್ಮ
ದೇಶಕ್ಕೆ ಸೈನಿಕರು ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಾಗೇ ನಾವು ಮಾಡಿಕೊಂಡಿದ್ದೆವೆಯೇ? ಚಾಂಪಿಯನ್
ಟ್ರೋಫಿ ಪಂದ್ಯಕ್ಕೆ ರಕ್ಷಣೆ ಕೊಟ್ಟಿದ್ದು ಆ ದೇಶದ ರಕ್ಷಣಾ ಪಡೆ, ಬಿಗ್ ಬಾಸ್ ಕಾರ್ಯಕ್ರಮಕ್ಕೆ
ರಕ್ಷಣೆ ಕೊಟ್ಟಿದ್ದು ಆ ರಾಜ್ಯದ ಭದ್ರತಾ ಪಡೆ ಇವೆಲ್ಲವನ್ನೂ ನಿರ್ಭಯ ಮತ್ತು ನಿರ್ಭೀತಿಯಿಂದ ಸದಾ
ನೋಡುತ್ತಿರಿ ಎಂದು ನಮ್ಮನ್ನು ಸದಾ ರಕ್ಷಣೆ ಮಾಡುತ್ತಿರುವುದು ನಮ್ಮ ದೇಶದ ಸೈನಿಕ ವ್ಯವಸ್ಥೆ.
ಆದರೆ ಅಂತಹ ಒಬ್ಬ ಸೈನಿಕ ಮೃತಪಟ್ಟಾಗ ನಾವು ಒಂದು ನೂರಾ ಇಪ್ಪತ್ತೆರಡು ಕೋಟಿ ಜನರಿದ್ದರೂ ನಾವು
ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲವಲ್ಲ ಇದನ್ನು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳ
ಬೇಕಾಗಿದೆ. ಜೊತೆಗೆ ಈ ದೇಶದ ಸೈನಿಕನಾಗಲಿ ಒಬ್ಬ ಸಾಮನ್ಯ ಪ್ರಜೆಯಾಗಲಿ ಮೃತಪಟ್ಟಾಗ ಅವರ
ಸಂಭಂದಿಕರಿಗೆ ಆಗುವ ನೋವು ನಮ್ಮ ನೋವು ಕೂಡ ಆಗಿರಲಿ ಎನ್ನುವುದೇ ನಮ್ಮ ಕಳಕಳಿ ಏನಂತಿರಾ..?