Friday, 6 March 2026

ಮಹಿಳೆ – ಸಾಧನೆ, ಸವಾಲು ಮತ್ತು ಸಮಾಜದ ಪ್ರತಿಬಿಂಬ

 ಕೆ.ಎಸ್.ಧನಂಜಯ

                

 ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀಎಂಬ ಮಾತು ನಮ್ಮ ಸಂಸ್ಕೃತಿಯ ಮಹತ್ತರವಾದ ಮೌಲ್ಯವನ್ನು ಹೇಳುತ್ತದೆ. ಜನ್ಮ ನೀಡುವ ತಾಯಿ ಮತ್ತು ಜನ್ಮ ಭೂಮಿ ಎರಡೂ ಸ್ವರ್ಗಕ್ಕಿಂತಲೂ ಮಹತ್ತರವೆಂದು ನಾವು ಘೋಷಿಸುತ್ತೇವೆ. ಆದರೆ ಮಾತುಗಳನ್ನು ಉಚ್ಚರಿಸುವ ಸಮಾಜದಲ್ಲೇ, ತಾಯಿ, ಮಹಿಳೆ ಎದುರಿಸುತ್ತಿರುವ ಸವಾಲುಗಳು ಇನ್ನೂ ಕಡಿಮೆಯಾಗಿಲ್ಲ ಎಂಬುದು ನಗ್ನ ಸತ್ಯ. ಹೆಂಗಸರು ಪುರುಷರಿಗಿಂತ ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದು ತಪ್ಪು ಕಲ್ಪನೆ. ಇತ್ತೀಚಿನ ವರ್ಷದಲ್ಲಿ ಬರುವ ಪರೀಕ್ಷೆಗಳ ಫಲಿತಾಂಶಗಳನ್ನು ನೋಡಿದರೆ, ಬಹುತೇಕ ಸಂದರ್ಭಗಳಲ್ಲಿ ಹುಡುಗಿಯರೇ ಹೆಚ್ಚು ಶೇಕಡಾವಾರು ಅಂಕಗಳನ್ನು ಪಡೆದು ಮುಂಚೂಣಿಯಲ್ಲಿ ಕಾಣಿಸುತ್ತಾರೆ. ಶಾಲೆಯ ತರಗತಿಗಳಲ್ಲಿ ಶಿಸ್ತಿನಿಂದ ಓದುತ್ತಿರುವ, ಪರಿಶ್ರಮದಿಂದ ಮುಂದುವರಿಯುವ ಹೆಣ್ಣುಮಕ್ಕಳು ಸಮಾಜದ ಭವಿಷ್ಯದ ಬೆಳಕಾಗಿ ಕಾಣುತ್ತಾರೆ ಎನ್ನುವುದು ನಿಜ , ಪರೀಕ್ಷಾ ಫಲಿತಾಂಶಗಳಲ್ಲಿ ಸಾಧನೆ  ಮೆರೆದ ಹುಡುಗಿಯರು ಮುಂದಿನ ಜೀವನದ ಹಾದಿಯಲ್ಲಿ ಎಲ್ಲಿ ಕಾಣೆಯಾಗುತ್ತಾರೆ? ಬಹಳಷ್ಟು ಸಂದರ್ಭಗಳಲ್ಲಿ ಶಿಕ್ಷಣದ ನಂತರ ಅವರ ಸಾಧನೆಗೆ ಅವಕಾಶಗಳು ಕಡಿಮೆಯಾಗುತ್ತದೆಯೋ ?  ಮನೆಯ ಹೊಣೆಗಾರಿಕೆಗಳು, ವಿವಾಹದ  ಒತ್ತಡ, ಉದ್ಯೋಗದಲ್ಲಿ ಇರುವ ಅಸಮಾನತೆ, ಸುರಕ್ಷತೆಗೆ ಸಂಬಂಧಿತ ಆತಂಕಗಳು  ಇವುಗಳೆಲ್ಲ ಸೇರಿ ಅವರ ಕನಸುಗಳನ್ನು ಸೀಮಿತಗೊಳಿಸುತ್ತವೆಯೇ ? ಎಂಬುದು ಸಾಮಾಜಿಕ ಜನ ಜೀವನದಲ್ಲಿ ಮರೆಯಾಗಿರುವ ಸತ್ಯ ಒಂದೆಡೆಯಾದರೆ,  ಪ್ರತಿಭೆ ಇರುವ ಮಹಿಳೆಯರಿಗೆ ಇನ್ನೂ ಸಮಾನ ವೇದಿಕೆ ಸಿಗದಿರುವುದು ಮತ್ತೊಂದು ಸತ್ಯ.

ನೀವು ಕೊಡಗು ಮತ್ತು ಕರಾವಳಿ ಭಾಗದ ಸ್ತ್ರೀ ಸಮಾನತೆಯ ಪ್ರಾತಿನಿಧ್ಯವನ್ನು ಗಮನಿಸಿದರೆ ಅಲ್ಲಿ ನಿಮಗೆ ಕಾಣ ಸಿಗುವುದು ಅಳಿಯಕಟ್ಟು ಪದ್ದತಿ ಇದು ಆ ಭಾಗದಲ್ಲಿ ಸ್ತ್ರೀಯರಿಗೆ ದೊರೆತ ಗೌರವ ಎಂದರೆ ತಪ್ಪಾಗಲಿಕ್ಕಿಲ್ಲ , ಕರಾವಳಿ ಭಾಗದಲ್ಲಿ ಮದುವೆಯಾಗಿ ಹೋದ ಹೆಣ್ಣು ಮಗಳಿಗೆ ತನ್ನ ತಾಯಿಯ ಕುಟುಂಬವೇ ಪ್ರಧಾನ ಎನಿಸುತ್ತದೆ ಹೊರತು ತಂದೆಯ ಕುಟುಂಬವಲ್ಲ. ದೈವಾರಾಧನೆ ಜನಪದ , ಹುಟ್ಟು ಸಾವು  ಸೂತಕ ಎಲ್ಲವೂ ತಾಯಿಯ ಕುಟುಂಬದಲ್ಲಿ ನಡೆದರೆ ಅದು ಆತ/ಆಕೆ ಗೆ ಪ್ರಮುಖವಾಗಿ ಅನ್ವಯವಾಗುತ್ತದೆ. ಕುಟುಂಬದಲ್ಲಿ ಸ್ತ್ರೀಯರಿಗೆ ನೀಡಲ್ಪಟ್ಟ ಪ್ರಮುಖ ಸ್ಥಾನಮಾನ. ಮನೆಯ ಮೂಲವಂಶ ಮಹಿಳೆಯ ಮೂಲಕ ಮುಂದುವರಿಯುತ್ತದೆ ಎಂಬ ನಂಬಿಕೆ ಇದರಲ್ಲಿ ಕಾಣಿಸುತ್ತದೆ. ಕೇವಲ ಮನೆಯ ಸದಸ್ಯೆಯಾಗಿ ಮಾತ್ರವಲ್ಲ, ಕುಟುಂಬದ ಕೇಂದ್ರ ಬಿಂದುವಾಗಿ ಪರಿಗಣಿಸುವ ಸಾಮಾಜಿಕ ಚಿಂತನೆಯನ್ನೂ ಪ್ರತಿಬಿಂಬಿಸುತ್ತದೆ. ಇದರಿಂದ ಕಂಡು ಕೊಳ್ಳುವ ಅಂಶ ಎಂದರೆ ಮಹಿಳೆಯ ಗೌರವ ಮತ್ತು ಅವರ ಪಾತ್ರವನ್ನು ಗುರುತಿಸುವ ಸಮಾಜವೇ ಸಮತೋಲನದ ಸಮಾಜವಾಗುತ್ತದೆ. ಈ ಎಲ್ಲದರ ನಡುವೆಯೂ ಮಹಿಳೆ ತನ್ನ ಸಾಮರ್ಥ್ಯವನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಲೇ ಇದ್ದಾಳೆ. ವಿಜ್ಞಾನದಿಂದ ಸಾಹಿತ್ಯದವರೆಗೆ, ಆಡಳಿತದಿಂದ ಕ್ರೀಡೆಯವರೆಗೆ  ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯ ಸಾಧನೆಗಳು ಸಮಾಜದ ದಿಕ್ಕನ್ನು ಬದಲಿಸುತ್ತಿವೆ.

 ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಆಚರಣೆ ಆಗಬಾರದು. ವರ್ಷಕ್ಕೆ ಒಂದು ದಿನ ಹೂಮಾಲೆ ಹಾಕಿ, ಅಭಿನಂದನೆ ಹೇಳಿ, ನಂತರ ಮರೆತು ಬಿಡುವ ಕಾರ್ಯಕ್ರಮವಾಗಬಾರದು. ಮಹಿಳೆಯ ಗೌರವ ಮತ್ತು ಸಮಾನತೆಯ ವಿಚಾರವು ದಿನನಿತ್ಯದ ಬದುಕಿನಲ್ಲಿ ಕಾಣಿಸಿಕೊಳ್ಳಬೇಕು. ಮನೆ, ಶಾಲೆ, ಕಚೇರಿ, ಸಮಾಜ ಎಲ್ಲೆಡೆ ಮಹಿಳೆಗೆ ಸಮಾನ ಅವಕಾಶ, ಗೌರವ ಮತ್ತು ಸುರಕ್ಷತೆ ದೊರಕಬೇಕು. ಮಹಿಳೆ ಮತ್ತು ಪುರುಷರು ಸಮಾನ ಹಕ್ಕುಗಳೊಂದಿಗೆ ಸಮಾಜದಲ್ಲಿ ಮುಂದೆ ಸಾಗುತ್ತಿರುವ ಕಾಲದಲ್ಲಿಯೂ, ಅವರ ದೈಹಿಕ ಮತ್ತು ಪ್ರಾಕೃತಿಕ ಲಕ್ಷಣಗಳಲ್ಲಿ ಕೆಲವು ಭಿನ್ನತೆಗಳಿರುವುದು ಸಹಜ. ವಿಶೇಷವಾಗಿ ಕೆಲಸದ ಸ್ಥಳಗಳಲ್ಲಿ ಪುರುಷ ಅಧಿಕಾರಿಗಳು ಮಹಿಳಾ ಸಹೋದ್ಯೋಗಿಗಳೊಂದಿಗೆ ವರ್ತಿಸುವಾಗ ಪ್ರಾಕೃತಿಕ ಬದಲಾವಣೆಗಳನ್ನು ಗೌರವಿಸುವುದು ಅತ್ಯಂತ ಅಗತ್ಯ. ಹಲವಾರು ಸಮಯದಲ್ಲಿ ಅಮ್ಮ, ತನ್ನ ಮಗಳು  , ತನ್ನ ಮಡದಿ  ಅಥವಾ ಪ್ರತಿದಿನ ಸೌಮ್ಯವಾಗಿ, ಸಂತೋಷದಿಂದ ಎಲ್ಲರೊಂದಿಗೆ ಮಾತನಾಡುವ ಒಬ್ಬ ಮಹಿಳಾ ಉದ್ಯೋಗಿ ಏಕಾಏಕಿ ಸ್ವಲ್ಪ ಕಿರಿಕಿರಿಯ ಸ್ವಭಾವ ತೋರಬಹುದು. ಸಣ್ಣ ವಿಷಯಕ್ಕೂ ವಾದಿಸಬಹುದು, ಅಸಹನೆ ವ್ಯಕ್ತಪಡಿಸಬಹುದು, ಕೆಲವೊಮ್ಮೆ  ತಪ್ಪುಗಳನ್ನು ಮಾಡಬಹುದು ಅಥವಾ ಭಾವನಾತ್ಮಕವಾಗಿ ಕಣ್ಣೀರಿಟ್ಟುಕೊಳ್ಳಬಹುದು.  ಇದು ಕೇವಲ ಕೆಲವರ ಮನೆಯ ಕೆಲವು ಕಚೇರಿಯ ಕಥೆಯಲ್ಲ ನಮ್ಮ ಮನೆಗಳಲ್ಲಿಯೂ ಇಂತಹ ಅನುಭವಗಳು ಕಂಡುಬರುತ್ತವೆ  ಈ ಬದಲಾವಣೆಗಳು ನಮ್ಮ ಅಕ್ಕ, ಅಮ್ಮ ತಂಗಿ, ಮಡದಿಯರ ಮಧ್ಯೆ ಕಾಣಿಸಿಕೊಳ್ಳುತ್ತಿದೆ ಎಂದರೆ ಅದು ನಿಶ್ಚಯವಾಗಿ ಆಕೆಯ ಮಾಸಿಕ ಚಕ್ರದ ದಿನಗಳಲ್ಲಿ ಕಾಣಿಸಿಕೊಳ್ಳುವ ಪ್ರಾಕೃತಿಕ ಪರಿಣಾಮಗಳಾಗಿರಬಹುದು. ವೈಜ್ಞಾನಿಕವಾಗಿ ನೋಡಿದರೆ, ಈ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಈಸ್ಟ್ರೋಜನ್ ಎಂಬ ಹಾರ್ಮೋನಿನ ಪ್ರಮಾಣದಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ಈ ಹಾರ್ಮೋನು ಮಹಿಳೆಯ ದೈಹಿಕ ಚೈತನ್ಯ ಮತ್ತು ಮಾನಸಿಕ ಸಮತೋಲನಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಮಟ್ಟ ಕಡಿಮೆಯಾಗುವ ಸಂದರ್ಭದಲ್ಲಿ ಮಹಿಳೆ ದೈಹಿಕವಾಗಿ ದುರ್ಬಲವಾಗಬಹುದು, ಮಾನಸಿಕವಾಗಿ ಸ್ವಲ್ಪ ಕುಗ್ಗಿದಂತಾಗಬಹುದು. ಮಹಿಳೆಯ ದೇಹದಲ್ಲಿ ಸಮತೋಲನದಲ್ಲಿರುವಾಗ ಆಕೆ ಲವಲವಿಕೆಯಿಂದ, ಉತ್ಸಾಹದಿಂದ ತನ್ನ ಕೆಲಸಗಳನ್ನು ನಿರ್ವಹಿಸುತ್ತಾಳೆ. ಆದ್ದರಿಂದ ಮಹಿಳೆಯ ಪ್ರಾಕೃತಿಕ ಬದಲಾವಣೆಗಳನ್ನು ಅರ್ಥೈಸುವುದು ಮತ್ತು ಗೌರವಿಸುವುದು ಕೇವಲ ವೈಯಕ್ತಿಕ ಸಂವೇದನೆಯಲ್ಲ, ಸುಸಂಸ್ಕೃತ ಸಮಾಜದ ಲಕ್ಷಣವೂ ಹೌದು. ಇಂತಹ ಸಂದರ್ಭಗಳಲ್ಲಿ ಸಹೋದ್ಯೋಗಿಗಳಾಗಲಿ, ಕುಟುಂಬದ ಸದಸ್ಯರಾಗಲಿ ವಿಶೇಷವಾಗಿ ಗಂಡ ಅಥವಾ ಪುರುಷ ಅಧಿಕಾರಿಗಳಾಗಲಿ ಮಹಿಳೆಯೊಂದಿಗೆ ಹೆಚ್ಚು ಸಂವೇದನಾಶೀಲವಾಗಿ, ಸಹಾನುಭೂತಿಯಿಂದ ಮಾತನಾಡುವುದು ಅಗತ್ಯ. ಅರ್ಥೈಸುವ ಮನೋಭಾವ ಮತ್ತು ಸಹಕಾರದ ವಾತಾವರಣ ಮಹಿಳೆಗೆ ಬಹಳಷ್ಟು ಧೈರ್ಯ ನೀಡುತ್ತದೆ.

ಒಂದು ಸಮಾಜ ಎಷ್ಟು ಪ್ರಗತಿ ಶೀಲವೋ ಎಂಬುದನ್ನು ಅಳೆಯುವ ಒಂದು ಪ್ರಮುಖ ಮಾನದಂಡ ಮಹಿಳೆಯ ಸ್ಥಾನಮಾನ. ಮಹಿಳೆಗೆ ಗೌರವ, ಅವಕಾಶ ಮತ್ತು ಭದ್ರತೆ ದೊರಕಿದಾಗ ಮಾತ್ರ ಸಮಾಜ ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಹೊಂದುತ್ತದೆ. ಮಹಿಳೆಯನ್ನು ಗೌರವಿಸುವುದು ಎಂದರೆ ಮಾನವೀಯತೆಯನ್ನು ಗೌರವಿಸುವುದು. ಇಲ್ಲದೆ ಹೋದರೆ ಸ್ತ್ರೀ ಎಂದರೆ ಅಷ್ಟೇ ಸಾಕೆ ,ಎಲ್ಲಿ ಹೆಂಗಸರನ್ನು ದೇವಿಯಂತೆ ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ.” ಎನ್ನುವುದು ಕೇವಲ ಪುಸ್ತಕದಲ್ಲಿ ಸಿಗುವ ಸುಂದರ ವಾಕ್ಯವಾಗಿ ಉಳಿದು ಬಿಡುತ್ತದೆ.  ಹಾಗಾಗ ಬಾರದು ಎಂದಾದರೆ ಆಚರಣೆ ನಮ್ಮ ನಡೆ ನುಡಿಗಳಲ್ಲೂ ಕಾಣಿಸಬೇಕು. ಮಹಿಳೆಯನ್ನು ಗೌರವಿಸುವುದು ಎಂದರೆ ಅವಳ ಭಾವನೆಗಳನ್ನು, ಆರೋಗ್ಯವನ್ನು ಮತ್ತು ಅವಳ ಪ್ರಾಕೃತಿಕ ಸ್ಥಿತಿಯನ್ನು ಅರ್ಥೈಸುವುದೂ ಆಗಿದೆ. ಮಹಿಳೆಯ ಮೇಲೆ ಗೌರವ ಕೇವಲ ಮಾತಿನಲ್ಲಿ ಮಾತ್ರವಲ್ಲ, ಅವಳಿಗೆ ಅಗತ್ಯವಿರುವ ಸಮಯದಲ್ಲಿ ವಿಶ್ರಾಂತಿ, ಸಹಾನುಭೂತಿ ಮತ್ತು ಬೆಂಬಲ ನೀಡುವಲ್ಲಿ ವ್ಯಕ್ತವಾಗಬೇಕು. ಅಂದಾಗ ಮಾತ್ರ “ಮಹಿಳೆ ದೇವಿ” ಎಂಬ ಮಾತು ಒಂದು ಘೋಷಣೆಯಾಗಿ ಉಳಿಯದೆ, ಸಮಾಜದ ಸಂಸ್ಕೃತಿ ಮತ್ತು ಮಾನವೀಯತೆಯ ಜೀವಂತ ಮೌಲ್ಯದ ಜೊತೆಗೆ ಸಮಾನತೆ, ಗೌರವ ಮತ್ತು ಸಂಸ್ಕೃತಿಯ ನಿರಂತರ ಪಯಣವಾಗುತ್ತದೆ.

No comments:

Post a Comment