Thursday, 6 August 2026

ಬಾಲ್ಯವೆಂಬ ಸ್ವರ್ಗ – ಮರಳಿ ಸಿಗದ ಮಧುರ ನೆನಪುಗಳು

 


 ಕೆ.ಎಸ್.ಧನಂಜಯ

    ಕೆಲವು ನೆನಪುಗಳು ಕಾಲದ ಧೂಳಿನಲ್ಲಿ ಮಸುಕಾಗುವುದಿಲ್ಲ. ವರ್ಷಗಳು ಉರುಳಿದರೂ, ಜೀವನ ಎಷ್ಟೇ ವೇಗವಾಗಿ ಓಡಿದರೂ, ಬಾಲ್ಯದ ನೆನಪುಗಳು ಮನಸ್ಸಿನ ಮೂಲೆಯಲ್ಲಿ ಸದಾ ಹಸಿರಾಗಿಯೇ ಉಳಿದುಕೊಳ್ಳುತ್ತವೆ. ಅವುಗಳನ್ನು ನೆನಪಿಸಿಕೊಂಡಾಗ ತುಟಿಗಳ ಮೇಲೆ ನಗು ಅರಳುತ್ತದೆ, ಕಣ್ಣಂಚಿನಲ್ಲಿ ಮಧುರ ಭಾವನೆಗಳು ಮಿನುಗುತ್ತವೆ.

ದಿನಗಳಲ್ಲಿ "ನವಿಲು ಗರಿಯನ್ನು ಪುಸ್ತಕದ ಮಧ್ಯೆ ಇಟ್ಟರೆ ಅದು ಮರಿ ಮಾಡುತ್ತದೆ" ಎಂಬ ನಂಬಿಕೆ ಮಕ್ಕಳ ಪಾಲಿಗೆ ಕೇವಲ ಕಲ್ಪನೆಯಲ್ಲ, ಅದೊಂದು ಅದ್ಭುತ ಕನಸಾಗಿತ್ತು. ನಂಬಿಕೆಗೆ ವಿಜ್ಞಾನದ ಸಾಕ್ಷಿ ಬೇಕಿರಲಿಲ್ಲ ಮಗುವಿನ ಮನಸ್ಸಿನ ಮುಗ್ಧತೆಯೇ ಅದರ ಸತ್ಯವಾಗಿತ್ತು. ಪುಸ್ತಕದ ಪುಟಗಳ ಮಧ್ಯೆ ಇಟ್ಟ ನವಿಲು ಗರಿಗಿಂತ, ಅದರೊಂದಿಗೆ ಬೆಳೆದ ಕನಸುಗಳೇ ಹೆಚ್ಚು ಸುಂದರವಾಗಿದ್ದವು. ಪ್ರತಿಯೊಬ್ಬ ಮಗುವಿನ ಮನಸ್ಸಿನಲ್ಲೂ ಮುಗ್ಧತೆ ನೆಲೆಸಿದ್ದ ಕಾಲ ಅದು. ನಂಬಿಕೆ ನಿಜವೇ ಅಥವಾ ಸುಳ್ಳೇ ಎಂಬ ಪ್ರಶ್ನೆಗಿಂತ, ಅದನ್ನು ನಂಬಿ ಖುಷಿಪಡುವುದೇ ದೊಡ್ಡ ಸಂತೋಷವಾಗಿತ್ತು. ನವಿಲು ಗರಿಯನ್ನು ಪುಸ್ತಕದ ಮಧ್ಯೆ ಇಟ್ಟರೆ ಅದು ಮರಿ ಮಾಡುತ್ತದೆ, ಮಗುವಿನ ಕಲ್ಪನಾ ಲೋಕದ ಭಾಗವಾಗಿತ್ತು. ವಾಸ್ತವವಾಗಿ ಮರಿ ಹುಟ್ಟದಿದ್ದರೂ, ಕಾಯುವಿಕೆಯಲ್ಲಿದ್ದ ಖುಷಿಯೇ ನಿಜವಾದ ಮರಿ. ತಂದೆ-ತಾಯಿಗೆ ಇದು ಗೊತ್ತಿಲ್ಲದ ವಿಷಯ ಅಲ್ಲ ಆದರೂ ಅವರು ಉತ್ತರಿಸುತ್ತಿರಲಿಲ್ಲ? ಅವರಿಗೆ ಗೊತ್ತಿತ್ತು ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕಿಂತ, ಮಗುವಿನ ಕಲ್ಪನೆಯನ್ನು ಬದುಕಲು ಬಿಡುವುದು ಹೆಚ್ಚು ಸುಂದರ ಎಂದು. ಒಂದು ವೇಳೆ  ಸುಳ್ಳು ಎಂದು ಒಂದೇ ಮಾತಿನಲ್ಲಿ ಹೇಳಿದ್ದರೆ, ಮಗುವಿನ ಮನಸ್ಸಿನ ಒಂದು ಪುಟ್ಟ ಮಾಯಾಲೋಕ ಅಲ್ಲಿಯೇ ಕೊನೆಗೊಳ್ಳುತ್ತಿತ್ತು.

ಶಾಲೆಗೆ ಹೋಗುವುದೆಂದರೆ ಅಂದು ಹಬ್ಬದ ಸಂಭ್ರಮ. ಇಂದಿನಂತೆ ಬೆನ್ನ ಮೇಲೆ ಭಾರವಾದ ಬ್ಯಾಗ್ಗಳಿರಲಿಲ್ಲ. ಕುತ್ತಿಗೆಯಲ್ಲಿ ವಾಟರ್ ಬಾಟಲ್ ನೇತಾಡುತ್ತಿರಲಿಲ್ಲ. ಕೈಯಲ್ಲಿ ಲಂಚ್ ಕ್ಯಾರಿಯರ್ ಇರಲಿಲ್ಲ. ಒಂದು ಚಿಕ್ಕ ಬುತ್ತಿ ಸಾಕಾಗುತ್ತಿತ್ತು. ಮಧ್ಯಾಹ್ನ ಶಾಲೆಯ ಆವರಣದಲ್ಲಿದ್ದ ದೊಡ್ಡ ಮರದ ನೆರಳಿನಲ್ಲಿ ಎಲ್ಲ ಗೆಳೆಯರು ವೃತ್ತವಾಗಿ ಕುಳಿತು ತಮ್ಮ ತಮ್ಮ ಬುತ್ತಿಯನ್ನು ಹಂಚಿಕೊಂಡು ಊಟ ಮಾಡುತ್ತಿದ್ದೆವು. ಅಲ್ಲಿ ಯಾರ ಊಟ ಯಾರದ್ದು ಎಂಬ ಭೇದವೇ ಇರಲಿಲ್ಲ; ಎಲ್ಲವೂ ನಮ್ಮದೇ ಆಗಿತ್ತು. ಊಟ ಮುಗಿದ ತಕ್ಷಣ ಮರಗಳನ್ನು ಹತ್ತುವುದು, ಕೋತಿಯಾಟ ಆಡುವುದು, ಮಣ್ಣಿನಲ್ಲಿ ಓಡುವುದು, ಬೀಳುವುದು, ಮತ್ತೆ ಎದ್ದು ನಗುವುದುಇವೆಲ್ಲವೂ ನಮ್ಮ ದೈನಂದಿನ ಜೀವನದ ಭಾಗವಾಗಿದ್ದವು. ಆಗ ದೇಹಕ್ಕೆ ಗಾಯಗಳಾಗುತ್ತಿದ್ದರೂ ಮನಸ್ಸಿಗೆ ಯಾವ ನೋವೂ ಇರಲಿಲ್ಲ.

ನಮ್ಮ ಬಳಿ ಒಂದೇ ಯೂನಿಫಾರ್ಮ್ ಇತ್ತು. ಸಂಜೆ ಮನೆಗೆ ಬಂದ ಮೇಲೆ ಅದನ್ನು ಒಗೆದು ಒಣಗಿಸಿ, ಮರುದಿನ ಅದನ್ನೇ ತೊಟ್ಟು ಶಾಲೆಗೆ ಹೋಗುತ್ತಿದ್ದೆವು. ಹೊಸ ಬಟ್ಟೆಗಳನ್ನು ಹಬ್ಬದ ದಿನಗಳಿಗೆ ಮಾತ್ರ ಕಾದಿಟ್ಟಿದ್ದೆವು. ಆದರೆ ಅಂದು ಇದ್ದ ಸಂತೋಷಕ್ಕೆ ಯಾವುದೇ ಕೊರತೆಯಿರಲಿಲ್ಲ. ಊರಿನ ಎಲ್ಲ ಮಕ್ಕಳು ಗುಂಪು ಗುಂಪಾಗಿ ಮೈಲಿಗಟ್ಟಲೆ ದೂರ ನಡೆದುಕೊಂಡೇ ಶಾಲೆ ಸೇರುತ್ತಿದ್ದೆವು. ದಾರಿಯೇ ನಮ್ಮ ಆಟದ ಮೈದಾನವಾಗಿತ್ತು. ನಗು, ತಮಾಷೆ, ಹಾಡು, ಓಟ, ಸಣ್ಣ ಪುಟ್ಟ ಜಗಳಇವೆಲ್ಲವೂ ದಾರಿಯ ಸಂಗಾತಿಗಳಾಗಿದ್ದವು. ಪ್ರಯಾಣ ಎಷ್ಟು ದೂರ ಎಂಬುದೇ ನಮಗೆ ಗೊತ್ತಾಗುತ್ತಿರಲಿಲ್ಲ. ನಮ್ಮ ಅಣ್ಣ-ಅಕ್ಕ ಬಳಸಿದ ಪಠ್ಯ ಪುಸ್ತಕಗಳೇ ನಮಗೆ ಹೊಸ ಪುಸ್ತಕಗಳಾಗುತ್ತಿದ್ದವು. ಅವರ ಹೆಸರುಗಳ ಕೆಳಗೆ ನಮ್ಮ ಹೆಸರನ್ನು ಬರೆಯುತ್ತಿದ್ದೆವು. ಹಳೆಯ ನೋಟ್ ಪುಸ್ತಕಗಳಲ್ಲಿ ಖಾಲಿ ಉಳಿದಿದ್ದ ಪುಟಗಳನ್ನು ಕಿತ್ತು ಸೇರಿಸಿ ಪೇಟೆಗೆ ತಂದೆಯೊಂದಿಗೆ ಪ್ರೆಸ್ ಗೆ ಕಳುಹಿಸಿಕೊಟ್ಟರೆ  ಬರುವಾಗ ಹೊಸ ಪುಸ್ತಕವಾಗಿ ಬರುತ್ತಿತ್ತು ಅದನ್ನು "ರಫ್ ಬುಕ್" ಮಾಡಿಕೊಳ್ಳುತ್ತಿದ್ದೆವು. ವಸ್ತುಗಳ ಬೆಲೆ ಗೊತ್ತಿರದಿದ್ದರೂ, ಅವುಗಳ ಮೌಲ್ಯವನ್ನು ಚೆನ್ನಾಗಿ ಅರಿತಿದ್ದ ಕಾಲ ಅದು.

 ಶಾಲೆಯ ನಂತರ ಹಕ್ಕಿಗಳ ಗೂಡು ಹುಡುಕುತ್ತಾ ಅಲೆದದ್ದು, ಗುಡ್ಡಗಳನ್ನು ಹತ್ತಿ ಕಾಡು ಹಣ್ಣುಗಳ ಸಿಹಿ ರುಚಿ ನೋಡಿದ್ದು, ಹೊಳೆಗಳಲ್ಲಿ ಕಾಲು ಮುಳುಗಿಸಿ ಆಟವಾಡಿದ್ದುಇವೆಲ್ಲವೂ ನಮ್ಮ ಬಾಲ್ಯದ ಅಮೂಲ್ಯ ಅಧ್ಯಾಯಗಳು. ಪ್ರಕೃತಿಯೇ ನಮ್ಮ ಶಿಕ್ಷಕಿಯಾಗಿದ್ದಳು. ಗೆಳೆಯರೊಂದಿಗೆ ಸಣ್ಣ ಕಾರಣಕ್ಕೆ ಸಿಟ್ಟು ಮಾಡಿಕೊಂಡು ಮಾತು ಬಿಡುತ್ತಿದ್ದೆವು. ಆದರೆ ಮರುದಿನವೇ ಎಲ್ಲವನ್ನೂ ಮರೆತು ಮತ್ತೆ ಒಂದಾಗುತ್ತಿದ್ದೆವು. ಮನಸ್ಸಿನಲ್ಲಿ ದ್ವೇಷ ಇರಲಿಲ್ಲ, ಅಹಂಕಾರ ಇರಲಿಲ್ಲ. ಕ್ಷಮಿಸುವುದನ್ನೂ, ಮತ್ತೆ ಸ್ನೇಹ ಬೆಳೆಸುವುದನ್ನೂ ಯಾರೂ ಕಲಿಸಬೇಕಾಗಿರಲಿಲ್ಲ.

ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ನೆಚ್ಚಿನ ಶಿಕ್ಷಕರಿರುತ್ತಾರೆ. ಅವರ ತರಗತಿಗಾಗಿ ಕಾತರದಿಂದ ಕಾಯುತ್ತಿದ್ದ ದಿನಗಳು ಇನ್ನೂ ನೆನಪಾಗುತ್ತವೆ. ಯಾವುದೋ ಕಾರಣಕ್ಕೆ ಅವರು ಶಾಲೆಗೆ ಬರದಿದ್ದರೆ ಮನಸ್ಸೇ ಖಾಲಿಯಾಗಿಬಿಡುತ್ತಿತ್ತು.  ಉತ್ತಮ ಅಂಕಗಳನ್ನು ಪಡೆದಾಗ ಅವರಿಂದ ಸಿಕ್ಕ ಒಂದು ಮೆಚ್ಚುಗೆಯ ಮಾತು ನಮಗೆ ಜಗತ್ತನ್ನೇ ಗೆದ್ದ ಸಂಭ್ರಮ ಕೊಡುತ್ತಿತ್ತು. ಕಡಿಮೆ ಅಂಕ ಬಂದಾಗ ಸಿಕ್ಕ ಬೈಗುಳವೂ ನಮ್ಮ ಒಳ್ಳೆಯದಕ್ಕಾಗಿಯೇ ಎಂಬುದು ಇಂದು ಅರ್ಥವಾಗುತ್ತದೆ. ಬಾಲ್ಯದ ನೆನಪುಗಳಲ್ಲಿ ಇನ್ನೊಂದು ಮಧುರ ಅಧ್ಯಾಯವೂ ಇರುತ್ತದೆ. ತರಗತಿಯಲ್ಲಿದ್ದ ಯಾವುದೋ ಒಬ್ಬ ಹುಡುಗ ಅಥವಾ ಹುಡುಗಿ ನಮಗೆ ವಿಶೇಷವಾಗಿ ಇಷ್ಟವಾಗಿರುತ್ತಾನೆ ಅಥವಾ ಇಷ್ಟವಾಗಿರುತ್ತಾಳೆ. ಅವರ ಮುಗ್ಧ ನಗು, ಕದ್ದುನೋಡುವ ದೃಷ್ಟಿ, ಚಾಕ್ಲೇಟ್ ಹಂಚಿಕೊಂಡ ಕ್ಷಣಗಳು, ಮಾತಿಲ್ಲದ ಸ್ನೇಹಇವೆಲ್ಲವೂ ಇಂದು ನೆನಪಾದಾಗ ಮನಸ್ಸು ನಗುತ್ತದೆ. ಅದು ಪ್ರೀತಿಗಿಂತಲೂ ಮುಗ್ಧವಾದ, ಸ್ವಾರ್ಥವಿಲ್ಲದ ಒಂದು ಸುಂದರ ಭಾವನೆ.

    ಬಾಲ್ಯ ನಮಗೆ ಕಲಿಸಿದ ಪಾಠಗಳು ಇಂದು ಯಾವುದೇ ಪಾಠ ಪುಸ್ತಕಗಳಲ್ಲಿ ಇಲ್ಲ. ಹಂಚಿಕೊಳ್ಳುವುದನ್ನು, ಸ್ನೇಹವನ್ನು, ಪ್ರಕೃತಿಯನ್ನು ಪ್ರೀತಿಸುವುದನ್ನು, ಸೋಲನ್ನು ನಗುತ್ತಾ ಒಪ್ಪಿಕೊಳ್ಳುವುದನ್ನು, ಮತ್ತೆ ಎದ್ದು ನಡೆಯುವುದನ್ನು ಬಾಲ್ಯವೇ ಕಲಿಸಿತು. ಆಗ ನಮ್ಮ ಬಳಿ ಸೌಲಭ್ಯಗಳು ಕಡಿಮೆಯಾಗಿದ್ದರೂ, ಸಂತೋಷ ಮಾತ್ರ ಅಪಾರವಾಗಿತ್ತು. ಇಂದು ಸೌಲಭ್ಯಗಳು ಹೆಚ್ಚಿವೆ  ನಮ್ಮ ಮಕ್ಕಳ ಬಳಿ ದುಬಾರಿ ಬ್ಯಾಗ್‌ಗಳಿವೆ, ಡಿಜಿಟಲ್ ತರಗತಿಗಳಿವೆ, ಸಾವಿರಾರು ಪುಸ್ತಕಗಳಿವೆ, ಮೊಬೈಲ್‌ಗಳಿವೆ. ಆದರೆ ಮರದ ನೆರಳಿನಲ್ಲಿ ಕೂತು ಊಟ ಹಂಚಿಕೊಳ್ಳುವ ಸಂತೋಷ ಎಲ್ಲಿದೆ? ಗುಡ್ಡ ಏರಿ ಕಾಡುಹಣ್ಣು ಹುಡುಕುವ ಕುತೂಹಲ ಎಲ್ಲಿದೆ? ಮಳೆಯ ಹನಿಯಲ್ಲಿ ನೆನೆಯುವ ಮುಗ್ಧತೆ ಎಲ್ಲಿದೆ? ನವಿಲು ಗರಿ ಮರಿ ಮಾಡುತ್ತದೆ ಎಂದು ನಂಬುವಂತಹ ನಿರ್ಮಲ ಮನಸ್ಸು ಎಲ್ಲಿದೆ?    ಆದರೆ ಮುಗ್ಧ ನಗು, ನಿರಾಳ ಮನಸ್ಸು, ನಿಷ್ಕಲ್ಮಶ ಬದುಕು ಎಲ್ಲೋ ಕಳೆದುಹೋಗಿದೆ. ಬಹುಶಃ ಅದಕ್ಕೇ ಬಾಲ್ಯವೆಂದರೆ ಕೇವಲ ಒಂದು ಜೀವನದ ಹಂತವಲ್ಲ; ಅದು ಮತ್ತೆಂದೂ ಮರಳಿ ಸಿಗದ ಸ್ವರ್ಗ. ದಿನಗಳು ಹಿಂದಿರುಗುವುದಿಲ್ಲ, ಆದರೆ ಅವುಗಳ ನೆನಪುಗಳು ಜೀವನದ ಕೊನೆಯ ಕ್ಷಣದವರೆಗೂ ನಮ್ಮ ಹೃದಯದಲ್ಲಿ ನವಿಲು ಗರಿಯಂತೆ ಹಸಿರಾಗಿಯೇ ಉಳಿಯುತ್ತವೆ. ಬಾಲ್ಯ ಹಿಂದಿರುಗುವುದಿಲ್ಲ. ಆದರೆ ಅದನ್ನು ನೆನಪಿಸಿಕೊಳ್ಳುವ ಪ್ರತಿಯೊಂದು ಕ್ಷಣವೂ ಬದುಕನ್ನು ಮತ್ತೆ ಸುಂದರವಾಗಿಸುತ್ತದೆ