ಧನಂಜಯ ಮಡಿಕೇರಿ.
ಕಾಜೂರು ಶಾಲೆ ಹತ್ತಿರ ಇರುವ ಪಶುವೈದ್ಯ ಶಾಲೆ ಬಳಿ ಆಲದ ಮರವಿದೆ ಅದರ ಬೇರುಗಳನ್ನು ಹಿಡಿದು
ಉಯ್ಯಾಲೆ ಆಡಿದ ನೆನಪು ಮಾತ್ರ ನನಗೆ ಇರುವುದು. ಆದರೆ ನೀವು ಮರವನ್ನೇರಿ ಅದರ ಶೃಂಗದಲ್ಲಿ ನಿಂತು
ಹೊರ ಜಗತ್ತನ್ನು ನೋಡಿದ ರೀತಿ ಮಾತ್ರ ಅದ್ಭುತ. ಹಾಗಂತ ನಿಮ್ಮ ಗಾಯದ ಹೂವುಗಳು ನನ್ನಲ್ಲಿ
ಪಿಸುಗುಟ್ಟಿದವು. ಗಾಯದ ಹೂವುಗಳು ಕವನ ಸಂಕಲನ ನಿಮ್ಮ ದೈನಂದಿನ ಗೆಳೆಯರು ಯಾರು ? ನಿಮ್ಮ ಆದ್ಯತೆ
ಏನು ಎನ್ನುವುದನ್ನು ನನಗೆ ಅರ್ಥೈಸಿದೆ.
ಇರುವೆಯ ಮೂಲಕ ಪ್ರಾರಂಭವಾಗುವ ನಿಮ್ಮ ಕವಿತೆ
ಎಲ್ಲಾ ಕಡೆ ಇರುವೆ ಎನ್ನುವ ಸಂದೇಶದೊಂದಿಗೆ ಅದು ಊದುಗೋಳವೆ, ಖಾಲಿ ಡಬ್ಬ, ಚಪ್ಪಲಿಗಳು ಏನೇ
ಆಗಿರಲಿ ಅದನ್ನು ನಿಮ್ಮ ಬರವಣಿಗೆ ಮೂಲಕ ಸ್ಪರ್ಶಿಸಿದ ರೀತಿ ಅದ್ಭುತವಾಗಿದೆ. ಕವಿತೆಗಳು
ಅಸ್ವಸ್ಥವಾಗಿದೆ ವೈದ್ಯನಿಗೆ ಕೊಡಲು ಕಾಸಿಲ್ಲದೆ ಹಾಸಿಗೆಯ ಮೇಲೆ ನರಳುತ್ತಲೇ ಇವೆ ಎನ್ನುವುದು
ನಿಮ್ಮ ಹೃದಯ ವಿಶಾಲತೆ ಅಲ್ಲದೆ ಬೇರೇನು ? ಇರಬಹುದು ನಿನ್ನೆ ಹುಟ್ಟಿದನ್ನು ಬೀದಿಯಲ್ಲಿ ಮೊನ್ನೆ
ಹುಟ್ಟಿದನ್ನು ಚರಂಡಿಯಲ್ಲಿ ಎಸೆದಿರಬಹುದು. ಅದಕ್ಕೂ ಹಿಂದಿನದನ್ನು ಪೆನ್ನು ಇಂಕುಗಳೊಂದಿಗೆ ಬೆಂಕಿ ಹಚ್ಚಿ ಸುಟ್ಟಿರಬಹುದು ಅದು ಅತಿಯಾಗಿ
ಗಾಯಗೊಂಡವೇ ? ಎನ್ನುವುದು ನನ್ನ ಸಾತ್ವಿಕ ಪ್ರಶ್ನೆ. ಹಾಗಾದರೆ ಗಡಿನಾಡ ಸಂಚಾರಿ, ಶಕ್ತಿ, ವಿಜಯ ಕರ್ನಾಟಕ, ಕನ್ನಡ
ಪ್ರಭ, ಉದಯವಾಣಿ, ಅವಧಿ, ಪಂಜು ಮುಂತಾದ ಕಡೆ ನುಸುಳಿದವು ಗಾಯದ ಹೂವುಗಳು ಅಲ್ಲವೇ.? ಹೌದು,
ಅವೆಲ್ಲವೂ ಗಾಯದ ಹೂವುಗಳೇ ಅದನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಿರಿ ಮುಲಾಮು ಹಚ್ಚುವವರು
ಹಚ್ಚಲಿ ? ಕೆರೆದು ಗಾಯ ಮಾಡುವವರು ಮಾಡಲಿ ತಪ್ಪೇನು.?
ನಿಮ್ಮ ಕಾವ್ಯ ಕೃಷಿಯಲ್ಲಿ ನನಗೆ ಕಂಡಿದ್ದು ಸೂಕ್ಷ್ಮತೆ,
ಬದುಕಿನ ಪದರುಗಳನ್ನು ನೀವು ಪ್ರವೇಶಿಸಿದ ರೀತಿ, ಅದರ ಒಳಹೊಕ್ಕು ನೋಡಿದ ರೀತಿ ಮತ್ತು
ಅನಾವರಣಗೊಳಿಸಿದ ಶೈಲಿ, ಅನುಭವ, ಕೋಮಲತೆ, ತೀಕ್ಷಣತೆ ಮತ್ತು ಕಾವ್ಯ ಕೃಷಿಯಲ್ಲಿ ನಿಮಗಿರುವ
ಪ್ರಭುದ್ದತೆ ಭಕ್ತಿ ಎಲ್ಲವನ್ನು ನಾನು ಕಂಡೆ.
ಸಾಹಿತ್ಯ ಲೋಕದ ಜನಪ್ರಿಯ ಕವಿಗಳ
ಸಾಲಿಗೆ ಸೇರುವ ಎಲ್ಲಾ ರೀತಿಯ ಅರ್ಹತೆ ಮತ್ತು
ಸಾಮರ್ಥ್ಯ ಗಾಯದ ಹೂವುಗಳಿಗೆ ಇದೆ. ಆ ಮೂಲಕ ಕವಿಯಾದ ನಿಮಗೂ ಇದೆ ಎಂದು ಸಾಕ್ಷಿಕರಿಸಿದ್ದಿರಿ.
ಗಾಯದ ಹೂವುಗಳ ಬುಟ್ಟಿಯಲ್ಲಿ ಭಾಷೆ, ಮಣ್ಣಿನ ಸತ್ವ, ಪ್ರಕೃತಿಯ ವೈಭವ, ಹಕ್ಕಿಗಳ ಚಿಲಿಪಿಲಿ,
ಪ್ರತಿಭಟನೆ, ಆಧುನಿಕ ಬದುಕು, ಅದರೊಳಗಿನ ಜಟಿಲತೆ, ಕುಟಿಲತೆ ಎಲ್ಲವೂ ಅನಾವರಣಗೊಳಿಸುವ ನಿಮ್ಮ
ಶ್ರಮ ಇಷ್ಟವಾಯಿತು. ಪ್ರಕೃತಿ ಮತ್ತು ಮನುಷ್ಯನ ನಡುವೆ ನಿಂತು ಜಗತ್ತನ್ನು ನೋಡಿದ ದೃಷ್ಟಿಕೋನ
ನನಗೆ ಒಟ್ಟಾರೆ ನಿಮ್ಮ ಕವನ ಸಂಕಲನ ಓದಿಕೊಂಡು ಹೋದಾಗ ಇಷ್ಟವಾಗಿದ್ದು. ಕವಿತೆಯನ್ನು ಕ್ಲೀಷ್ಟತೆಯ ಗೂಡಾಗಿಸದೆ
ಇಷ್ಟವಾಗಿ ಓದಿಕೊಂಡು ಹೋಗುವಂತೆ ಮಾಡಿದ ನಿಮ್ಮ ಶ್ರಮ ಸಾರ್ಥಕವಾಗಿದೆ . ನಿಮ್ಮ ಲೇಖನಿಯಿಂದ
ಹೆಚ್ಹು ಹೆಚ್ಚು ಕವಿತೆಗಳು ಮೂಡಲಿ ಬದುಕು ಸುಂದರವಾಗಿರಲಿ.