Friday, 16 January 2026

ನಾನು ಬದುಕುತ್ತೇನೆ  ಹೇಗೋ ಅಲ್ಲ, ಉತ್ತಮ ಪ್ರಜೆಯಾಗಿ

    
ಕೆ.ಎಸ್‌ .ಧನಂಜಯ

ಮಾದಕ ವಸ್ತು ಇತ್ತೀಚಿನ ದಿನಗಳಲ್ಲಿ ಯುವ ಜನತೆಯ ಮದ್ಯೆ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ. ಡ್ರಗ್ಸ್‌ ಎನ್ನುವುದು ಒಂದು ಪದವಲ್ಲ ಅದು ಯುವ ಮನಸ್ಸಿನ ಮೇಲೆ ಬೀಳುವ ಅಂಧಕಾರದ ನೆರಳು. ಕ್ಷಣಿಕ ಸುಖದ ಭ್ರಮೆಯನ್ನು ತೋರಿಸಿ, ಶಾಶ್ವತ ನೋವಿನ ದಾರಿಯತ್ತ ಕರೆದುಕೊಂಡು ಹೋಗುವ ಮೌನ ವಂಚಕ. ಅದು ಸ್ನೇಹವಲ್ಲ, ಸಹಾಯವಲ್ಲ, ಆಶ್ರಯವೂ ಅಲ್ಲ ಮೆದುಳಿನ ನೈಸರ್ಗಿಕ ಬೆಳಕನ್ನು ಆರಿಸಿ
ಕೃತಕ ಹೊಳಪಿನಿಂದ ಬದುಕನ್ನು ಮಂಕಾಗಿಸುವ ಅಪಾಯಕಾರಿ ಮೋಸ.  ವಿದ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳು ಕಳೆದುಹೋದರೆ ಅವು ಮರಳಿ ಬರಲಾರವು  ಆದ್ದರಿಂದ, ಇಂದೇ ಒಂದು ದೃಢ ನಿರ್ಧಾರಕ್ಕೆ ಬನ್ನಿ

ಇಂದು ಡ್ರಗ್ಸ್ ಅನ್ನು ಕೆಲವರು ಟ್ರೆಂಡ್, ಸ್ಟೈಲ್, ಕೂಲ್ನೆಸ್  ಅಂತ ಕರೆಯುತ್ತಾರೆ. ಆದರೆ ನಿಜ ಹೇಳಬೇಕೆಂದರೆ  ಡ್ರಗ್ಸ್ ಒಂದು ನಿಧಾನವಾದ ಆತ್ಮಹತ್ಯೆ.  ಮಾದಕ ವಸ್ತು ಮಾರಾಟ, ಸೇವನೆ ಮತ್ತು ಸಾಗಾಟ NDPS ಕಾಯ್ದೆಯಡಿಯಲ್ಲಿ ಪೊಲೀಸರಿಗೆ FiR ದಾಖಲಿಸುವ ಅವಕಾಶವಿದೆ, 2 ವರ್ಷ ಸೆರೆವಾಸ ಎಲ್ಲವೂ ಇದರಲ್ಲಿ ಸೇರಿದೆ. ಮಾದಕ ವಸ್ತುಗಳು ಮನಸ್ಥಿತಿಯನ್ನು ಹದಗೊಳಿಸುವ ಅಥವಾ ಮೂಡ್ ಕೊಡುವ  ಸಾಧನವಂತು ಅಲ್ಲವೇ ಅಲ್ಲ. ಯುವಕನಾಗಿರುವುದು ಅಪಾಯ ತೆಗೆದುಕೊಳ್ಳುವುದಕ್ಕೆ ಅಲ್ಲ ಯುವಕನಾಗಿರುವುದು ಜವಾಬ್ದಾರಿ ಹೊರುವುದಕ್ಕೆ. ಡ್ರಗ್ಸ್‌ ಎನ್ನುವುದು  ಮೆದುಳಿನ ನೈಸರ್ಗಿಕ ರಾಸಾಯನಿಕವನ್ನು ಕುಗ್ಗಿಸಿ, ತಾತ್ಕಾಲಿಕ ರಾಸಾಯನಿಕದ ಮೂಲಕ ಮೆದುಳಿನ ಕಾರ್ಯವಿಧಾನವನ್ನು ಏರು ಪೇರು ಮಾಡುವ ಸಾಧನ. ಮಾದಕ ವಸ್ತು ಉಪಯೋಗಿಸುವುದರಿಂದ ಮೆದುಳಿನಲ್ಲಿ ಬದಲಾವಣೆ ಉಂಟಾಗಿ ಹೆಚ್ಚಾಗಿ ಬಳಸುವಂತೆ ಪ್ರಚೋದಿಸುತ್ತದೆ. ವ್ಯಸನಕ್ಕೆ ಒಳಾಗಾದ ವ್ಯಕ್ತಿಯನ್ನು ಗಂಭೀರ ಅಪರಾಧದಲ್ಲಿ ತೊಡಗುವಂತೆ ಮಾಡುತ್ತದೆ.  ವಾಹನ ಚಾಲನೆ ಮಾಡುವಾಗ ಡ್ರಗ್ಸ್ ತೆಗೆದುಕೊಂಡು ವಾಹನ ಚಾಲನೆ ಮಾಡುವುದು ಮಾತ್ರವಲ್ಲ ಅದು ವಿಪರೀತ ವೇಗವಾಗಿ ವಾಹನ ಚಾಲನೆ ಮಾಡುವುದಕ್ಕೂ ಅಪಘಾತವಾಗುವುದಕ್ಕೂ ಪ್ರೇರಪಿಸುವ ಎಲ್ಲಾ ಸಾಧ್ಯತೆ ಇರುತ್ತದೆ. ದುರ್ಬಲ ಮತ್ತು  ಕಡಿಮೆ ಮನೋ ಸಾಮರ್ಥ್ಯದ ವ್ಯಕ್ತಿಗಳು ಇದಕ್ಕೆ ಹೆಚ್ಚು ಬಲಿಯಾಗುತ್ತಾರೆ. ಸೋಮಾರಿತನ ಮತ್ತು ದೈನಂದಿನ ವರ್ತನೆಯಲ್ಲಿ ಬದಲಾವಣೆ, ಏಕಾಂಗಿತನ ಬಯಸುವುದು, ಸಮಾಜ ಮತ್ತು ಜನರಿಂದ ದೂರವೇ ಉಳಿಯುವುದು ಇದರ ಪ್ರಮುಖ ಲಕ್ಷಣ.

ಡ್ರಗ್ಸ್ ಸೇವನೆಯಿಂದ ಡೋಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ ಇದನ್ನು ಸೇವಿಸುವವರಲ್ಲಿ ಹೆಚ್ಚಾಗಿ ಮೆದುಳಿನ ಸಂದೇಶ ಪುನಾರವರ್ತನೆಯಾಗುತ್ತದೆ, ಅಂದರೆ ಅಪರಾಧಗಳನ್ನು ಮಾಡಲು ಪ್ರಚೋದನೆ. ಮೆದುಳಿನ ಸೂಕ್ಷ್ಮತೆ ಕಡಿಮೆಯಾಗುವುದು, ವಸ್ತು ಮತ್ತು ವಿಷಯದಲ್ಲಿ ಆಸಕ್ತಿ ಕಡಿಮೆಯಾಗುವುದು, ಆಲೋಚನಾ ಕ್ರಮದಲ್ಲಿ ಗೊಂದಲವಾಗುವುದಲ್ಲದೆ ಯಾವುದೇ ಪ್ರಯೋಜನವಿಲ್ಲ. ಕಲಿಕೆ, ನಿರ್ಧಾರ, ತೀರ್ಪು, ಮತ್ತು ವರ್ತನೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನಸ್ಸು ದುರ್ಬಲವಾಗುವುದರ ಜೊತೆಗೆ, ಖಿನ್ನತೆ, ಮತ್ತು ಸಮಾಜದ ತಿರಸ್ಕಾರಕ್ಕೆ ಒಳಗಾಗಿ, ತೀವ್ರ ತರಹದ ಖಾಯಿಲೆಗೆ ಒಳಗಾಗಬಹುದು. ಮಾತ್ರವಲ್ಲ ನಡುಗುವಿಕೆ, ನಿದ್ರೆ ಮತ್ತು ಹಸಿವಿನಲ್ಲಿ ಏರು ಪೇರು, ಮೂರ್ಛೆ ಹೋಗುವುದು, ತೂಕದಲ್ಲಿ ಏರಿಳಿತ, ಅತಿಯಾದ ಅಥವಾ ಅತೀರೇಕದ ಚಟುವಟಿಕೆಗಳು ಮಾಡುವಂತೆ ಪ್ರಚೋದಿಸುವ ಸಾಧ್ಯತೆಯೇ ಹೆಚ್ಚು.  ಮನೋ ವೈದ್ಯರ ಮತ್ತು ಆಪ್ತ ಸಮಾಲೋಚನೆ ಮೂಲಕ ಚಿಕತ್ಸೆ ಇದ್ದರೂ ವಿಧ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳು ಇದರಲ್ಲೇ ಕಳೆದು ಹೋದರೆ ಹೇಗೆ?

ವಿದ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳು ಕಳೆದುಹೋದರೆ ಅವು ಮರಳಿ ಬರಲಾರವು. ಡ್ರಗ್ಸ್‌ ಎನ್ನುವುದು ಒಂದು ಬಾರಿ ಸ್ಪರ್ಶಿಸಿದರೆ ಸಾಕು, ಆಲೋಚನೆಗಳ ಹಗ್ಗ ಸಡಿಲಗೊಳ್ಳುತ್ತದೆ. ಗುರಿಗಳು ಮಸುಕಾಗುತ್ತವೆ, ಕನಸುಗಳು ನಿಧಾನವಾಗಿ ಉಸಿರುಗಟ್ಟುತ್ತವೆ. ಡ್ರಗ್ಸ್ ಸುಖ ಕೊಡದು  ಅದು ಆಸೆ ಹುಟ್ಟಿಸುತ್ತದೆ ಆಸೆ ತೃಪ್ತಿ ಕೊಡುವುದಿಲ್ಲ  ಅದು ವ್ಯಸನವಾಗಿ ಬಂಧಿಸುತ್ತದೆ. ಅಂತಹ ವ್ಯಸನಕ್ಕೆ ಸಿಲುಕಿದ ವ್ಯಕ್ತಿ ಒಬ್ಬನೇ ಅಲ್ಲ, ಅವನೊಂದಿಗೆ ಕುಟುಂಬ, ಸಮಾಜ, ಭವಿಷ್ಯ ಎಲ್ಲವೂ ಗಾಯಗೊಳ್ಳುತ್ತವೆ. ಡ್ರಗ್ಸ್ ವಿರುದ್ಧ ಹೋರಾಟ ಕಾನೂನಿನ ವಿಷಯ ಮಾತ್ರವಲ್ಲ  ಅದು ಆತ್ಮಜಾಗೃತಿಯ ಆವಾಹನೆ.  ಆಗಾಗಿ ಇಂದೇ ಒಂದು ಉತ್ತಮವಾದ ನಿರ್ಧಾರಕ್ಕೆ ಬನ್ನಿ, ಮಾದಕ ವಸ್ತು ತೆಗೆದುಕೊಳ್ಳುವುದಿಲ್ಲ ಅದರ ಬಳಿಗೆ ಹೋಗುವುದಿಲ್ಲ ಎಂದು ಇಂದೇ ನಿರ್ಧರಿಸಿ ನಿಮ್ಮ ಬದುಕು ನಿಮ್ಮ ಕೈಯಲ್ಲಿದೆ, ನಾನು ಬದುಕುತ್ತೇನೆ ಹೇಗೂ ಅಲ್ಲ ಉತ್ತಮ ಪ್ರಜೆಯಾಗಿ ಎನ್ನುವುದನ್ನು ಇಂದೇ ಶಪಥ ಮಾಡಿ.

Thursday, 8 January 2026

ಸಾಹಿತಿ, ಚಿಂತಕ , ಶ್ರೀ ಅರವಿಂದ ಚೊಕ್ಕಾಡಿಯವರ ಈ ದಿನ ಪುಸ್ತಕಕ್ಕೆ ಬರೆದ ಮುನ್ನುಡಿ

 ಕೆ.ಎಸ್‌.ಧನಂಜಯ.


  
            
           ಮುಂಜಾನೆ ನನ್ನ ಹಾಗೆ ಎಲ್ಲಾರೂ ಮೊಬೈಲ್‌ ನೊಡುವುದು ಇಂದಿನ ದಿನಗಳಲ್ಲಿ ಸರ್ವೆ ಸಾಮನ್ಯ, ಒಂದು ಸಂದೇಶ ಬಹಳ ವಿಶೇಷವಾಗಿ ಕಾಣಿಸಿತ್ತು. ನಾನು ನಿಮ್ಮ ಬಳಿ ಪುಸ್ತಕಕ್ಕೆ ಒಂದು ಮುನ್ನುಡಿ ಕೇಳಿದ್ದೆ , ನಾನು ಆಷ್ಟೇ ನಯವಾಗಿ ನುಣುಚಿಕೊಳ್ಳುವ ಎಂದು ನೆನೆಸಿ “ ಸರ್‌ ನನಗೆ ಮುನ್ನುಡಿ ಎಲ್ಲಾ ಬರೆಯಲು ಆಗಲ್ಲಎಂದೆ , ಮತ್ತೊಂದು ಸಂದೇಶ ಬಂತು  ನಿಮ್ಮಿಂದ ಆಗುತ್ತದೆ ನೀವು ಬರೆಯಿರಿ. ಇದು ಪಕ್ಕಾ ಗುರುಗಳ ಆದೇಶದ ಶೈಲಿ ನಾನು ಮೌನವಾದೆ. ಹೌದು "ಈ ದಿನ" ಬಹಳಷ್ಟು ಜನರಿಗೆ ಹೇಗೆ ಬದುಕಬೇಕು ಎನ್ನುವ ರಾಮಾಯಣ ತಾಯಿಯಾದರೆ, ಹೇಗೆ ಬದುಕಬಾರದು ಎನ್ನುವ ಮಹಾಭಾರತ ತಂದೆಯಾಗಬೇಕು. ಆ ಮೂಲಕ ಒಳ್ಳೆಯ ಸಂಸ್ಕಾರ ಕಲಿಸುವ ಅಗತ್ಯ ಈ ದಿನದ ಪ್ರಸ್ತುತತೆ. 
        ಒಟ್ಟು 43 ಲೇಖನಗಳ ಕೃತಿಯಲ್ಲಿ ಶಿಕ್ಷಣ, ಕೃಷಿ, ರಾಜಕೀಯ, ಆರ್ಥಿಕತೆ, ಸಾಹಿತ್ಯದ ವಿಷಯಗಳ ಜೊತೆಗೆ ಗಾಂಧಿ ವಿಚಾರಧಾರೆಯನ್ನು ವಿಶ್ಲೇಸಿಸುವ ಮೂಲಕ ಬೆಳಕು ಚೆಲ್ಲುವ ಪ್ರಯತ್ನವನ್ನು ಅರವಿಂದ ಸರ್ ಮಾಡಿದ್ದಾರೆ ಮಾತ್ರವಲ್ಲ ಅವರ ಅನುಭವಕ್ಕೆ ಕೈಗನ್ನಡಿಯಂತೆ ಕೃತಿ ಹೊರಹೊಮ್ಮಿದೆ. ನಿಜ, ಮನುಷ್ಯ ಅಂತರಂಗದ  ಕೆಡುಕುಗಳ ವಿರುದ್ದ ಸಂಘರ್ಷಕ್ಕಿಳಿದು ಒಳಿತನ್ನು ಸಾಧಿಸಬೇಕು ಅದು ಧರ್ಮಕ್ಕೆ ಪೂರಕ, ಅದು ಹೊರಗಿನ ವಿಚಾರಕ್ಕೆ ಬಳಸಿದರೆ ಅದು ಮಾರಕ ಎನ್ನುವ ಮೂಲಕ ಜಿಹಾದ್‌ನ ಅರ್ಥ, ಸಮಾನ ನಾಗರಿಕ ಸಂಹಿತೆ ಎನ್ನುವುದು ಸಮಾನ ಧಾರ್ಮಿಕ ಸಂಹಿತೆಯಲ್ಲ, ಭಾಗ್ಯಗಳೊಂದಿಗೆ ಸಲ್ಲಾಪ, ಆದರ್ಶಗಳಿಲ್ಲದ ಸಮಾಜದಲ್ಲಿ ನಾಯಕತ್ವದ ಸವಾಲುಗಳು, ಮಕ್ಕಳಲ್ಲಿ ಉಳಿಸಿಕೊಳ್ಳಬೇಕಾದ ಶೈಕ್ಷಣಿಕ ಪ್ರಜ್ಞೆ ಎನ್ನುವುದುದರೊಂದಿಗೆ ಲೇಖಕರು ಹತ್ತು ಹಲವಾರು ಪ್ರಚಲಿತ ವಿದ್ಯಾಮಾನಳ ಬಗ್ಗೆ ಚರ್ಚೆ ನಡೆಸಿದ್ದಾರೆ.  ಜೊತೆಗೆ ಹೆಚ್ಚು ಶೈಕ್ಷಣಿಕ ಕ್ಷೇತ್ರದ  ವಿಷಯಗಳ ಬಗ್ಗೆ ಪ್ರಸ್ತಾಪಮಾಡಿರುವುದು ಒಳ್ಳೆಯ ಬೆಳವಣಿಗೆ. ಏಕೆಂದರೆ ಯಾವುದೇ ಒಂದು ಉತ್ತಮ ವಿಷಯಗಳನ್ನು ವಿಧ್ಯಾರ್ಥಿಗಳ ಮನಸಿನಲ್ಲಿ ಭಿತ್ತಿದರೆ ಅದಕ್ಕಿಂತ ಒಳ್ಳೇಯ ಕಾರ್ಯ ಮತ್ತೊಂದಿಲ್ಲ. ಸಂಗ್ರಹಿಸಿದ ನೀರು ಮಲೀನವಾಗಿದ್ದರೆ ಆ ನೀರನ್ನು ಶುದ್ದ ನೀರಿನೊಂದಿಗೆ ಬಿಟ್ಟರೆ ಅದು ಕೂಡ ಮಲೀನವಾಗುತ್ತದೆ. ಶಿಕ್ಷಣ ಸಂಸ್ಥೆಗಳು ಅಂತಹ ಶುದ್ದ ನೀರನ್ನು ಉತ್ಪಾದಿಸುವ ಘಟಕಗಳಾದರೆ ಮಾತ್ರ ಉತ್ತಮ ಸಮಾಜದ ನಿರೀಕ್ಷೆ ಸಾಧ್ಯ.  ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ತಳ ಮಟ್ಟದಲ್ಲಿ ವ್ಯವಸ್ಥೆಯನ್ನು ಸರಿಪಡಿಸುವ ಅನಿವಾರ್ಯತೆ ಪ್ರಸ್ತುತ ಸಮಾಜಕ್ಕೆ ಇದೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ ಇದು ಈ ದಿನದ ಅನಿವ್ಯಾರ್ಯತೆಯೂ ಹೌದು.  

        ನಿಜ, ಲೇಖಕರೇ ಹೇಳಿದಂತೆ ಸುಧಾರಣೆಯಾಗಬೇಕಾಗಿರುವುದು ಜನರು ಮತ್ತು ಸಮಾಜ. ಜನರು ಹೆಚ್ಚು ಹೆಚ್ಚು ಇತಿಹಾಸವನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ.  ಇತಿಹಾಸದ ಅರಿವಿಲ್ಲದೆ ಭವಿ಼ಷ್ಯವನ್ನು ಕಟ್ಟಲು ಸಾಧ್ಯವಿಲ್ಲ ಎನ್ನುವ  ಅಂಬೇಡ್ಕರ್‌ ವಾಣಿಯನ್ನು ಸಮರ್ಥವಾಗಿ ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ, ಆ ಮೂಲಕ ಯುವ ಸಮುದಾಯವನ್ನು ಚಿಂತನೆಗೆ ದೂಡುವ ಅವರ ಪ್ರಯತ್ನ ಹಲವಾರು ಲೇಖನಗಳಲ್ಲಿ ಎದ್ದು ಕಾಣುವ ಅಂಶವಾಗಿದೆ, ಸ್ವಾಭಾವಿಕವಾಗಿ ಅರವಿಂದ ಸರ್‌ ಅವರದು ಚರ್ಚೆಗೆ ಆಹ್ವಾನಿಸುವ ಸ್ವಭಾವ. ಅದಕ್ಕಾಗಿ ಅವರು ಪ್ರಚಲಿತ ವಿದ್ಯಾಮಾನಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ, ಆ ಮೂಲಕ ಈ ಜಡ್ಡು ಕಟ್ಟಿದ ಸಮಾಜಕ್ಕೆ ಅವರದೆ ಆದ ರೀತಿಯಲ್ಲಿ ಚಿಕಿತ್ಸೆಯನ್ನು ಕೊಡುವ ಕೆಲಸವನ್ನು ಯತ್ತೇಚ್ಚವಾಗಿ ಮಾಡುತ್ತಿರುವುದು ಅವರ ಮುಖ ಪುಸ್ತಕ ಗೆಳೆಯರಾದ ನನ್ನಂತೆ ಹಲವರಿಗೆ ಗೊತ್ತಿರುವ ವಿಷಯವೇ.
  ಚರಕ-ಬಟ್ಟೆ, ಬ್ರಿಟನ್‌ ಆರ್ಥಿಕತೆಗೆ ಪೆಟ್ಟು ಕೊಟ್ಟ ಪರಿಣಾಮ ಬ್ರಿಟೀಷರು ದೇಶ ಬಿಟ್ಟು ಹೋದರೇನೋ ಸರಿ, ಎಲ್ಲಾದಕ್ಕೂ ಮಿಗಿಲಾಗಿ ಒಂದು ಕಂದಕವನ್ನು ನಿರ್ಮಿಸಿ ಹೋದರು ಅದು ಇಂದಿಗೂ ಜೀವಂತವಾಗಿದೆ ವಾಸ್ತವವಾಗಿ ಅದು ಯಾರಿಗೂ ಬೇಡ, ಆ ಕಂದಕ ಜೀವಂತವಾಗಿದ್ದರೆ ಮಾತ್ರ ನಮ್ಮ ಕೆಲಸಗಳು ಸಲೀಸು ಎನ್ನುವ ಕಲ್ಪನೆ ಕೆಲವು ವ್ಯಕ್ತಿಗಳ ಮದ್ಯೆ  ಇನ್ನೂ ಗಾಢವಾಗಿದೆ. ಏಕೆಂದರೆ ಬೇಡದ ವಿಷಯಗಳು ಸುಲಭವಾಗಿ ಅರ್ಥವಾಗುವ ಹಾಗೆ ಮುದ್ರ ಯೋಜನೆ ಅರ್ಥವಾಗೋಲ್ಲ. ಲೇಖಕರಿಗೆ ಬ್ಯಾರಿಗಳೊಂದಿಗೆ ಸಾಕಷ್ಟು ಒಡನಾಟ ಇದೆ ಎನ್ನುವುದು ಅವರ ಬರಹದ ಮೂಲಕ ಅರ್ಥವಾದರೂ ಅವರ ಪರವಾಗಿ ಮಾತನಾಡಿ, ಅವರಿಗೆ ಇಷ್ಟವಾಗಿ ಮಾತನಾಡಿ  ಆಗಬೇಕಾದ ಲಾಭವೇನು ಇಲ್ಲ ಎನ್ನುವ ಲೇಖಕರ ನಿಲುವು ಪ್ರಶಂಸನೀಯ. ಎಲ್ಲಿದೆ ನಂದನ ? ಎಲ್ಲಿದೆ ಬಂಧನ ? ಎಲ್ಲಾವೂ ನಮ್ಮೊಳಗೆ ಇದೆ ಆದರೆ ಒಳಗಿನ ತಿಳಿಯನು ಕಲಕದೆ ಇದ್ದರೆ ಮಾತ್ರ ಅಮೃತದ ಸವಿಯಿರುವುದು  ಎನ್ನುವ ಕವಿವಾಣಿಯಂತೆ ಲೇಖಕನಾದವನು ಯಾರ ಮುಲಾಜಿಗೂ ಬರೆಯುವ ಪರಿಪಾಠವನ್ನು ಬೆಳೆಸಿಕೊಳ್ಳಬಾರದು ಅದರಿಂದ ಸಮಾಜಕ್ಕೆ ದಕ್ಕುವ ಲಾಭವಾದರೂ ಏನು ? ಅಡೆ ತಡೆಗಳು ಪ್ರತಿ ಕೆಲಸದಲ್ಲೂ ಬಂದೇ ಬರುತ್ತದೆ, ನಿಜ ಹೇಳಬೇಕೆಂದರೆ ಅಡೆತಡೆಗಳು ನಮ್ಮನ್ನು ಹೊರದಬ್ಬುವಂತೆ ಕಂಡರೂ ಅದು ವಾಸ್ತವವಾಗಿ ಹೊರದಬ್ಬಲು ಇರುವುದಿಲ್ಲ, ಬದಲಾಗಿ ಅವುಗಳನ್ನು ದಾಟಿ ಮುನ್ನುಗ್ಗಲು ನಮಗೆ ಅವಕಾಶ ನೀಡುವುದಕ್ಕಾಗಿರುತ್ತದೆ ಸೂಕ್ತ ಸಮಯಕ್ಕಾಗಿ ನಾವು ಸಂಯಮದಿಂದ ಕಾಯಬೇಕು ಅಷ್ಟೇ.
        ಲೇಖಕರು  ಸಾಮಾಜಿಕ , ಶಿಕ್ಷಣ ಗಾಂಧಿ ವಿಚಾರಧಾರೆ ಬಗ್ಗೆ  ಮಾತ್ರ ಮಾತನಾಡಿಲ್ಲ. ಐದನೆ ಆಧ್ಯಾಯದಲ್ಲಿ ಗುರು ನಮನ ಲೇಖನದಲ್ಲಿ ತನ್ನ ಸ್ವಂತ ಬದುಕು ಪಟ್ಟ ಪಾಡು ಕುರಿತು ಆತ್ಮಾವಲೋಕನದ ಒಳನೋಟ ನೀಡಿರುವುದು ವಿಶಿಷ್ಟವಾಗಿ ತೋರುತ್ತದೆ. ಲೇಖಕರು ತನ್ನ ಅಮ್ಮ, ಗುರುಗಳ ಬಗ್ಗೆ ಪ್ರಸ್ತಾಪಿಸುವಾಗ ನನಗೆ ಸಹಜವಾಗಿ ಕಣ್ಣಾಲಿಗಳು ಒದ್ದೆಯಾಯಿತು. ಆದರೆ ನಾನು ಸೋತೆ ನನ್ನಿಂದ ಏನು ಆಗಲ್ಲ ಎಂದು ಕುಳಿತ್ತಿದ್ದರೆ ಅವರೊಳಗಿನ ಒಬ್ಬ ಸಹೃದಯ ಹಾಗೂ ಒಬ್ಬ ಛಲವಂತ ಮನುಷ್ಯ, ಬರಹಗಾರ ಸತ್ತು ಹೋಗುತ್ತಿದ್ದನೋ ಎನೋ. ತಾವನುಭವಿಸಿದ ತಳಮಳ ನೋವು ಆತಂಕದ ಜೊತೆಗೆ ಅವರ ಜೀವನೋತ್ಸಾಹ ಮಾತ್ರ ಅದ್ಬುತ ಮಾತ್ರವಲ್ಲ ಅನುಕರಣೀಯ ಕೂಡ. ಎರಡು ತರಹದ ಅನುಭವಗಳು ಒಬ್ಬ ಓದುಗನಾಗಿ ನನಗೆ ಅನುಭವಕ್ಕೆ ಬಂದರೂ ಎಲ್ಲೋ ಒಂದು ಕಡೆ ಬೇಂದ್ರೆಯವರ ಸಾಲುಗಳು ನೆನಪಾಯಿತು "ಎನ್ನ ಪಾಡೆನಗಿರಲಿ,ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ .ಲೇಖಕರು ಕೂಡ ಈ ನಿಯಮವನ್ನು ಈ ಕೃತಿಯಲ್ಲಿ ಗಂಭೀರವಾಗಿ ಪಾಲಿಸಿದಂತೆ ಇದೆ. ಮನುಷ್ಯ ಜೀವನ ರಹಸ್ಯದ ಸತ್ವಕ್ಕೆ ಶರಣಾಗಬೇಕು ಜೀವನವನ್ನು ಸಮವೆನಿಸುವ ಯತ್ನಕ್ಕೆ ಶರಣಾಗಿಸಿ ಬದುಕಬೇಕು. ಕೇವಲ ಖಗ-ಮಿಗಗಳಂತೆ ಹೊಟ್ಟೆಪಾಡನ್ನು ಮಾತ್ರ ನಾವುಗಳು  ನೋಡಿಕೊಂಡರೆ ಸಮಾಜಕ್ಕೆ ನಮ್ಮ ಹೆಚ್ಚುಗಾರಿಕೆ ಏನೂ ಇಲ್ಲ.
    ಸಾಮಾಜಿಕ ಜಾಲತಾಣದಲ್ಲಿ ತಲೆ ಬಗ್ಗಿಸಿ ಮಗ್ನವಾಗಿರುವ ಇಂದಿನ ಯುವಜನತೆಗೆ ಈ ದಿನದಲ್ಲಿರುವ ಲೇಖನಗಳು ಈ ದಿನದ ದೈನಂದಿನ ಆಗು-ಹೋಗುಗಳು ತಲೆ ಎತ್ತಿ ನೋಡುವಂತೆ  ಓದುಗರ ಕಣ್ತೆರಸಲಿ, ಅರವಿಂದ ಸರ್‌ ನಿಮ್ಮಿಂದ ಇನ್ನು ಹೆಚ್ಚು ಕೃತಿಗಳು ಹೊರಹೊಮ್ಮುವ ಮೂಲಕ ಪ್ರಸ್ತುತ ಸಮಾಜಕ್ಕೆ ಮುಂದಿನ ದಾರಿ ದೀಪವಾಗಿ ಕಂಗೊಳಿಸಲಿ ಎಂದು ಹಾರೈಸುವೆ.

17.10.2023                      

Monday, 5 January 2026


ಹಸಿರಿನ ಮಡಿಲಲ್ಲಿ ಶಾಂತಿಯ ಮಹಾಧಾಮ            

                ಸುಂಟಿಕೊಪ್ಪ ನಾಕೂರಿನ ಜಿರಾವಾಲಾ ಧಾಮ

ಕೆ.ಎಸ್.ಧನಂಜಯ
                            
            ಶಾಂತಿಯ ಕಲ್ಲುಗೋಡೆಗಳು ಕಾಲದೊಂದಿಗೆ ಮೌನವಾಗುತ್ತಿದ್ದ ಈ ಹೊತ್ತಿನಲ್ಲಿ, ಕೊಡಗಿನ ಸುಂಟಿಕೊಪ್ಪದ ನಾಕೂರಿನ ನೆಲದಲ್ಲಿ ಮತ್ತೆ ಒಂದು ಮಹತ್ವದ ಜೈನ ಅಧ್ಯಾಯ ಬರೆಯಲ್ಪಡುತ್ತಿದೆ. ಶ್ರೀ ಓಂ ಶಾಂತಿ ಚಾರಿಟೇಬಲ್ ಟ್ರಸ್ಟ್‌ನ ಆಶ್ರಯದಲ್ಲಿ, ಸುಮಾರು 60–70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿರಾವಾಲಾ ಧಾಮ, ಜೈನ ಧರ್ಮದ ಆತ್ಮಸೌಂದರ್ಯಕ್ಕೆ ಹೊಸ ಜೀವ ತುಂಬುವ ಮಹಾಸಂಕಲ್ಪವಾಗಿದೆ. ಪರ್ವತಗಳ ಮಡಿಲಲ್ಲಿ, ಹಸಿರಿನ ಮಧ್ಯೆ ಉದಯಿಸುತ್ತಿರುವ ಜಿರಾವಾಲಾ ಧಾಮ ಕೇವಲ ಭವ್ಯ ಮಂದಿರವಲ್ಲ ಬದಲಾಗಿ ಅದು ಅಹಿಂಸೆ, ಶಾಂತಿ ಮತ್ತು ಆತ್ಮಸಾಧನೆಯ ಆಧುನಿಕ ತೀರ್ಥಕ್ಷೇತ್ರ. ಶತಮಾನಗಳ ಹಿಂದೆ ಮುನಿಗಳ ಪಾದಸ್ಪರ್ಶದಿಂದ ಪವಿತ್ರಗೊಂಡ ಕೊಡಗಿನ ನೆಲ, ಇಂದು ಮತ್ತೆ ಜೈನ ಧ್ಯಾನದ ಶಬ್ದರಹಿತ ನಾದವನ್ನು ಆಲಿಸಲು ಸಜ್ಜಾಗಿದೆ.

ಕ್ರಿ.ಶ. ಐದು–ಆರು ಶತಮಾನಗಳ ಹಿಂದೆ ಜೈನ ಮುನಿಗಳು ಅರಣ್ಯಪಥಗಳನ್ನು ದಾಟಿಕೊಂಡು ಕೊಡಗಿಗೆ ಬಂದಾಗ, ಅವರು ಜೊತೆ ತಂದಿದ್ದು ಕೇವಲ ಧರ್ಮವಲ್ಲ ಬದಲಾಗಿ ಬದುಕಿನ ಹೊಸ ಶಿಸ್ತು. ಗಂಗ, ಕದಂಬ ಹಾಗೂ ಹೊಯ್ಸಳರ ರಾಜಾಶ್ರಯದಿಂದ ಜೈನ ಧರ್ಮ ಇಲ್ಲಿ ಬೇರು ಬಿಟ್ಟಿತು ಎನ್ನುವುದು ಇತಿಹಾಸದಿಂದ ತಿಳಿದು ಬರುವ ಸತ್ಯ. ಅರಣ್ಯಗಳ ಅಂಚಿನಲ್ಲಿ, ಗ್ರಾಮಗಳ ನೆಮ್ಮದಿಯಲ್ಲಿ, ಶಾಂತಿಯ ಆಶ್ರಯಗಳಾಗಿ ಬಸದಿಗಳು ಉದಯಿಸಿದವು. ಬಸದಿ ಎಂದರೆ ದೇವಾಲಯ ಮಾತ್ರವಲ್ಲ ಅದು ಆತ್ಮದೊಳಗೆ ತಿರುಗಿ ನೋಡುವ ದ್ವಾರ. ಕೊಡಗಿನ ಜೈನ ಬಸದಿಗಳು ಅಲಂಕಾರದ ಗದ್ದಲವಿಲ್ಲದೆ, ಸರಳತೆಯಲ್ಲೇ ಭವ್ಯತೆಯನ್ನು ಕಂಡುಕೊಂಡವು. ಕಲ್ಲಿನ ಸ್ತಂಭಗಳು ಕಾಲದ ಹೊರೆ ಹೊತ್ತಿದ್ದರೂ, ಅವುಗಳೊಳಗಿನ ಶಾಂತಿ ಎಂದಿಗೂ ಕುಸಿಯಲಿಲ್ಲ. ತೀರ್ಥಂಕರರ ಧ್ಯಾನಮುದ್ರೆ ಮನಸ್ಸಿಗೆ ಮೌನದ ಭಾಷೆ ಕಲಿಸಿತು. ಜೈನ ಧರ್ಮ ಕೊಡಗಿನ ಸಮಾಜಕ್ಕೆ ಅಹಿಂಸೆ, ಸತ್ಯ, ತ್ಯಾಗ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ನೀಡಿತು. ಜೈನರು ವ್ಯಾಪಾರ, ಕೃಷಿ, ವಿದ್ಯಾಭ್ಯಾಸದ ಮೂಲಕ ಸಮಾಜದ ಅಭಿವೃದ್ಧಿಗೆ ಶಾಂತವಾಗಿ, ಅಂದರೆ ಸ್ಥಿರವಾಗಿ ಕೊಡುಗೆ ನೀಡಿದರು. ಬಸದಿಗಳು ಆ ಮೌಲ್ಯಗಳ ಮೌನ ಸಾಕ್ಷಿಗಳಾಗಿ ಉಳಿದಿವೆ. ಕಾಲ ಬದಲಾಗುತ್ತಿದ್ದಂತೆ, ಕೆಲವು ಬಸದಿಗಳಲ್ಲಿ ದೀಪ ಇನ್ನೂ ಬೆಳಗುತ್ತಿವೆ; ಕೆಲವು ಬಸದಿಗಳು ಮೌನವಾಗಿ ಸಂರಕ್ಷಣೆಯನ್ನು ಕಾಯುತ್ತಿವೆ. ಇತಿಹಾಸವನ್ನು ಉಳಿಸುವ ಜವಾಬ್ದಾರಿ ಇಂದಿನ ಪೀಳಿಗೆಯ ಕೈಯಲ್ಲಿದೆ ಎಂಬ ಸಂದೇಶವನ್ನು ಅವು ನಮಗೆ ನೆನಪಿಸುತ್ತವೆ.

ಈ ಧಾಮದಲ್ಲಿ ಕಲ್ಲಿನ ಶಿಲ್ಪಗಳಿಗೆ ಜೀವ ತುಂಬುವ ಕೈಗಳು, ಕೇವಲ ವಾಸ್ತುಶಿಲ್ಪವನ್ನು ಕಟ್ಟುತ್ತಿಲ್ಲ   ಅವು ನಂಬಿಕೆ, ತ್ಯಾಗ ಮತ್ತು ಭಕ್ತಿಯ ಭವಿಷ್ಯವನ್ನು ರೂಪಿಸುತ್ತಿವೆ. ತೀರ್ಥಂಕರರ ಪ್ರತಿಮೆಗಳು ಇಲ್ಲಿ ಧ್ಯಾನಮುದ್ರೆಯಲ್ಲಿ ನಿಂತು, ಅಶಾಂತ ಬದುಕಿಗೆ ಮೌನದ ಉತ್ತರ ನೀಡುವಂತೆ ಭಾಸವಾಗುತ್ತಿದೆ. ಕೊಡಗಿನ ಪುರಾತನ ಜೈನ ಬಸದಿಗಳು ಇತಿಹಾಸದ ಪುಟಗಳಾದರೆ, ಜಿರಾವಾಲಾ ಧಾಮ ವರ್ತಮಾನ ಮತ್ತು ಭವಿಷ್ಯದ ಸೇತುವೆ. ಕೊಡಗಿನ ಜೈನ ಬಸದಿಗಳು ಕಲ್ಲಿನಿಂದ ನಿರ್ಮಿತ ಕಟ್ಟಡಗಳಲ್ಲ; ಅವು ಶಾಂತಿಯ ತತ್ತ್ವವನ್ನು ಹೊತ್ತುಕೊಂಡ ಜೀವಂತ ಕಾವ್ಯಗಳು. ಆ ಕಾವ್ಯಕ್ಕೆ ಇಂದು ಜಿರಾವಾಲಾ ಧಾಮ ಹೊಸ ಪದ್ಯವನ್ನು ಸೇರಿಸುತ್ತಿದೆ. ಅಹಿಂಸೆಯ ಬೆಳಕು, ಮೌನದ ಮೂಲಕ ಮುಂದಿನ ಪೀಳಿಗೆಗಳ ಮನಸ್ಸಿನಲ್ಲಿ ಬೆಳಗುತ್ತಲೇ ಇರಲಿ.ಈ ಧಾಮದ ನಿರ್ಮಾಣವು ಪೂರ್ಣವಾಗಲು ಇನ್ನೋಂದೆರಡು ವರ್ಷ ಬೇಕಾಗುತ್ತದೆ ಎಂದು ಅಲ್ಲಿಯ ಮೇಲ್ವಿಚಾರಕರನ್ನು ಮಾತನಾಡಿಸಿದಾಗ ತಿಳಿದು ಬಂದ ವಿಷಯ. ಈ ಧಾಮ ಒಂದು ಸತ್ಯವನ್ನು ಮತ್ತೆ ಮತ್ತೆ ನೆನಪಿಸುತ್ತಿದೆ  ಧರ್ಮವು ಕಾಲಕ್ಕೆ ಬಂಧಿತವಲ್ಲ. ಶತಮಾನಗಳು ಬದಲಾಗಬಹುದು ಆದರೆ ಶಾಂತಿಯ ಅಗತ್ಯ ಎಂದಿಗೂ ಹಳೆಯದಾಗುವುದಿಲ್ಲ. ಕೊಡಗಿನ ಹಸಿರು ಮಡಿಲಲ್ಲಿ ಉದಯಿಸುತ್ತಿರುವ ಈ ಧಾಮ, ಅಹಿಂಸೆಯ ಶಾಶ್ವತ ಬೆಳಕನ್ನು ಮುಂದಿನ ಪೀಳಿಗೆಗಳಿಗೆ ಹಸ್ತಾಂತರಿಸುವ ದೀಪವಾಗಲಿ ಎನ್ನುವುದೆ ಆಶಯ ಕೂಡ.

Monday, 22 December 2025

 ಶ್ರದ್ದಾಂಜಲಿ...ಶ್ರೀನಿವಾಸನ್ 


ಕೆ.ಎಸ್‌.ಧನಂಜಯ

ಸಿನಿಮಾಗಳಲ್ಲಿ ನಟಿಸಿದ್ದರೂ ಬದುಕು ಸಾಗಿಸಲು ಹಣವಿಲ್ಲದ ಒಬ್ಬ ಯುವಕ. ಆತನಿಗೆ ಒಬ್ಬಳು ಪ್ರೇಯಸಿ  ಆದರೆ ಪ್ರೀತಿಯನ್ನು ಪೋಷಿಸಲು ಆರ್ಥಿಕ ಶಕ್ತಿ ಇರಲಿಲ್ಲ.ಅಂತಹ ಸಂಕಷ್ಟದ ಹೊತ್ತಲ್ಲಿಒಬ್ಬ ಕ್ರೈಸ್ತ ( ಇತ್ತೀಚೆಗೆ ಕ್ಯಾನ್ಸರ್‌ನಿಂದ ನಿಧನ ಹೊಂದಿದ ಇನೋಸಿಯಂಟ್ )ತನ್ನ ಹೆಂಡತಿಯ ಕೈ ಬಳೆಯನ್ನು ಗಿರವಿ ಅಂಗಡಿಯಲ್ಲಿಟ್ಟು ಅದರಲ್ಲಿ ಬಂದ ಹಣ  400 ರೂಪಾಯಿ ನೀಡಿದ, ಮತ್ತೊಬ್ಬ ಮುಸ್ಲಿಂ (ಮೇರು ನಟ ಮಮ್ಮೂಟ್ಟಿ) “ನಾಳೆ ನನ್ನ ಮದುವೆ ನನಗೆ 2000 ಹಣದ ಅವಶ್ಯಕತೆ ಇದೆ ಎಂದಾಗ 2000  ಕೊಟ್ಟು, ನಾನು ಮದುವೆಗೆ ಬರುತ್ತೇನೆ ಎಂದಾಗ ನೀವ್ಯಾರು ಬರುವುದು ಬೇಡ ಎಂದು ಸಂಭಂದಿಕರ ಮನೆಗೆಲ್ಲ ಆಟೋ ಮಾಡಿಕೊಂಡು ನಾಳೆ ನನ್ನ ಮದುವೆ ಆದರೆ ನೀವ್ಯಾರು ಬರುವುದು ಬೇಡ ಅಂತ ಹೇಳೊಕೆ ಬಂದೆ ಎಂದು ಹೇಳಿದ,  ಆ ಮೇರು ನಟ ಬೇರೆ ಯಾರು ಅಲ್ಲ ಮಲಯಾಳಂ ಚಿತ್ರರಂಗ ಕಂಡ ನಟ,ನಿರ್ದೇಶಕ, ನಿರ್ಮಾಪಕ, ಕಥೆಗಾರ ಶ್ರೀನಿವಾಸನ್. ಆ ಹಣದಲ್ಲಿ ಒಬ್ಬ ಹಿಂದು ಹುಡುಗಿಗೆ ತಾಳಿ ಕಟ್ಟಲಾಯಿತು. ರಿಜಿಸ್ಟರ್ ಆಫೀಸ್ ಆವರಣದಲ್ಲಿ, ಸದ್ದಿಲ್ಲದೆ, ಸಂಭ್ರಮವಿಲ್ಲದೆ ಆದರೆ ಮಾನವೀಯತೆಯಿಂದ ತುಂಬಿದ ಮದುವೆ ನಡೆಯಿತು.
ಇಲ್ಲಿ ಪ್ರಶ್ನೆ ಏನು ಗೊತ್ತಾ?
ಯಾವ ಧರ್ಮ? ಯಾರ ಧರ್ಮ? ಯಾವ ಜಾತಿ? ಯಾವ ಮತ? ಅಲ್ಲಿ ಇದ್ದದ್ದು ಒಂದೇ ಒಂದು ಧರ್ಮ ಅದು  ಮಾನವ ಧರ್ಮ, ಧರ್ಮಗಳು ಗೋಡೆಯಲ್ಲ ಸೇತುವೆಗಳಾಗಬೇಕು. ಜಾತಿ ಗುರುತಾಗಬಾರದು, ಗುಣ ಗುರುತಾಗಬೇಕು ಮತಗಳು ಮತಾಂತರಕ್ಕೆ ಅಲ್ಲ, ಹೊಸ ಮನ್ವಂತರಕ್ಕೆ ಕಾರಣವಾಗಬೇಕು. ಹಸಿದವನಿಗೆ ಊಟ ಕೊಟ್ಟ ಕೈ ಅದು ಯಾವ ಧರ್ಮದು ಎನ್ನುವುದಕ್ಕಿಂತ, ಅದು ಮನುಷ್ಯನ ಕೈ ಎನ್ನುವುದೇ ಮುಖ್ಯ. ಕಣ್ಣೀರು ಒರೆಸುವ ಹೃದಯ ಅದು ಯಾವ ದೇವರನ್ನು ಪೂಜಿಸುತ್ತದೆ ಎನ್ನುವುದಕ್ಕಿಂತ, ಅದು ಮನುಷ್ಯತ್ವವನ್ನು ನಂಬುತ್ತದೆ ಎನ್ನುವುದೇ ಸಾಕು.
ಕಡೆಯದಾಗಿ ಜಾತಿ, ಮತ, ಧರ್ಮದ ಹೆಸರಿನಲ್ಲಿ ಕಚ್ಚಾಡುವವರಿಗೆ ಒಂದು ಪ್ರಶ್ನೆ:
“ನಿಮ್ಮ ಧರ್ಮ ಮನುಷ್ಯನಾಗಿ ನಡೆದುಕೊಳ್ಳಲು ಕಲಿಸದಿದ್ದರೆ ,ಅದನ್ನು ನೀವು ನಿಜವಾಗಿಯೂ ಪಾಲಿಸುತ್ತಿದ್ದೀರಾ?”ಎಲ್ಲ ಧರ್ಮಗಳಿಗೂ ಗೌರವ ಇರಲಿ,ಆದರೆ ಮಾನವೀಯತೆಗೆ ಮೊದಲ ಸ್ಥಾನ ಇರಲಿ.ಯಾಕೆಂದರೆ ಧರ್ಮ ಮನುಷ್ಯನಿಗಾಗಿ,ಮನುಷ್ಯ ಧರ್ಮಕ್ಕಾಗಿ ಅಲ್ಲ.

Tuesday, 9 December 2025

 ಏನಾದರೂ ಆಗು, ಮೊದಲು ಮಾನವನಾಗು

                                                         

ಕೆ.ಎಸ್.ಧನಂಜಯ

       
ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ನುಡಿ ಪ್ರಚಲಿತದಲ್ಲಿದೆ “ಪಂಪನಿಂದ ಕುವೆಂಪು ತನಕ” ಮನುಷ್ಯ ಜಾತಿ ತಾನೊಂದೇ ವಲಂ ಎಂದು ಘೋಷಿಸಿದ ಪಂಪ ವರ್ಣ ಗೋಪುರದ ತುತ್ತ ತುದಿಯವನು ಅದರ ನಂತರ ಬಂದ ಬಸವಣ್ಣ ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಜಾತಿ ಪದ್ಧತಿಯನ್ನು ಮೇಲ್ತರದಳಷ್ಟೇ ವಿರೋಧಿಸುತ್ತಾರೆ ಆದರೆ ಆಧುನಿಕ ಸಂದರ್ಭದಲ್ಲಿ ಜಾತಿ ಪದ್ಧತಿಯನ್ನು ವಿರೋಧಿಸಿ ನಿಷ್ಟೂರ ಅಭಿಪ್ರಾಯಗಳಿಂದ ಕೊಚ್ಚಿ ಹಾಕಿದ ಕುವೆಂಪು ವರ್ಣ ಗೋಪುರದ ಅತ್ಯಂತ ಕೆಳಗಿನ ಶ್ರೇಣಿಯ ಮೊದಲ ಶೂದ್ರ ಲೇಖಕ.  ಮನುಜ ಮತ ವಿಶ್ವಪಥ ಎಂಬ ಪರಿಕಲ್ಪನೆಯಲ್ಲಿ ವಿಶ್ವಮಾನವ ಸಂದೇಶವನ್ನು ಹುಟ್ಟು ಹಾಕಿದ್ದ ಕುವೆಂಪು ಸರ್ವಕಾಲಕ್ಕೂ ಮೇಲ್‌ಸ್ತರದಲ್ಲಿ ನಿಲ್ಲುತ್ತಾರೆ.

ಕುವೆಂಪು ಮೌಲ್ಯಗಳ ಆವರಣದಲ್ಲಿ ಬದುಕಿದವರು, ಬದುಕು ಅವರಿಗೆ ಅತ್ಯಂತ ಮಹತ್ವಪೂರ್ಣವಾದದ್ದು ಬದುಕಿನ ಸ್ವಚ್ಛಂದತೆಯನ್ನು ಬಿಡಿ ಬಿಡಿಯಾಗಿ ತೆಗೆದುಕೊಂಡವರಲ್ಲ, ಸಮಗ್ರವಾದದ್ದು ಆತ್ಮೀಯವಾದದ್ದು ಏನಿದೆಯೋ ಅದೆಲ್ಲವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಬಾಳಿನ ಸಮಸ್ತ ಸಂವೇದನೆಗಳಿಗೂ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ ನಿಸರ್ಗದ ಹುಚ್ಚು, ಅಸಮಾನತೆಯ ಕಿಚ್ಚು, ಶೋಷಣೆಯ ಅಸಹ್ಯ, ಇವು ಅವರ ಬರವಣಿಗೆಯಲ್ಲಿ ಹೆಚ್ಚಾಗಿ ಗೋಚರಿಸುವಂತದ್ದು. ಮಾನವೀಯತೆ ಸರ್ವ ಸಮಾನತೆ ಸಮತಾವಾದವನ್ನು ಬೋಧಿಸುವ ಕುವೆಂಪು, ವರ್ಗ ಸಂಘರ್ಷಕ್ಕಾಗಲಿ ಶೋಷಣೆಗಾಗಲಿ ತೀವ್ರ ವಿರೋಧಿ.  ಎಲ್ಲರ ಬದುಕು ಸರಳವೋ ಸುಂದರವೂ ಆಗಬೇಕು ವಿಶ್ವ ಶಾಂತಿ ನೆಲೆಸಿರಬೇಕು ಎಂದು ಅಪೇಕ್ಷಿಸುವ ಅವರು ಮನುಷ್ಯನನ್ನು ಕಿತ್ತು ತಿನ್ನುವ ಪರಿಸ್ಥಿತಿಯನ್ನು ಕಿಂಚಿತ್ತು ಸಹಿಸುತ್ತಿರಲಿಲ್ಲ. ಅಜ್ಞಾನ ಅಂಧಕಾರಗಳು ತೊಲಗಿ ಬದುಕಿನ ಬಡತನ ನಿವಾರಣೆಯಾಗಿ ಎಲ್ಲರೂ ಒಂದಾಗಿ ಸೋದರ ಮನೋಭಾವದಿಂದ ಬಾಳಬೇಕು ಎಂಬುವುದು ಅವರ ಜೀವನದ ಆಶಯವಾಗಿತ್ತು. ಆ ಮೂಲಕ ಅವರು ಸಾರ್ವಜನಿಕವಾಗಿ ಕೊಡುವ ಕರೆ ಇಂದಿಗೂ ರಿಂಗಣಿಸುತ್ತಿದೆ

ಸಿಲುಕದಿರಿ ಮತವೆಂಬ ಮೋಹದ ಜ್ಞಾನಕ್ಕೆ

ಮತಿಯಿಂದ ದುಡಿಯಿರೈ ಲೋಕ ಹಿತಕ್ಕೆ

ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು

 ಸೇರಿರೈ ಮನುಜ ಮತಕ್ಕೆ ವಿಶ್ವ ಪಥಕ್ಕೆ

ಜಾತಿ, ಮತ, ದೇವರುಗಳ ನೆಲೆಗಳಿಂದ ಹೊರಬಂದು, ನಿಸರ್ಗದ ನೆಲೆಯಲ್ಲಿ ನಾವೆಲ್ಲರೂ ಮನುಜ ಮತವೆಂಬ ಒಂದೇ ಗುಂಪಿನವರು ಎಂಬ ವಾಸ್ತವವನ್ನು ಅರಿತುಕೊಂಡು, ಪರಸ್ಪರ ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ ಬಾಳಬೇಕೆಂಬ ಆಶಯದೊಂದಿಗೆ ವಿಶ್ವ ಮಾನವ ಸಂದೇಶದಲ್ಲಿ ಪಂಚ ಮಂತ್ರಗಳನ್ನು ಪ್ರತಿಪಾದಿಸುತ್ತಾರೆ ಪ್ರತಿಯೊಂದು ಮಗುವೂ ಹುಟ್ಟುತ್ತಲೆ - ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು 'ಅಲ್ಪಮಾನವನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು 'ವಿಶ್ವಮಾನವ'ನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಹುಟ್ಟುವಾಗ 'ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು 'ಬುದ್ಧ'ನನ್ನಾಗಿ, ಅಂದರೆ ವಿಶ್ವ ಮಾನವನ್ನಾಗಿ, ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ 'ಅನಿಕೇತನ'ರಾಗಬೇಕು. ಕುವೆಂಪುರವರ ಜಲಗಾರ ಮತ್ತು ಶೂದ್ರ ತಪಸ್ವಿ ಸಮಾಜದ ಅವೈಚಾರಿಕ ರೋಗಗ್ರಸ್ತ ಮನೋಭಾವಕ್ಕೆ ಹಿಡಿದ ಕನ್ನಡಿಗಳಾಗಿವೆ. ಕುವೆಂಪು ವೈಜ್ಞಾನಿಕ ಸಮಾಜದ ತಳಹದಿಯ ಮೇಲೆ ತಮ್ಮ ವರ್ಗ ಸ್ವರೂಪ ಧೋರಣೆಗಳನ್ನ ಬೆಳೆಸಿಕೊಂಡವರು, ಸರ್ವರಿಗೂ ಸಮಪಾಲು ಸಮ ಬಾಳು ಎನ್ನುವುದು ಅವರ ಬದುಕಿನ ಧ್ಯೇಯವಾಗಿತ್ತು. ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪು ಗುಂಪಾಗಿ ಒಡೆದಿವೆ; ಯುದ್ಧಗಳನ್ನು ಹೊತ್ತಿಸಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲ ಕಾರಣವೆಂಬಂತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮುಂದೆ ಮತ-ಮೌಢ್ಯ ಒಪ್ಪಿಗೆಯಾಗದು. ಆಚಾರ್ಯ ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ 'ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ- ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; "ಮನುಜಮತ". ಆ ಪಥ ಈ ಪಥ ಅಲ್ಲ; "ವಿಶ್ವಪಥ". ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ "ಸರ್ವೋದಯ". ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; "ಸಮನ್ವಯ"ಗೊಳ್ಳುವುದು. ಮಿತ ಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ "ಪೂರ್ಣದೃಷ್ಟಿ".

            ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲ ಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆಸುವವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೆ ಸೇರದೆ, ಪ್ರತಿಯೊಬ್ಬನೂ ತಾನು ಕಂಡು ಕೊಳ್ಳುವ 'ತನ್ನ' ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು. ಯಾವ ಒಂದು ಗ್ರಂಥವೂ 'ಏಕೈಕ ಪರಮ ಪೂಜ್ಯ' ಧರ್ಮ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ 'ದರ್ಶನ'ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು ಸರ್ವಮತಗಳಿಗಿಂತಲೂ ಶುದ್ಧ ಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದದ್ದು ಆ ಗುರು ಈ ಆಚಾರ್ಯ ಆ ಧರ್ಮಶಾಸ್ತ್ರ ಈ ಮನಸ್ಮೃತಿ ಮೊದಲಾದವು ಏನೇ ಹೇಳಲಿ ಎಲ್ಲವನ್ನು ವಿಮರ್ಶಿಸುವ ಪರೀಕ್ಷಿಸುವ ಓರೇಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ. ಕುವೆಂಪು ಈ ನಾಡಿನ ಇತಿಹಾಸದಲ್ಲಿ ಈ ನಾಡ ನೆಲದ ಬದುಕಿನಲ್ಲಿ ಕೆಂಡದುಂಡೆಯಾಗಿ ನಿಸರ್ಗ ಪ್ರೀತಿ ಪೋಣಿಸಿದ ಹಸಿರ ದಂಡೆಯಾಗಿ ಸಮ ಸಮಾಜದ ಆಶಯವಾಗಿ ಯಾವತ್ತೂ ಇರುತ್ತಾರೆ. ಅವರ ತಕಾರಾರು ಇರುವುದು ಮೌಢ್ಯ ಅಜ್ಞಾನ ಮತ್ತು ಸಂಪ್ರದಾಯಗಳನ್ನು ಪ್ರಚಾರ ಮಾಡುತ್ತಾ ಸಾಮಾಜಿಕ ಅನಾರೋಗ್ಯವನ್ನು ಹರಡುತ್ತಿರುವವರ ವಿರುದ್ಧ. ಜಾತಿ ಮತಗಳು ಈ ದೇಶದ ಜನರ ಬದುಕಿಗೆ ಬಡಿದಿರುವ ಭೀಕರ ರೋಗಗಳು ವ್ಯಕ್ತಿಯನ್ನು ಪ್ರೀತಿಸಲು ಸಾಧ್ಯವೇ ಇಲ್ಲದಂತ ಮಾಡಿರುವ ಈ ಕೋಟೆಗಳನ್ನು ನೆಲಸಮ ಮಾಡಿದಾಗ ಮಾತ್ರ ಬದುಕು ಸುಂದರವಾಗಿರಲು ಸಾಧ್ಯ. ಅವರ ಮಾರ್ಗದರ್ಶಕ ಮಾತನ್ನು ನೆನೆಯುವ ಮತ್ತು ಅದರಂತೆ ನಡೆದುಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ ಆದ್ದರಿಂದ ಕುವೆಂಪು ಇಂದಿಗೂ ಎಂದಿಗೂ ಪ್ರಸ್ತುತವೆನಿಸುತ್ತಾರೆ.

Thursday, 4 December 2025

ಮಾತಿನಾಚೆ ನಗುವ ಮಿಂಚ ಹೇಗೆ ಹಿಡಿದು ತೋರಲಿ? 🥰🥰

 ಕೆ.ಎಸ್.ಧನಂಜಯ

            ಎಷ್ಟೋ ವರ್ಷಗಳ ನಂತರವೂ, ನನ್ನ ಮನಸ್ಸಿನ ಒಂದು ನಿಜವಾದ ಮೂಲೆಯಲ್ಲಿ ನೀನು ಇಂದು ಕೂಡಾ ಮೃದುವಾಗಿ, ನಿಶ್ಶಬ್ದವಾಗಿ ಬದುಕಿರುವೆ. ನಮ್ಮ ದಾರಿಗಳು ಒಂದೇ ದೀಪದಿಂದ ಬೆಳಗಿದ್ದರೂ ನಂತರ ಬೇರೆ ದಿಕ್ಕಿನಲ್ಲಿ ಹರಡಿಕೊಂಡವು. ಆದರೆ ಬೆಳಕು ಒಂದೇ ಆಗಿದ್ದರಿಂದ, ದೂರವಾದರೂ ನಾನು ನಿನ್ನ ನೆರಳನ್ನು ನನ್ನೊಳಗೆ ಎಂದೂ ಕಳೆದುಕೊಂಡಿರಲಿಲ್ಲ. ಜಗತ್ತು ನಮ್ಮಿಬ್ಬರ ಭೇಟಿಗೆ ಎಷ್ಟು ಬಣ್ಣಗಳು, ಎಷ್ಟು ಅರ್ಥಗಳು, ಎಷ್ಟು ವ್ಯಾಖ್ಯಾನಗಳನ್ನು ನೀಡಲಿ ನಾವು  ಎನಾಗಿದ್ದೆವೋ, ಹೇಗಿದ್ದೇವು, ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬರಿಗೊಬ್ಬರು ಏನು, ಹೇಗೆ ನಡೆದುಕೊಂಡೆವು ಎಂದು ನಮ್ಮಿಬ್ಬರಿಗಷ್ಟೇ ಗೊತ್ತು. ನಾವೇಕೆ ಪರಸ್ಪರ ದೂರಾದೆವು ಎನ್ನುವುದು ನನಗೂ, ನಿನಗೂ, ಭಗವಂತನಿಗೂ ಮಾತ್ರ ತಿಳಿದ ರಹಸ್ಯ.ಅದು ಲೋಕಕ್ಕೆ ಪ್ರಕಟವಾಗಬೇಕಾದ ಶಾಸನವಲ್ಲ. ನಿನ್ನೊಳಗೆ ನನಗೆ ನೋವು ಕೊಡುವ ಮನಸ್ಸಿದ್ದರೆ,ಮೋಸ ಮಾಡುವ ಅವಕಾಶವೂ ನಿನಗೆ ಇತ್ತು.ಆದರೆ ನೀನು ಆಯ್ದುಕೊಂಡ ದಾರಿ ಸುಳ್ಳಿನದಲ್ಲ, ಸತ್ಯದ ಹಾದಿ. ನಿನ್ನನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾರೆ ಎನ್ನುವ ಒಂದು ನೇರವಾದ ವಾಕ್ಯದಲ್ಲೇ ನೀನು ನನ್ನ ಬದುಕಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟೆ.  ಮೋಸಕ್ಕಿಂತ ಸತ್ಯವೇ ಹೆಚ್ಚು ನೋಯಿಸುತ್ತದೆ, ಆದರೂ ಅದೇ ಹೆಚ್ಚು ಪವಿತ್ರ. ಇವಳು ನನಗೆ ಸಿಗಲ್ಲ ಎಂದು ಬದುಕನ್ನು ದೌರ್ಜನ್ಯದಿಂದ ಕಸಿದುಕೊಂಡವರಿಗೆ ಕೊನೆಗೆ ಸಿಕ್ಕಿದ್ದು ಏನು? ಯೋಗ ಎನ್ನುವುದು ನಮಗೆ ಒಂದು ಜೀವವಾಗಲಿ , ವಸ್ತುವಾಗಲಿ ಒಲಿದು ಬರುವುದು , ಯೋಗ್ಯತೆ ಎನ್ನುವುದು ಅದನ್ನು ಬದುಕಿನ ಉದ್ದಕ್ಕೂ ಪ್ರೀತಿಸಿ ಉಳಿಸಿಕೊಂಡು ಹೋಗುವುದು. ಪ್ರೀತಿ ಸಿಗಲಿಲ್ಲ, ಗೌರವ ಉಳಿಯಲಿಲ್ಲ,ಮಾನವೀಯತೆ ಕೈ ತಪ್ಪಿತು. ಹಿಡಿದಿದ್ದು ದೇಹವನ್ನೇ ಹೊರತು ಹೃದಯವನ್ನಲ್ಲ. ಪ್ರತಿ ದಿನ ನಿನ್ನ ನೆನಪು ನನ್ನ ಹೃದಯಕ್ಕೆ ಅಂಟಿಕೊಂಡೇ ಇರುತ್ತದೆ. ಆದರೆ ಈ ನೆನಪುಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಹಂಚಿಕೊಂಡರೆ ನೋವು ಹೆಚ್ಚುತ್ತದೆ, ಮೌನಿಸಿದ್ದರೆ ಹೃದಯ ತುಂಬಿ ಕಕ್ಕುತ್ತದೆ.

         ಸಾಕಷ್ಟು ಬಾರಿ ನೀನು ನಮ್ಮ ಮನೆಗೆ ಬಂದು  ಉಳಿದು ಹೋಗಿದ್ದೆ. ಆ ದಿನಗಳ ಬೆಳಕು ಇಂದಿಗೂ ನನ್ನ ಮನೆಯಲ್ಲಿ ಜೀವಂತವಾಗಿದೆ. ನಿನ್ನ ಜೊತೆ ಕೈ ಕೈ ಹಿಡಿದು ನದಿಯ ದಡದಲ್ಲಿ ನಡೆದ ಆ ಹಾದಿಗಳು ಇಂದಿಗೂ ನನ್ನ ಜೀವನದ ಅತ್ಯಂತ ಪವಿತ್ರ ನೆನಪುಗಳೇ. ನೀನು ಜಗತ್ತಿಗೆ ಕಣ್ಮರೆಯಾಗಿರಬಹುದು ಆದರೆ ನಿನ್ನ ಸ್ಪರ್ಶ, ನಿನ್ನ ಮಾತು ನಿನ್ನ ನೋಟ ಪ್ರತಿ ಕ್ಷಣವೂ ನನ್ನೊಳಗೆ ಜೀವಂತ. ಹೇಗೆ ಮರೆಯಲಿ ನಿನ್ನ ?  ಹೇಗೆ ಮರೆಯಲಿ ನಿನ್ನೊಡನೆ  ಕಳೆದ ಆ ಜೀವನದ  ಚಿಕ್ಕ ಚಿಕ್ಕ ಅಮೂಲ್ಯ ಕ್ಷಣಗಳನ್ನು ? ನಿನ್ನನ್ನು ಪ್ರೀತಿಯಿಂದ, ಕಣ್ಣೀರಿನಿಂದ, ಸ್ಮರಣೆಯಿಂದ ಸ್ಮರಿಸುತ್ತಾ ಈ ಸಾಲುಗಳನ್ನು ಬರೆಯುತ್ತಿರುವೆ ಬರೆಯುವಾಗ ನನ್ನ ಕಣ್ಣಾಲಿಗಳು ತುಂಬಿ ಬರುತ್ತಿದೆ. ಎಷ್ಟೋ ವರ್ಷಗಳ ನಂತರವೂ, ನನ್ನ ಮನಸ್ಸಿನ ಒಂದು ನಿಜವಾದ ಮೂಲೆಯಲ್ಲಿ ನೀನು ಇಂದು ಕೂಡಾ ಮೃದುವಾಗಿ, ನಿಶ್ಶಬ್ದವಾಗಿ ಬದುಕಿರುವೆ. ಜಗತ್ತಿನ ಪಾಲಿಗೆ ನೀನು ಸತ್ತಿರಬಹುದು ಆದರೆ ನನಗೆ ನನ್ನೋಳಗೆ ಎಂದಿಗೂ ಜೀವಂತ ಇರುತ್ತೀಯ. ಪ್ರೀತಿಯೆಂದರೆ ಒಂದೇ ದಾರಿಗೆ ನಡೆಯಬೇಕೆಂಬ ನಿಯಮವಿಲ್ಲ ಎಂಬುದನ್ನು ನನ್ನ  ಜೀವನವೇ ಆಗಿದ್ದಾಗ ನೀನೆ ನನಗೆ ಹೇಳಿಕೊಟ್ಟ ಪಾಠ. ಬಾಲ್ಯದಲ್ಲಿ ಹಿಡಿದ ನಿನ್ನ ಕೈಯ ಬಿಸಿಯ ಸ್ಪರ್ಶ ಇನ್ನು ಹಾಗೇಯೆ ಇದೆ ಇಂದಿಗೂ ನೀನು ನನ್ನ ಕೈ ಬಿಟ್ಟಿಲ್ಲ ಎನ್ನುವುದು ಸ್ಪಷ್ಟ. ಕಾಲ ಬದಲಾಯಿತು, ಜೀವನ ನಮ್ಮನ್ನು ಬೇರೆ ಮನೆಗಳಿಗೆ, ಬೇರೆ ಕರ್ತವ್ಯಗಳಿಗೆ ಕರೆದೊಯ್ದಿತು, ನಾನೂ ನನ್ನ ಬದುಕನ್ನು ಕಟ್ಟಿಕೊಂಡೆ,ನೀನೂ ನಿನ್ನ ಸಂತೋಷವನ್ನು ಹುಡುಕಿಕೊಂಡೆ. ಆದರೂ ಹೃದಯದ  ಮೌನ ಮೂಲೆಯಲ್ಲಿ ನಾವು ಇಬ್ಬರೂ ಪರಸ್ಪರ ಬಾಗಿಲು ತೆರೆದಿಟ್ಟಿದ್ದೆವು ಬರುವೆಯಾ ಎಂಬ ನಿರೀಕ್ಷೆಗೆ ಅಲ್ಲ,ಬರಲಿಲ್ಲ ಎಂಬ ಮೌನ ಗೌರವಕ್ಕೆ. ಇಂದು ನೀನು ಈ ಲೋಕದಲ್ಲಿಲ್ಲವೆಂಬ ಸುದ್ದಿ ಹೃದಯಕ್ಕೆ ಸುಳಿಯಂತೆ ತಾಗಿದಾಗ, ನಾನು ಕಣ್ಣೀರಲ್ಲಿ ಹುಡುಕಿದ್ದು ನಿನ್ನ ನೋವಲ್ಲ ನಿನ್ನ ಸಂತೋಷ ಎಂದಿಗೂ ನಾನು ಬಯಸಿದ್ದು ನೀನು ಎಲ್ಲೋ ಒಂದು ಕೋಣೆಯಲ್ಲಿ ಶಾಂತವಾಗಿರು ಎಂದು ಆದರೆ ಇಂದು ನಿನ್ನದಾಗಿ ಉಳಿದಿರುವುದು ಒಂದು ಮೌನ ಪ್ರೀತಿ, ಒಂದು ಮಧುರ ನೆನಪು, ಮತ್ತು ನನ್ನ ಹೃದಯದ ಒಳಗಿನ ಶಾಶ್ವತ ಸ್ಥಳ. ನೀನು ಇಲ್ಲದೆ ಜೀವನ ಮುಂದುವರಿದರೂ,ನಿನ್ನ  ನೆನಪುಗಳಿಲ್ಲದೆ ಅದು ಸಂಪೂರ್ಣವಲ್ಲ. ನೀನು ಬದುಕಿದ್ದ ದಿನಗಳು ಪ್ರೀತಿಯ ಅರ್ಥ ಕಲಿಸಿದವು. ನೀನು ಇಲ್ಲದ ದಿನಗಳು ನೆನಪಿನ ಮೌಲ್ಯ ಕಲಿಸುತ್ತಿವೆ. ಇಂದು ನೀನು ಕಣ್ಣಿಗೆ ಕಾಣದಿದ್ದರೂ ನಿನ್ನ ಪ್ರೀತಿ ಮತ್ತು ನೀನು ಎಂದಿಗೂ ಮಸುಕಾಗುವುದಿಲ್ಲ. 
       ಕುವೆಂಪು ಒಂದು ಸಂಧರ್ಭದಲ್ಲಿ ಹೀಗೆ ಹೇಳುತ್ತಾರೆ  ಯಾರೋ ಎಲ್ಲೋ ಇದ್ದವರು ಸಿಗಬೇಕೆಂದರೆ ಋಣವಂತು ಇರಲೇಬೇಕು, ಸಿಕ್ಕವರೆಲ್ಲ ಬದುಕೊಳಗೆ ಬರಬೇಕೆಂದರೆ ಹಣೆ ಬರಹದೊಳಗೆ ಬರೆದಿರಲೇಬೇಕು, ಎಲ್ಲೋ ಇದ್ದವರು ಒಂದೆಡೆ ಸೇರಿಸಲು ಹಣೆ ಬರಹದೊಳಗಿದ್ದವರೆ ನಮ್ಮವರಾಗಿರಲು, ಪ್ರೀತಿಸಲು ನಿಯಮಗಳೆಕಿರಬೇಕು ಕಾಳಜಿಗೆ ಕಾರಣಗಳೇಕಿರಬೇಕು ಅಲ್ವೇ ?  ನೀ ಬಂದೆ ಬೆಳಗಿದೆ, ರೂಪ ಕೊಟ್ಟೆ ನಂತರ ಶಾಂತವಾಗಿ ಮತ್ತೊಂದು ಲೋಕದತ್ತ ಹೊರಟು ಹೋದೆ. ನಾವು ಹಂಚಿಕೊಂಡ ಮೌನ ಕ್ಷಣಗಳು, ನಗು, ನೋವುಗಳು ಇವೆಲ್ಲಾ ಈಗ ನನ್ನ ಆತ್ಮದ ಒಂದು ಭಾಗ. ನಿನ್ನನ್ನು ಈ ಲೋಕದಿಂದ ಕರೆಯುವ ದೇವರ ನಿರ್ಧಾರವನ್ನು  ನಾನು ಎಂದಿಗೂ ಪ್ರಶ್ನೆ ಮಾಡಲ್ಲ. ನೀನು ಈ ಜಗತ್ತಿನಿಂದ ನಿರ್ಗಮಿಸಿದನ್ನು ನಾನು ದುಃಖದಿಂದ ಅಲ್ಲ ಭಕ್ತಿಯಿಂದ ಸ್ವೀಕರಿಸುತ್ತೇನೆ ಬಹುಶಃ ನಿನ್ನ ಆತ್ಮಕ್ಕೆ ಈ ಮನುಷ್ಯ ಜೀವನ ಸಾಕಾಗಿರಬೇಕು ಎನಿಸುತ್ತಿದೆ , ಆ ದೇಹ ಇನ್ನೊಂದು ಶಾಂತಿಯ ದಾರಿಯನ್ನು ಬಯಸಿತೋ ಎನೋ ?  ಅದನ್ನು ನಾನು ಗೌರವಿಸುತ್ತೇನೆ. ಇಷ್ಟೂ ತನಕ ಎಲ್ಲೀಯೋ ಸುಖದಿಂದ  ಇದ್ದೀಯ ಎನ್ನುವ ಖುಷಿ ಇತ್ತು ಇನ್ನೂ ಆ ಖುಷಿಯೂ ಇಲ್ಲ,  ನೀನು ಇಲ್ಲವೆಂಬ ಸುದ್ದಿ ಕೇಳಿದಾಗ ಅದು ನನ್ನನ್ನು ನೆಲಕ್ಕೊರಗಿಸಿತು ಆದರೆ ಅಲ್ಲೇ ಬಿದ್ದಿದ್ದಾಗ ಆಕಾಶದತ್ತ ನೋಡಿದ ಕ್ಷಣದಲ್ಲಿ ಒಂದು ಸ್ಪಷ್ಟತೆ ಒಳಗೆ ಮೂಡಿತು ಪ್ರೀತಿ ಎಂದರೆ ದೇಹದ ವಿಷಯವಲ್ಲ ಅದು ಆತ್ಮದ ಸಂಬಂಧ, ಪರಸ್ಪರ ದೇಹಕ್ಕೆ ಯಾವತ್ತೂ ನಾವು ಆದ್ಯತೆ ನೀಡಲಿಲ್ಲ  ಎನ್ನುವುದು ಬೇರೆ ಮಾತು. ಇಂದೂ ಕೂಡ  ರಾತ್ರಿ ಗಾಳಿ ಮೃದುವಾಗಿ ಸ್ಪರ್ಶಿಸಿದಾಗ ಅದರೊಳಗೆ ನಿನ್ನ ಮೌನ ಸಾನ್ನಿಧ್ಯವಿದೆ, ಪ್ರಾರ್ಥನೆಗೆ ಕೈ ಜೋಡಿಸಿದಾಗ ನಿನ್ನ ನೆನಪಿನ ದೀಪ ಬೆಳಗುತ್ತದೆ, ನಕ್ಷತ್ರಗಳನ್ನು ನೋಡಿದಾಗ ನಿನ್ನ ಶಾಂತ ನಗು ಅದರ ಬೆಳಕುಗಳಲ್ಲಿ ಕರಗುತ್ತದೆ, ನೀನು ಈಗ ದೇವರ ಅಂಗಳದಲ್ಲಿ, ಲೋಕದ ನೋವುಗಳಿಂದ ದೂರ. ಶುದ್ಧ ಬೆಳಕಿನ ನಡುವೆ  ಅಲ್ಲಿ ನಿನ್ನ ಆತ್ಮ ಶಾಂತವಾಗಿರುವ ವಿಚಾರ ನನ್ನ ಮನಕ್ಕೆ ಆರಾಮ. ಈ ಜನ್ಮ ನಮ್ಮನ್ನು ದೂರವಿಟ್ಟರೂ, ಮತ್ತೊಂದು ಜನ್ಮದ ಮಾರ್ಗದಲ್ಲಿಈ ಪ್ರೀತಿಯ ಬೆಳಕು ಮತ್ತೆ ನಮ್ಮನ್ನು ಸೇರ್ಪಡಿಸಬಹುದು. 
    ಬಲವಂತದಿಂದ ಪಡೆದ ಸಂಬಂಧ ಸಂಬಂಧವಾಗುವುದಿಲ್ಲ, ಅದು ಜೀವನ ಪೂರ್ತಿ ಹೊತ್ತೊಯ್ಯಬೇಕಾದ ಪಾಪದ ನೆರಳಷ್ಟೇ. ಭಗವಂತನ ಇಚ್ಚೆಯಂತೆ ಇಂದಿಗೂ ನೀನು ನನ್ನ ಪ್ರಾರ್ಥನೆಗಳಲ್ಲಿ, ನನ್ನ ಮೌನಗಳಲ್ಲಿ, ನನ್ನ ಹೃದಯದ ನಿಶ್ಶಬ್ದ ದೇವಾಲಯದಲ್ಲಿ ಬೆಳಗುತ್ತಿರುವೆ. ನಿನಗಾಗಿ ನಿನ್ನ ನೆನಪಿಗಾಗಿ ನಾವು ಹಂಚಿಕೊಳ್ಳದ ಬದುಕಿಗಾಗಿ ಪ್ರೀತಿಯೊಂದು ನಿರಂತರ ಕಾಯುತ್ತೆ ಸುಮ್ಮನೆ ನಗುತ್ತಾ.

Thursday, 30 March 2017

ಘಟ್ಟದಿಂದ ಬೆಟ್ಟದ ಕೆಳಗೆ ನೋಡಿದ ಕಾರ್ತಿಕ್ ................

ಧನಂಜಯ ಮಡಿಕೇರಿ

          ಹಸ್ತಕ್ಕೆ ಬರಿ ನಕ್ಕೆ ಓದುತ್ತಾ  ಓದುತ್ತಾ ಮಸ್ತಕಕ್ಕಿಟ್ಟು ಗಂಭೀರವಾದೆ, ವಿಸ್ತರದ ದರ್ಶನಕ್ಕೆ ತುತ್ತ ತುದಿಯಲ್ಲಿ ನಿನ್ನ ಪುಸ್ತಕಕ್ಕೆ ಕೈ ಮುಗಿದೆ. ಇದು ಕವಿ ಕುವೆಂಪು ಕಗ್ಗ ಓದಿದ ನಂತರ ಊದಿದ  ಕಹಳೆ " ಕಾಡು ಹಾದಿಯ ಜಾಡು ಹತ್ತಿ " ಕಾರ್ತಿಕ್ ಮಾಡಿದ ಪ್ರಯಾಣ ಓದುಗನಿಗೆ ಎಲ್ಲೂ  ಪ್ರಯಾಸವಾಗುವುದಿಲ್ಲ. ತಮ್ಮ ಮೊದಲ ಪ್ರಯತ್ನದಲ್ಲಿ ಮಲೆನಾಡು ಅದರ ಸೌಂದರ್ಯ ಮತ್ತು ಅನಿವಾರ್ಯತೆ , ದಿನ ನಿತ್ಯದ ಬದುಕಿನಲ್ಲಿ ಸಾಮನ್ಯ ಬದುಕಿನ  ದರ್ಶನ , ಅದನ್ನು ಸಾಹಿತ್ಯಕ್ಕೆ ಇಳಿಸಿದ ರೀತಿ ಸುಂದರವಾಗಿದೆ . ಪಶ್ಚಿಮ ಘಟ್ಟದ ತಪ್ಪಲಿನ ಮಂದಿಗೆ ತುಳು , ಬ್ಯಾರಿ , ಮಲಯಾಳಂ ಹವ್ಯಕ ಕನ್ನಡ ಸಮಸ್ಯೆಯೆಂದು ನನಗನಿಸುವುದಿಲ್ಲ. ಹಾಗಾಗಿ ಕೃತಿಯಲ್ಲಿ ಭಾಷೆ ಕಷ್ಟವಾಗದೆ ಇಷವಾಗಿ ಓದಿಸಿ ಕೊಂಡು ಹೋಗುತ್ತದೆ.
        “ಅವಳೊಂದು ಪುಟ್ಟ ಕೊಳ ನನ್ನ ಬಾಳಿನ ಜೀವ ಜಲ”  ಎನ್ನುವ ಹಾಗೆ ಮಲೆನಾಡು, ಸಹ್ಯಾದ್ರಿ, ಪಶ್ಚಿಮ ಘಟ್ಟ ಯಾವುದೇ ಹೆಸರಿನಿಂದ ಕರೆಯಿರಿ  ಜೀವ ಸಂಕುಲಕ್ಕೆ ಅದರ ಅನಿವಾರ್ಯತೆ ಏನು? ಆ ಪ್ರಕೃತಿ ಬದುಕಿನಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎನ್ನುವುದನ್ನು ದಂಗೆಯ ದಿನಗಳು ನೆನಪಿಸಿದರೆ. ಬನದ ಹರಕೆಯೊಂದಿಗೆ ಆನೆಯ ಆಗಮನವಾಗುತ್ತೆ, ಅದರೊಂದಿಗೆ ಆನೆಗೆ ನಾವು ಅರಣ್ಯದ ಮಧ್ಯೆ ಅಷ್ಟು ಕೆರೆ ತೆಗೆಸಿದ್ದೇವೆ, ಅದಕ್ಕೆ ಆಹಾರಕ್ಕೆ ಬೇಕಾಗಿರುವ ಮರಗಳನ್ನು ಬೆಳೆಸಿದ್ದೇವೆ, ಎನ್ನುವ ಶಾಸಕನೊಬ್ಬ ಏಕ ಕಾಲದಲ್ಲಿ ಆನೆ ಮತ್ತು ಪ್ರಜೆಗೆ ಮೋಸಮಾಡುತ್ತಾನೆ  ಕೃತಿಕಾರ ಆತನನ್ನು ಬೆತ್ತಲಾಗಿಸಿದ್ದಾರೆ. ಮಧ್ಯದಲ್ಲಿ ಚಿಕಿತ್ಸೆಗೆ ಇಟ್ಟಿದ್ದ ಹಣ ಕಳೆದು ಹೋಗುತ್ತೆ ಅಂತಹ ಸಂಧರ್ಭದಲ್ಲಿ ಧರ್ಮ ಮತ್ತು ಜಾತಿಗಿಂತ ಹೆಚ್ಚಾಗಿ ಮಾನವೀಯತೆ ರಾರಾಜಿಸುತ್ತದೆ, ಎಲ್ಲೋ ಒಂದು ಕಡೆ ಕೃತಿಯ ಜಾಡು ಹಿಡಿದು ಹೊರಟಾಗ ಕೃತಿಕಾರ ಹೇಳಿದಂತೆ ಮಹಾಗುರು ತೇಜಸ್ವಿಗೆ ಸಿಕ್ಕ ಮರ-ಗಿಡ, ಹಳ್ಳಿಯ ಭಾಷೆ-ಬೈಗುಳ ಸಾಹಿತ್ಯದ  ಎಲ್ಲವೂ ಮಹಾಗುರುವನ್ನು ನೆನೆಪಿಸಿವಂತೆ ಮಾತನಾಡುತ್ತೆ. ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಬಣ್ಣ ಬಣ್ಣದ ಮುಖವಾಡದ ಬೆಂಗಳೂರು  ಈ ಮೊದಲೆ ನಮ್ಮ ಮನಸಿನಲ್ಲಿ ಮೂಡಿದ ಚಿತ್ರ ಸ್ಪಷ್ಟವಾಗುವಂತೆ ಮಾಡುತ್ತೆ.

     ಕೆಲವೊಂದು ಹೊಡೆತಗಳು ನಮ್ಮ ಬಡತನಕ್ಕೆ ಸ್ವಾಭಿಮಾನಕ್ಕೆ ಮತ್ತು ಅಸಾಯಕತೆಗೆ ಬಿದ್ದ ಏಟುಗಳು ಎಂದು ಕೃತಿಕಾರರೇ ಹೇಳಿರುವ ಹಾಗೆ ಅದು ಹಾಗೆ ಆಗಿದ್ದರೆ ಮಾತ್ರ ನಮ್ಮ ಕಾರ್ಯವಾಗಲಿ ಕವನ ಕಾವ್ಯವಾಗಲಿ ಗಟ್ಟಿತನ ಪಡೆದುಕೊಳ್ಳುವುದಕ್ಕೆ ಸಾಧ್ಯ.. ನೀರಿನ ಮಹತ್ವದಿಂದ ಮೊದಲುಗೊಂಡು ನೀರೆಯ ನೋವಿನೊಂದಿಗೆ ಅಂತ್ಯವಾಗುವ ಕೃತಿ ತನ್ನ ಬಾಲ್ಯದೊಂದಿಗೆ ನಲಿಯುತ್ತಾ-ಕಲಿಯುತ್ತಾ ಒಂದು ಪ್ರೀತಿಯ  ಕಥೆಗೆ ಬಂದು ನಿಂತಿರುವುದು ಅಭಿನಂದನಾರ್ಹ. ಮುಂದಿನ ದಿನಗಳಲ್ಲಿ ಕೃತಿಕಾರನ ಲೇಖನಿಯಿಂದ ಮತ್ತಷ್ಟು ಬರಹ ಮೂಡಬಹುದು ಎಂದು ನಿರೀಕ್ಷೆ ನನ್ನದು.