Monday, 5 January 2026


ಹಸಿರಿನ ಮಡಿಲಲ್ಲಿ ಶಾಂತಿಯ ಮಹಾಧಾಮ            ಸುಂಟಿಕೊಪ್ಪ ನಾಕೂರಿನ ಜಿರಾವಾಲಾ ಧಾಮ

ಕೆ.ಎಸ್.ಧನಂಜಯ
                            
            ಶಾಂತಿಯ ಕಲ್ಲುಗೋಡೆಗಳು ಕಾಲದೊಂದಿಗೆ ಮೌನವಾಗುತ್ತಿದ್ದ ಹೊತ್ತಿನಲ್ಲಿ, ಕೊಡಗಿನ ಸುಂಟಿಕೊಪ್ಪದ ನಾಕೂರಿನ ನೆಲದಲ್ಲಿ ಮತ್ತೆ ಒಂದು ಮಹತ್ವದ ಜೈನ ಅಧ್ಯಾಯ ಬರೆಯಲ್ಪಡುತ್ತಿದೆ. ಶ್ರೀ ಓಂ ಶಾಂತಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ, ಸುಮಾರು 60–70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿರಾವಾಲಾ ಧಾಮ, ಜೈನ ಧರ್ಮದ ಆತ್ಮಸೌಂದರ್ಯಕ್ಕೆ ಹೊಸ ಜೀವ ತುಂಬುವ ಮಹಾಸಂಕಲ್ಪವಾಗಿದೆ. ಪರ್ವತಗಳ ಮಡಿಲಲ್ಲಿ, ಹಸಿರಿನ ಮಧ್ಯೆ ಉದಯಿಸುತ್ತಿರುವ ಜಿರಾವಾಲಾ ಧಾಮ ಕೇವಲ ಭವ್ಯ ಮಂದಿರವಲ್ಲ ಬದಲಾಗಿ ಅದು ಅಹಿಂಸೆ, ಶಾಂತಿ ಮತ್ತು ಆತ್ಮಸಾಧನೆಯ ಆಧುನಿಕ ತೀರ್ಥಕ್ಷೇತ್ರ. ಶತಮಾನಗಳ ಹಿಂದೆ ಮುನಿಗಳ ಪಾದಸ್ಪರ್ಶದಿಂದ ಪವಿತ್ರಗೊಂಡ ಕೊಡಗಿನ ನೆಲ, ಇಂದು ಮತ್ತೆ ಜೈನ ಧ್ಯಾನದ ಶಬ್ದರಹಿತ ನಾದವನ್ನು ಆಲಿಸಲು ಸಜ್ಜಾಗಿದೆ.

ಕ್ರಿ.. ಐದುಆರು ಶತಮಾನಗಳ ಹಿಂದೆ ಜೈನ ಮುನಿಗಳು ಅರಣ್ಯಪಥಗಳನ್ನು ದಾಟಿಕೊಂಡು ಕೊಡಗಿನಾಡಿಗೆ ಬಂದಾಗ, ಅವರು ಜೊತೆ ತಂದಿದ್ದು ಕೇವಲ ಧರ್ಮವಲ್ಲ; ಬದುಕಿನ ಹೊಸ ಶಿಸ್ತು. ಗಂಗ, ಕದಂಬ ಹಾಗೂ ಹೊಯ್ಸಳರ ರಾಜಾಶ್ರಯದಿಂದ ಜೈನ ಧರ್ಮ ಇಲ್ಲಿ ಬೇರು ಬಿಟ್ಟಿತು ಎನ್ನುವುದು ಇತಿಹಾಸದಿಂದ ತಿಳಿದು ಬರುವ ಸತ್ಯ. ಅರಣ್ಯಗಳ ಅಂಚಿನಲ್ಲಿ, ಗ್ರಾಮಗಳ ನೆಮ್ಮದಿಯಲ್ಲಿ, ಶಾಂತಿಯ ಆಶ್ರಯಗಳಾಗಿ ಬಸದಿಗಳು ಉದಯಿಸಿದವು. ಬಸದಿಎಂದರೆ ದೇವಾಲಯ ಮಾತ್ರವಲ್ಲ ಅದು ಆತ್ಮದೊಳಗೆ ತಿರುಗಿ ನೋಡುವ ದ್ವಾರ. ಕೊಡಗಿನ ಜೈನ ಬಸದಿಗಳು ಅಲಂಕಾರದ ಗದ್ದಲವಿಲ್ಲದೆ, ಸರಳತೆಯಲ್ಲೇ ಭವ್ಯತೆಯನ್ನು ಕಂಡುಕೊಂಡವು. ಕಲ್ಲಿನ ಸ್ತಂಭಗಳು ಕಾಲದ ಹೊರೆ ಹೊತ್ತಿದ್ದರೂ, ಅವುಗಳೊಳಗಿನ ಶಾಂತಿ ಎಂದಿಗೂ ಕುಸಿಯಲಿಲ್ಲ. ತೀರ್ಥಂಕರರ ಧ್ಯಾನಮುದ್ರೆ ಮನಸ್ಸಿಗೆ ಮೌನದ ಭಾಷೆ ಕಲಿಸಿತು. ಜೈನ ಧರ್ಮ ಕೊಡಗಿನ ಸಮಾಜಕ್ಕೆ ಅಹಿಂಸೆ, ಸತ್ಯ, ತ್ಯಾಗ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ನೀಡಿತು. ಜೈನರು ವ್ಯಾಪಾರ, ಕೃಷಿ, ವಿದ್ಯಾಭ್ಯಾಸದ ಮೂಲಕ ಸಮಾಜದ ಅಭಿವೃದ್ಧಿಗೆ ಶಾಂತವಾಗಿ, ಆದರೆ ಸ್ಥಿರವಾಗಿ ಕೊಡುಗೆ ನೀಡಿದರು. ಬಸದಿಗಳು ಮೌಲ್ಯಗಳ ಮೌನ ಸಾಕ್ಷಿಗಳಾಗಿ ಉಳಿದಿವೆ. ಕಾಲ ಬದಲಾಗುತ್ತಿದ್ದಂತೆ, ಕೆಲವು ಬಸದಿಗಳಲ್ಲಿ ದೀಪ ಇನ್ನೂ ಬೆಳಗುತ್ತಿವೆ; ಕೆಲವು ಬಸದಿಗಳು ಮೌನವಾಗಿ ಸಂರಕ್ಷಣೆಯನ್ನು ಕಾಯುತ್ತಿವೆ. ಇತಿಹಾಸವನ್ನು ಉಳಿಸುವ ಜವಾಬ್ದಾರಿ ಇಂದಿನ ಪೀಳಿಗೆಯ ಕೈಯಲ್ಲಿದೆ ಎಂಬ ಸಂದೇಶವನ್ನು ಅವು ನಮಗೆ ನೆನಪಿಸುತ್ತವೆ.

ಧಾಮದಲ್ಲಿ ಕಲ್ಲಿನ ಶಿಲ್ಪಗಳಿಗೆ ಜೀವ ತುಂಬುವ ಕೈಗಳು, ಕೇವಲ ವಾಸ್ತುಶಿಲ್ಪವನ್ನು ಕಟ್ಟುತ್ತಿಲ್ಲ   ಅವು ನಂಬಿಕೆ, ತ್ಯಾಗ ಮತ್ತು ಭಕ್ತಿಯ ಭವಿಷ್ಯವನ್ನು ರೂಪಿಸುತ್ತಿವೆ. ತೀರ್ಥಂಕರರ ಪ್ರತಿಮೆಗಳು ಇಲ್ಲಿ ಧ್ಯಾನಮುದ್ರೆಯಲ್ಲಿ ನಿಂತು, ಅಶಾಂತ ಬದುಕಿಗೆ ಮೌನದ ಉತ್ತರ ನೀಡುವಂತೆ ಭಾಸವಾಗುತ್ತಿದೆ. ಕೊಡಗಿನ ಪುರಾತನ ಜೈನ ಬಸದಿಗಳು ಇತಿಹಾಸದ ಪುಟಗಳಾದರೆ, ಜಿರಾವಾಲಾ ಧಾಮ ವರ್ತಮಾನ ಮತ್ತು ಭವಿಷ್ಯದ ಸೇತುವೆ. ಕೊಡಗಿನ ಜೈನ ಬಸದಿಗಳು ಕಲ್ಲಿನಿಂದ ನಿರ್ಮಿತ ಕಟ್ಟಡಗಳಲ್ಲ; ಅವು ಶಾಂತಿಯ ತತ್ತ್ವವನ್ನು ಹೊತ್ತುಕೊಂಡ ಜೀವಂತ ಕಾವ್ಯಗಳು. ಕಾವ್ಯಕ್ಕೆ ಇಂದು ಜಿರಾವಾಲಾ ಧಾಮ ಹೊಸ ಪದ್ಯವನ್ನು ಸೇರಿಸುತ್ತಿದೆ. ಅಹಿಂಸೆಯ ಬೆಳಕು, ಮೌನದ ಮೂಲಕ ಮುಂದಿನ ಪೀಳಿಗೆಗಳ ಮನಸ್ಸಿನಲ್ಲಿ ಬೆಳಗುತ್ತಲೇ ಇರಲಿ. ಧಾಮದ ನಿರ್ಮಾಣವು ಪೂರ್ಣವಾಗಲು ಇನ್ನೋಂದೆರಡು ವರ್ಷ ಬೇಕಾಗುತ್ತದೆ ಎಂದು ಅಲ್ಲಿಯ ಮೇಲ್ವಿಚಾರಕರನ್ನು ಮಾತನಾಡಿಸಿದಾಗ ತಿಳಿದು ಬಂದ ವಿಷ. ಈ ಧಾಮ ಒಂದು ಸತ್ಯವನ್ನು ಮತ್ತೆ ನೆನಪಿಸುತ್ತಿದೆ  ಧರ್ಮವು ಕಾಲಕ್ಕೆ ಬಂಧಿತವಲ್ಲ. ಶತಮಾನಗಳು ಬದಲಾಗಬಹುದು, ಆದರೆ ಶಾಂತಿಯ ಅಗತ್ಯ ಎಂದಿಗೂ ಹಳೆಯದಾಗುವುದಿಲ್ಲ. ಕೊಡಗಿನ ಹಸಿರು ಮಡಿಲಲ್ಲಿ ಉದಯಿಸುತ್ತಿರುವ ಧಾಮ, ಅಹಿಂಸೆಯ ಶಾಶ್ವತ ಬೆಳಕನ್ನು ಮುಂದಿನ ಪೀಳಿಗೆಗಳಿಗೆ ಹಸ್ತಾಂತರಿಸುವ ದೀಪವಾಗಲಿ ಎನ್ನುವುದೆ ಆಶಯ ಕೂಡ.

No comments:

Post a Comment