Thursday, 22 October 2026

ಅಕ್ಷರದ ಬೆಳಕಿನಲ್ಲಿ ಬದುಕಿನ ದಾರಿ ತೋರಿದ ಗುರುಗಳು..

 ಕೆ.ಎಸ್.ಧನಂಜಯ

        ನನ್ನೊಡನೆ ಕಲಿತ ಎಷ್ಟು ಜನರಿಗೆ ಇವರ ಪರಿಚಯವಿದೆಯೋ ಗೊತ್ತಿಲ್ಲ. ಆದರೆ, ನನ್ನ ಬದುಕಿನಲ್ಲಿ ಅಚ್ಚಳಿಯದೆ ಉಳಿದಿರುವ ಒಬ್ಬ ಶಿಕ್ಷಕರ ಬಗ್ಗೆ ಒಂದೆರಡು ಸಾಲುಗಳನ್ನು ಬರೆಯಬೇಕೆನಿಸಿತು. ಇವರು ಹೆಚ್. ಎಲ್. ಅಲಿಖಾನ್ ಸರ್. ಮೂಲತಃ ಬೆಳಗಾವಿ ಜಿಲ್ಲೆಯವರು. ( ಸದ್ಯ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ಚಂದರಗಿ ಶಾಲೆಯ ಮುಖ್ಯೋಪಧ್ಯಾಯರಾಗಿ ನಿವೃತ್ತ ಜೀವನ ನಡೆಸುತ್ತಿದ್ದಾರೆ )  ಇವರು ಕೇವಲ ಕನ್ನಡ ಮತ್ತು ಇತಿಹಾಸವನ್ನು ಬೋಧಿಸಿದ ಶಿಕ್ಷಕರಲ್ಲ ಭಾಷೆಯ ಮೂಲಕ ಬದುಕಿನ ಪಾಠಗಳನ್ನು ಕಲಿಸಿದ ಮಾರ್ಗದರ್ಶಕರು. ಅಕ್ಷರಗಳನ್ನು ಜೋಡಿಸಿ ಪದಗಳನ್ನು ಕಟ್ಟುವುದು, ಪದಗಳ ಮೂಲಕ ಭಾವನೆಗಳನ್ನು ಅಭಿವ್ಯಕ್ತಿಸುವುದು, ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳುವುದು—ಇವೆಲ್ಲವನ್ನೂ ನನ್ನಂತಹ ಅನೇಕ ವಿದ್ಯಾರ್ಥಿಗಳಲ್ಲಿ ಬೆಳೆಸಿದ ಗುರುಗಳು. ( ನಾನು ಕಲಿತದ್ದು ಸರ್ಕಾರಿ ಫ್ರೌಡಶಾಲೆ ಕಾನ್ಬೈಲ್, ಸುಂಟಿಕೊಪ್ಪ, ಕೊಡಗು ಜಿಲ್ಲೆ.)  ನಾವು ಎಂಟನೇ ತರಗತಿಯಲ್ಲಿದ್ದಾಗ ಇವರಿಂದ ಪೂರ್ಣ ಪ್ರಮಾಣದ ಪಾಠಗಳನ್ನು ಕಲಿಯುವ ಅವಕಾಶ ದೊರೆಯಿತು. ಅದಕ್ಕೂ ಮೊದಲು, ಏಳನೇ ತರಗತಿಯಲ್ಲಿ ನಮಗೆ ಇಂಗ್ಲಿಷ್ ವ್ಯಾಕರಣವನ್ನೂ ಬೋಧಿಸಿದ್ದರು. ನಾವು ಹೈಸ್ಕೂಲ್ನಲ್ಲಿ ಓದುತ್ತಿದ್ದ ಕಾಲವದು. ದೂರದರ್ಶನದಲ್ಲಿ ಮಹಾಭಾರತ ಧಾರಾವಾಹಿ ಪ್ರಸಾರವಾಗುತ್ತಿದ್ದ ದಿನಗಳು. ಒಂದು ದಿನ ಸರ್ ತರಗತಿಯಲ್ಲಿ ಮಹಾಭಾರತದ ಕೆಲವು ಪ್ರಸಂಗಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಹೇಳಲು ಆರಂಭಿಸಿದರು. ಅವರ ಕಥನ ಶೈಲಿಯಲ್ಲಿ ಅದೆಂಥ ಮೋಡಿಯಿತ್ತೋ! ಪಾತ್ರಗಳು ನಮ್ಮ ಕಣ್ಣಮುಂದೆಯೇ ಜೀವಂತವಾಗಿ ನಿಂತಂತೆ ಭಾಸವಾಗುತ್ತಿತ್ತು. ಕಥೆ ಮುಂದೇನು ಎಂಬ ಕುತೂಹಲ ನಮ್ಮನ್ನು ಆವರಿಸಿತ್ತು. ಆದರೆ, ಸರ್ ಕೆಲವೇ ಪ್ರಸಂಗಗಳನ್ನು ಹೇಳಿ ಕಥೆಯನ್ನು ನಿಲ್ಲಿಸಿಬಿಟ್ಟರು.

    ನಮಗೆ ನಿರಾಸೆಯಾಯಿತು. ಮತ್ತೆ ಕಥೆ ಹೇಳುವಂತೆ ಅವರನ್ನು ಬೇಡಿಕೊಂಡೆವು  ಪಟ್ಟು ಹಿಡಿದೆವು. ಆದರೂ ಅವರು ಕಥೆಯನ್ನು ಮುಂದುವರಿಸಲಿಲ್ಲ.ಬದಲಿಗೆ, ನಮ್ಮಲ್ಲಿ ಓದುವ ಆಸಕ್ತಿ ಇರುವವರಿಗೆ ಒಂದು ಸುಂದರವಾದ ಅವಕಾಶವನ್ನು ತೆರೆದಿಟ್ಟರು. ನನ್ನ ಬಳಿ ರಾಮಾಯಣ, ಮಹಾಭಾರತ ಮತ್ತು ಪಂಚತಂತ್ರದ ಪುಸ್ತಕಗಳಿವೆ. ಯಾರಿಗೆ ಓದುವ ಆಸಕ್ತಿ ಇದೆಯೋ ಅವರು ಪುಸ್ತಕಗಳನ್ನು ತೆಗೆದುಕೊಂಡು ಓದಿ, ನಂತರ ನನಗೆ ಹಿಂದಿರುಗಿಸಿ” ಎಂದರು. ಆ ಮಾತು ನನ್ನೊಳಗಿನ ಓದಿನ ಆಸೆಗೆ ಹೊಸ ರೆಕ್ಕೆಗಳನ್ನು ನೀಡಿತು. ಆ ದಿನಗಳಲ್ಲಿ ಆ ಮೂರು ಪುಸ್ತಕಗಳನ್ನೂ ಪಡೆದು ಓದಿ ಮುಗಿಸಿದೆ.( ನನ್ನ ಬದುಕಿನಲ್ಲಿ ದೊಡ್ಡ ಪುಸ್ತಕಗಳನ್ನು ಓದಿಸಿದ ಕೀರ್ತಿ ಗುರುಗಳಿಗೆ ಸಲ್ಲುತ್ತದೆ ) ಕಥೆಗಳನ್ನು ಕೇಳುವುದರಲ್ಲಿದ್ದ ಆಸಕ್ತಿ, ಪುಸ್ತಕಗಳನ್ನು ಓದುವ ಅಭ್ಯಾಸವಾಗಿ ಬದಲಾಯಿತು. ಇಂದು ಹಿಂದಿರುಗಿ ನೋಡಿದಾಗ, ಅಲಿಖಾನ್ ಸರ್ ಅವರು ಅಂದು ಮಾಡಿದ್ದ ಆ ಸಣ್ಣ ಕೆಲಸದ ಮಹತ್ವ ಅರಿವಾಗುತ್ತದೆ. ಅವರು ನಮಗೆ ಕೇವಲ ಕಥೆ ಹೇಳುವ ಕಲೆಯನ್ನು ಕಲಿಸಲಿಲ್ಲ, ಕಥೆಗಳ ಮೂಲಕ ನಮ್ಮೊಳಗೆ ಕುತೂಹಲವನ್ನು ಹುಟ್ಟಿಸಿದರು. ಆ ಕುತೂಹಲವನ್ನು ಪುಸ್ತಕಗಳ ಕಡೆಗೆ ತಿರುಗಿಸಿದರು. ಪುಸ್ತಕಗಳ ಮೂಲಕ ಜ್ಞಾನದ ಹೊಸ ಜಗತ್ತಿಗೆ ನಮ್ಮನ್ನು ಪರಿಚಯಿಸಿದರು. ಒಬ್ಬ ಶಿಕ್ಷಕ ಪಾಠವನ್ನು ಬೋಧಿಸಬಹುದು, ಪರೀಕ್ಷೆಗೆ  ಸಿದ್ಧಗೊಳಿಸಬಹುದು, ಅಂಕಗಳನ್ನು ಗಳಿಸಲು ನೆರವಾಗಬಹುದು. ಆದರೆ, ವಿದ್ಯಾರ್ಥಿಯೊಳಗೆ ಓದುವ ಹಸಿವನ್ನು ಹುಟ್ಟಿಸಿ, ಜ್ಞಾನದ ಹಾದಿಯಲ್ಲಿ ಸ್ವತಃ ನಡೆಯುವಂತೆ ಪ್ರೇರೇಪಿಸುವುದು ಮಾತ್ರ ನಿಜವಾದ ಗುರುತ್ವ. ಅಲಿಖಾನ್ ಸರ್ ಅವರು ನನ್ನ ಬದುಕಿನಲ್ಲಿ ಅಂತಹ ಗುರುವಾಗಿದ್ದರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ,ಅವರು ಅಂದು ನಮ್ಮ ಕೈಗಿಟ್ಟದ್ದು ಕೇವಲ ಮೂರು ಪುಸ್ತಕಗಳನ್ನಲ್ಲ ಬದುಕಿನುದ್ದಕ್ಕೂ ಜ್ಞಾನವನ್ನು ಅರಸುವ ಹಂಬಲವನ್ನು.

    ಕಾಲ ಬದಲಾಗಿದೆ, ಶಾಲೆಯ ದಿನಗಳು ನೆನಪುಗಳಾಗಿವೆ, ವಿದ್ಯಾರ್ಥಿ ಜೀವನ ದೂರ ಸರಿದಿದೆ. ಆದರೆ, ಗುರುಗಳು ಬಿತ್ತಿದ ಜ್ಞಾನದ ಬೀಜಗಳು ಮಾತ್ರ ಮನಸ್ಸಿನಲ್ಲಿ ಮೊಳಕೆಯೊಡೆದು ಬೆಳೆಯುತ್ತಲೇ ಇವೆ.ನಮ್ಮ ಬದುಕಿನಲ್ಲಿ ಇಂತಹ ಶಿಕ್ಷಕರ ಪಾತ್ರವನ್ನು ನೆನಪಿಸಿಕೊಂಡಾಗ, ಮನಸ್ಸು ಕೃತಜ್ಞತೆಯಿಂದ ತುಂಬುತ್ತದೆ. ಏಕೆಂದರೆ, ಕೆಲವು ಗುರುಗಳು ನಮ್ಮ ಪಠ್ಯ ಪುಸ್ತಕಗಳಲ್ಲಿ ಮಾತ್ರ ಉಳಿಯುವುದಿಲ್ಲ ಬದಲಾಗಿ ನಮ್ಮ ಆಲೋಚನೆಗಳಲ್ಲಿ, ಅಭಿರುಚಿಗಳಲ್ಲಿ, ವ್ಯಕ್ತಿತ್ವದಲ್ಲಿ ಮತ್ತು ಬದುಕನ್ನು ನೋಡುವ ದೃಷ್ಟಿಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. ಅಲಿಖಾನ್ ಸರ್ ಅವರೂ ನನ್ನ ಪಾಲಿಗೆ ಅಂತಹ ಒಬ್ಬ ಅಪರೂಪದ ಗುರುಗಳು. ಅಕ್ಷರಗಳನ್ನು ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದಕ್ಕಿಂತಲೂ ಮಿಗಿಲಾಗಿ, ಅಕ್ಷರಗಳಾಚೆಗಿನ ಜಗತ್ತನ್ನು ಪರಿಚಯಿಸಿದ ಗುರುಗಳನ್ನು ಸ್ಮರಿಸುವುದೇ ನಿಜವಾದ ಗೌರವ.

    ಗುರುಗಳು ಪಾಠ ಮುಗಿಸಿ ತರಗತಿಯಿಂದ ಹೊರನಡೆದಿರಬಹುದು  ಆದರೆ ಅವರು ನಮ್ಮೊಳಗೆ ಹೊತ್ತಿಸಿದ ಜ್ಞಾನದ ದೀಪ ಎಂದಿಗೂ ಆರದು. ನನ್ನ ಬದುಕಿನಲ್ಲಿ ಓದಿನ ಪ್ರೀತಿಯನ್ನು ಬೆಳೆಸಿದ ಅಲಿಖಾನ್ ಸರ್ ನನ್ನ ಬದುಕಿನ ಕೊನೆಯ ಉಸಿರಾಟದವರೆಗೂ ನೆನಪಿನಲ್ಲಿರುತ್ತಾರೆ ನೀವು ಎಲ್ಲೇ ಇದ್ದರೂ ಕೈ ಜೋಡಿಸಿ ಪ್ರಾರ್ಥಿಸುವಾಗ ನಿಮ್ಮ ನೆನಪುಗಳು ಇರುತ್ತದೆ  ನಮನಗಳು.

No comments:

Post a Comment