Thursday, 4 December 2025

ಮಾತಿನಾಚೆ ನಗುವ ಮಿಂಚ ಹೇಗೆ ಹಿಡಿದು ತೋರಲಿ? 🥰🥰

 ಕೆ.ಎಸ್.ಧನಂಜಯ

            ಎಷ್ಟೋ ವರ್ಷಗಳ ನಂತರವೂ, ನನ್ನ ಮನಸ್ಸಿನ ಒಂದು ನಿಜವಾದ ಮೂಲೆಯಲ್ಲಿ ನೀನು ಇಂದು ಕೂಡಾ ಮೃದುವಾಗಿ, ನಿಶ್ಶಬ್ದವಾಗಿ ಬದುಕಿರುವೆ. ನಮ್ಮ ದಾರಿಗಳು ಒಂದೇ ದೀಪದಿಂದ ಬೆಳಗಿದ್ದರೂ ನಂತರ ಬೇರೆ ದಿಕ್ಕಿನಲ್ಲಿ ಹರಡಿಕೊಂಡವು. ಆದರೆ ಬೆಳಕು ಒಂದೇ ಆಗಿದ್ದರಿಂದ, ದೂರವಾದರೂ ನಾನು ನಿನ್ನ ನೆರಳನ್ನು ನನ್ನೊಳಗೆ ಎಂದೂ ಕಳೆದುಕೊಂಡಿರಲಿಲ್ಲ. ಜಗತ್ತು ನಮ್ಮಿಬ್ಬರ ಭೇಟಿಗೆ ಎಷ್ಟು ಬಣ್ಣಗಳು, ಎಷ್ಟು ಅರ್ಥಗಳು, ಎಷ್ಟು ವ್ಯಾಖ್ಯಾನಗಳನ್ನು ನೀಡಲಿ ನಾವು  ಎನಾಗಿದ್ದೆವೋ, ಹೇಗಿದ್ದೇವು, ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬರಿಗೊಬ್ಬರು ಏನು, ಹೇಗೆ ನಡೆದುಕೊಂಡೆವು ಎಂದು ನಮ್ಮಿಬ್ಬರಿಗಷ್ಟೇ ಗೊತ್ತು. ನಾವೇಕೆ ಪರಸ್ಪರ ದೂರಾದೆವು ಎನ್ನುವುದು ನನಗೂ, ನಿನಗೂ, ಭಗವಂತನಿಗೂ ಮಾತ್ರ ತಿಳಿದ ರಹಸ್ಯ.ಅದು ಲೋಕಕ್ಕೆ ಪ್ರಕಟವಾಗಬೇಕಾದ ಶಾಸನವಲ್ಲ. ನಿನ್ನೊಳಗೆ ನನಗೆ ನೋವು ಕೊಡುವ ಮನಸ್ಸಿದ್ದರೆ,ಮೋಸ ಮಾಡುವ ಅವಕಾಶವೂ ನಿನಗೆ ಇತ್ತು.ಆದರೆ ನೀನು ಆಯ್ದುಕೊಂಡ ದಾರಿ ಸುಳ್ಳಿನದಲ್ಲ, ಸತ್ಯದ ಹಾದಿ. ನಿನ್ನನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾರೆ ಎನ್ನುವ ಒಂದು ನೇರವಾದ ವಾಕ್ಯದಲ್ಲೇ ನೀನು ನನ್ನ ಬದುಕಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟೆ.  ಮೋಸಕ್ಕಿಂತ ಸತ್ಯವೇ ಹೆಚ್ಚು ನೋಯಿಸುತ್ತದೆಆದರೂ ಅದೇ ಹೆಚ್ಚು ಪವಿತ್ರಇವಳು ನನಗೆ ಸಿಗಲ್ಲ ಎಂದು ಬದುಕನ್ನು ದೌರ್ಜನ್ಯದಿಂದ ಕಸಿದುಕೊಂಡವರಿಗೆ ಕೊನೆಗೆ ಸಿಕ್ಕಿದ್ದು ಏನು? ಯೋಗ ಎನ್ನುವುದು ನಮಗೆ ಒಂದು ಜೀವವಾಗಲಿ , ವಸ್ತುವಾಗಲಿ ಒಲಿದು ಬರುವುದು , ಯೋಗ್ಯತೆ ಎನ್ನುವುದು ಅದನ್ನು ಬದುಕಿನ ಉದ್ದಕ್ಕೂ ಪ್ರೀತಿಸಿ ಉಳಿಸಿಕೊಂಡು ಹೋಗುವುದು. ಪ್ರೀತಿ ಸಿಗಲಿಲ್ಲ, ಗೌರವ ಉಳಿಯಲಿಲ್ಲ,ಮಾನವೀಯತೆ ಕೈ ತಪ್ಪಿತು. ಹಿಡಿದಿದ್ದು ದೇಹವನ್ನೇ ಹೊರತು ಹೃದಯವನ್ನಲ್ಲ. ಪ್ರತಿ ದಿನ ನಿನ್ನ ನೆನಪು ನನ್ನ ಹೃದಯಕ್ಕೆ ಅಂಟಿಕೊಂಡೇ ಇರುತ್ತದೆ. ಆದರೆ ಈ ನೆನಪುಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಹಂಚಿಕೊಂಡರೆ ನೋವು ಹೆಚ್ಚುತ್ತದೆ, ಮೌನಿಸಿದ್ದರೆ ಹೃದಯ ತುಂಬಿ ಕಕ್ಕುತ್ತದೆ.

         ಸಾಕಷ್ಟು ಬಾರಿ ನೀನು ನಮ್ಮ ಮನೆಗೆ ಬಂದು  ಉಳಿದು ಹೋಗಿದ್ದೆ. ಆ ದಿನಗಳ ಬೆಳಕು ಇಂದಿಗೂ ನನ್ನ ಮನೆಯಲ್ಲಿ ಜೀವಂತವಾಗಿದೆ. ನಿನ್ನ ಜೊತೆ ಕೈ ಕೈ ಹಿಡಿದು ನದಿಯ ದಡದಲ್ಲಿ ನಡೆದ ಆ ಹಾದಿಗಳು ಇಂದಿಗೂ ನನ್ನ ಜೀವನದ ಅತ್ಯಂತ ಪವಿತ್ರ ನೆನಪುಗಳೇ. ನೀನು ಜಗತ್ತಿಗೆ ಕಣ್ಮರೆಯಾಗಿರಬಹುದು ಆದರೆ ನಿನ್ನ ಸ್ಪರ್ಶ, ನಿನ್ನ ಮಾತು ನಿನ್ನ ನೋಟ ಪ್ರತಿ ಕ್ಷಣವೂ ನನ್ನೊಳಗೆ ಜೀವಂತ. ಹೇಗೆ ಮರೆಯಲಿ ನಿನ್ನ ?  ಹೇಗೆ ಮರೆಯಲಿ ನಿನ್ನೊಡನೆ  ಕಳೆದ ಆ ಜೀವನದ  ಚಿಕ್ಕ ಚಿಕ್ಕ ಅಮೂಲ್ಯ ಕ್ಷಣಗಳನ್ನು ? ನಿನ್ನನ್ನು ಪ್ರೀತಿಯಿಂದ, ಕಣ್ಣೀರಿನಿಂದ, ಸ್ಮರಣೆಯಿಂದ ಸ್ಮರಿಸುತ್ತಾ ಈ ಸಾಲುಗಳನ್ನು ಬರೆಯುತ್ತಿರುವೆ ಬರೆಯುವಾಗ ನನ್ನ ಕಣ್ಣಾಲಿಗಳು ತುಂಬಿ ಬರುತ್ತಿದೆ. ಎಷ್ಟೋ ವರ್ಷಗಳ ನಂತರವೂ, ನನ್ನ ಮನಸ್ಸಿನ ಒಂದು ನಿಜವಾದ ಮೂಲೆಯಲ್ಲಿ ನೀನು ಇಂದು ಕೂಡಾ ಮೃದುವಾಗಿ, ನಿಶ್ಶಬ್ದವಾಗಿ ಬದುಕಿರುವೆ. ಜಗತ್ತಿನ ಪಾಲಿಗೆ ನೀನು ಸತ್ತಿರಬಹುದು ಆದರೆ ನನಗೆ ನನ್ನೋಳಗೆ ಎಂದಿಗೂ ಜೀವಂತ ಇರುತ್ತೀಯ. ಪ್ರೀತಿಯೆಂದರೆ ಒಂದೇ ದಾರಿಗೆ ನಡೆಯಬೇಕೆಂಬ ನಿಯಮವಿಲ್ಲ ಎಂಬುದನ್ನು ನನ್ನ  ಜೀವನವೇ ಆಗಿದ್ದಾಗ ನೀನೆ ನನಗೆ ಹೇಳಿಕೊಟ್ಟ ಪಾಠ. ಬಾಲ್ಯದಲ್ಲಿ ಹಿಡಿದ ನಿನ್ನ ಕೈಯ ಬಿಸಿಯ ಸ್ಪರ್ಶ ಇನ್ನು ಹಾಗೇಯೆ ಇದೆ ಇಂದಿಗೂ ನೀನು ನನ್ನ ಕೈ ಬಿಟ್ಟಿಲ್ಲ ಎನ್ನುವುದು ಸ್ಪಷ್ಟ. ಕಾಲ ಬದಲಾಯಿತು, ಜೀವನ ನಮ್ಮನ್ನು ಬೇರೆ ಮನೆಗಳಿಗೆ, ಬೇರೆ ಕರ್ತವ್ಯಗಳಿಗೆ ಕರೆದೊಯ್ದಿತು, ನಾನೂ ನನ್ನ ಬದುಕನ್ನು ಕಟ್ಟಿಕೊಂಡೆ,ನೀನೂ ನಿನ್ನ ಸಂತೋಷವನ್ನು ಹುಡುಕಿಕೊಂಡೆ. ಆದರೂ ಹೃದಯದ  ಮೌನ ಮೂಲೆಯಲ್ಲಿ ನಾವು ಇಬ್ಬರೂ ಪರಸ್ಪರ ಬಾಗಿಲು ತೆರೆದಿಟ್ಟಿದ್ದೆವು ಬರುವೆಯಾ ಎಂಬ ನಿರೀಕ್ಷೆಗೆ ಅಲ್ಲ,ಬರಲಿಲ್ಲ ಎಂಬ ಮೌನ ಗೌರವಕ್ಕೆ. ಇಂದು ನೀನು ಈ ಲೋಕದಲ್ಲಿಲ್ಲವೆಂಬ ಸುದ್ದಿ ಹೃದಯಕ್ಕೆ ಸುಳಿಯಂತೆ ತಾಗಿದಾಗ, ನಾನು ಕಣ್ಣೀರಲ್ಲಿ ಹುಡುಕಿದ್ದು ನಿನ್ನ ನೋವಲ್ಲ ನಿನ್ನ ಸಂತೋಷ ಎಂದಿಗೂ ನಾನು ಬಯಸಿದ್ದು ನೀನು ಎಲ್ಲೋ ಒಂದು ಕೋಣೆಯಲ್ಲಿ ಶಾಂತವಾಗಿರು ಎಂದು ಆದರೆ ಇಂದು ನಿನ್ನದಾಗಿ ಉಳಿದಿರುವುದು ಒಂದು ಮೌನ ಪ್ರೀತಿ, ಒಂದು ಮಧುರ ನೆನಪು, ಮತ್ತು ನನ್ನ ಹೃದಯದ ಒಳಗಿನ ಶಾಶ್ವತ ಸ್ಥಳ. ನೀನು ಇಲ್ಲದೆ ಜೀವನ ಮುಂದುವರಿದರೂ,ನಿನ್ನ  ನೆನಪುಗಳಿಲ್ಲದೆ ಅದು ಸಂಪೂರ್ಣವಲ್ಲ. ನೀನು ಬದುಕಿದ್ದ ದಿನಗಳು ಪ್ರೀತಿಯ ಅರ್ಥ ಕಲಿಸಿದವು. ನೀನು ಇಲ್ಲದ ದಿನಗಳು ನೆನಪಿನ ಮೌಲ್ಯ ಕಲಿಸುತ್ತಿವೆ. ಇಂದು ನೀನು ಕಣ್ಣಿಗೆ ಕಾಣದಿದ್ದರೂ ನಿನ್ನ ಪ್ರೀತಿ ಮತ್ತು ನೀನು ಎಂದಿಗೂ ಮಸುಕಾಗುವುದಿಲ್ಲ. 
       ಕುವೆಂಪು ಒಂದು ಸಂಧರ್ಭದಲ್ಲಿ ಹೀಗೆ ಹೇಳುತ್ತಾರೆ  ಯಾರೋ ಎಲ್ಲೋ ಇದ್ದವರು ಸಿಗಬೇಕೆಂದರೆ ಋಣವಂತು ಇರಲೇಬೇಕು, ಸಿಕ್ಕವರೆಲ್ಲ ಬದುಕೊಳಗೆ ಬರಬೇಕೆಂದರೆ ಹಣೆ ಬರಹದೊಳಗೆ ಬರೆದಿರಲೇಬೇಕು, ಎಲ್ಲೋ ಇದ್ದವರು ಒಂದೆಡೆ ಸೇರಿಸಲು ಹಣೆ ಬರಹದೊಳಗಿದ್ದವರೆ ನಮ್ಮವರಾಗಿರಲು, ಪ್ರೀತಿಸಲು ನಿಯಮಗಳೆಕಿರಬೇಕು ಕಾಳಜಿಗೆ ಕಾರಣಗಳೇಕಿರಬೇಕು ಅಲ್ವೇ ?  ನೀ ಬಂದೆ ಬೆಳಗಿದೆ, ರೂಪ ಕೊಟ್ಟೆ ನಂತರ ಶಾಂತವಾಗಿ ಮತ್ತೊಂದು ಲೋಕದತ್ತ ಹೊರಟು ಹೋದೆ. ನಾವು ಹಂಚಿಕೊಂಡ ಮೌನ ಕ್ಷಣಗಳು, ನಗು, ನೋವುಗಳು ಇವೆಲ್ಲಾ ಈಗ ನನ್ನ ಆತ್ಮದ ಒಂದು ಭಾಗ. ನಿನ್ನನ್ನು ಈ ಲೋಕದಿಂದ ಕರೆಯುವ ದೇವರ ನಿರ್ಧಾರವನ್ನು  ನಾನು ಎಂದಿಗೂ ಪ್ರಶ್ನೆ ಮಾಡಲ್ಲ. ನೀನು ಈ ಜಗತ್ತಿನಿಂದ ನಿರ್ಗಮಿಸಿದನ್ನು ನಾನು ದುಃಖದಿಂದ ಅಲ್ಲ ಭಕ್ತಿಯಿಂದ ಸ್ವೀಕರಿಸುತ್ತೇನೆ ಬಹುಶಃ ನಿನ್ನ ಆತ್ಮಕ್ಕೆ ಈ ಮನುಷ್ಯ ಜೀವನ ಸಾಕಾಗಿರಬೇಕು ಎನಿಸುತ್ತಿದೆ , ಆ ದೇಹ ಇನ್ನೊಂದು ಶಾಂತಿಯ ದಾರಿಯನ್ನು ಬಯಸಿತೋ ಎನೋ ?  ಅದನ್ನು ನಾನು ಗೌರವಿಸುತ್ತೇನೆ. ಇಷ್ಟೂ ತನಕ ಎಲ್ಲೀಯೋ ಸುಖದಿಂದ  ಇದ್ದೀಯ ಎನ್ನುವ ಖುಷಿ ಇತ್ತು ಇನ್ನೂ ಆ ಖುಷಿಯೂ ಇಲ್ಲ,  ನೀನು ಇಲ್ಲವೆಂಬ ಸುದ್ದಿ ಕೇಳಿದಾಗ ಅದು ನನ್ನನ್ನು ನೆಲಕ್ಕೊರಗಿಸಿತು ಆದರೆ ಅಲ್ಲೇ ಬಿದ್ದಿದ್ದಾಗ ಆಕಾಶದತ್ತ ನೋಡಿದ ಕ್ಷಣದಲ್ಲಿ ಒಂದು ಸ್ಪಷ್ಟತೆ ಒಳಗೆ ಮೂಡಿತು ಪ್ರೀತಿ ಎಂದರೆ ದೇಹದ ವಿಷಯವಲ್ಲ ಅದು ಆತ್ಮದ ಸಂಬಂಧ, ಪರಸ್ಪರ ದೇಹಕ್ಕೆ ಯಾವತ್ತೂ ನಾವು ಆದ್ಯತೆ ನೀಡಲಿಲ್ಲ  ಎನ್ನುವುದು ಬೇರೆ ಮಾತು. ಇಂದೂ ಕೂಡ  ರಾತ್ರಿ ಗಾಳಿ ಮೃದುವಾಗಿ ಸ್ಪರ್ಶಿಸಿದಾಗ ಅದರೊಳಗೆ ನಿನ್ನ ಮೌನ ಸಾನ್ನಿಧ್ಯವಿದೆ, ಪ್ರಾರ್ಥನೆಗೆ ಕೈ ಜೋಡಿಸಿದಾಗ ನಿನ್ನ ನೆನಪಿನ ದೀಪ ಬೆಳಗುತ್ತದೆ, ನಕ್ಷತ್ರಗಳನ್ನು ನೋಡಿದಾಗ ನಿನ್ನ ಶಾಂತ ನಗು ಅದರ ಬೆಳಕುಗಳಲ್ಲಿ ಕರಗುತ್ತದೆ, ನೀನು ಈಗ ದೇವರ ಅಂಗಳದಲ್ಲಿ, ಲೋಕದ ನೋವುಗಳಿಂದ ದೂರ. ಶುದ್ಧ ಬೆಳಕಿನ ನಡುವೆ  ಅಲ್ಲಿ ನಿನ್ನ ಆತ್ಮ ಶಾಂತವಾಗಿರುವ ವಿಚಾರ ನನ್ನ ಮನಕ್ಕೆ ಆರಾಮ. ಈ ಜನ್ಮ ನಮ್ಮನ್ನು ದೂರವಿಟ್ಟರೂ, ಮತ್ತೊಂದು ಜನ್ಮದ ಮಾರ್ಗದಲ್ಲಿಈ ಪ್ರೀತಿಯ ಬೆಳಕು ಮತ್ತೆ ನಮ್ಮನ್ನು ಸೇರ್ಪಡಿಸಬಹುದು. 
    ಬಲವಂತದಿಂದ ಪಡೆದ ಸಂಬಂಧ ಸಂಬಂಧವಾಗುವುದಿಲ್ಲ, ಅದು ಜೀವನ ಪೂರ್ತಿ ಹೊತ್ತೊಯ್ಯಬೇಕಾದ ಪಾಪದ ನೆರಳಷ್ಟೇ. ಭಗವಂತನ ಇಚ್ಚೆಯಂತೆ ಇಂದಿಗೂ ನೀನು ನನ್ನ ಪ್ರಾರ್ಥನೆಗಳಲ್ಲಿ, ನನ್ನ ಮೌನಗಳಲ್ಲಿ, ನನ್ನ ಹೃದಯದ ನಿಶ್ಶಬ್ದ ದೇವಾಲಯದಲ್ಲಿ ಬೆಳಗುತ್ತಿರುವೆ. ನಿನಗಾಗಿ ನಿನ್ನ ನೆನಪಿಗಾಗಿ ನಾವು ಹಂಚಿಕೊಳ್ಳದ ಬದುಕಿಗಾಗಿ ಪ್ರೀತಿಯೊಂದು ನಿರಂತರ ಕಾಯುತ್ತೆ ಸುಮ್ಮನೆ ನಗುತ್ತಾ.

Thursday, 30 March 2017

ಘಟ್ಟದಿಂದ ಬೆಟ್ಟದ ಕೆಳಗೆ ನೋಡಿದ ಕಾರ್ತಿಕ್ ................

ಧನಂಜಯ ಮಡಿಕೇರಿ

          ಹಸ್ತಕ್ಕೆ ಬರಿ ನಕ್ಕೆ ಓದುತ್ತಾ  ಓದುತ್ತಾ ಮಸ್ತಕಕ್ಕಿಟ್ಟು ಗಂಭೀರವಾದೆ, ವಿಸ್ತರದ ದರ್ಶನಕ್ಕೆ ತುತ್ತ ತುದಿಯಲ್ಲಿ ನಿನ್ನ ಪುಸ್ತಕಕ್ಕೆ ಕೈ ಮುಗಿದೆ. ಇದು ಕವಿ ಕುವೆಂಪು ಕಗ್ಗ ಓದಿದ ನಂತರ ಊದಿದ  ಕಹಳೆ " ಕಾಡು ಹಾದಿಯ ಜಾಡು ಹತ್ತಿ " ಕಾರ್ತಿಕ್ ಮಾಡಿದ ಪ್ರಯಾಣ ಓದುಗನಿಗೆ ಎಲ್ಲೂ  ಪ್ರಯಾಸವಾಗುವುದಿಲ್ಲ. ತಮ್ಮ ಮೊದಲ ಪ್ರಯತ್ನದಲ್ಲಿ ಮಲೆನಾಡು ಅದರ ಸೌಂದರ್ಯ ಮತ್ತು ಅನಿವಾರ್ಯತೆ , ದಿನ ನಿತ್ಯದ ಬದುಕಿನಲ್ಲಿ ಸಾಮನ್ಯ ಬದುಕಿನ  ದರ್ಶನ , ಅದನ್ನು ಸಾಹಿತ್ಯಕ್ಕೆ ಇಳಿಸಿದ ರೀತಿ ಸುಂದರವಾಗಿದೆ . ಪಶ್ಚಿಮ ಘಟ್ಟದ ತಪ್ಪಲಿನ ಮಂದಿಗೆ ತುಳು , ಬ್ಯಾರಿ , ಮಲಯಾಳಂ ಹವ್ಯಕ ಕನ್ನಡ ಸಮಸ್ಯೆಯೆಂದು ನನಗನಿಸುವುದಿಲ್ಲ. ಹಾಗಾಗಿ ಕೃತಿಯಲ್ಲಿ ಭಾಷೆ ಕಷ್ಟವಾಗದೆ ಇಷವಾಗಿ ಓದಿಸಿ ಕೊಂಡು ಹೋಗುತ್ತದೆ.
        “ಅವಳೊಂದು ಪುಟ್ಟ ಕೊಳ ನನ್ನ ಬಾಳಿನ ಜೀವ ಜಲ”  ಎನ್ನುವ ಹಾಗೆ ಮಲೆನಾಡು, ಸಹ್ಯಾದ್ರಿ, ಪಶ್ಚಿಮ ಘಟ್ಟ ಯಾವುದೇ ಹೆಸರಿನಿಂದ ಕರೆಯಿರಿ  ಜೀವ ಸಂಕುಲಕ್ಕೆ ಅದರ ಅನಿವಾರ್ಯತೆ ಏನು? ಆ ಪ್ರಕೃತಿ ಬದುಕಿನಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎನ್ನುವುದನ್ನು ದಂಗೆಯ ದಿನಗಳು ನೆನಪಿಸಿದರೆ. ಬನದ ಹರಕೆಯೊಂದಿಗೆ ಆನೆಯ ಆಗಮನವಾಗುತ್ತೆ, ಅದರೊಂದಿಗೆ ಆನೆಗೆ ನಾವು ಅರಣ್ಯದ ಮಧ್ಯೆ ಅಷ್ಟು ಕೆರೆ ತೆಗೆಸಿದ್ದೇವೆ, ಅದಕ್ಕೆ ಆಹಾರಕ್ಕೆ ಬೇಕಾಗಿರುವ ಮರಗಳನ್ನು ಬೆಳೆಸಿದ್ದೇವೆ, ಎನ್ನುವ ಶಾಸಕನೊಬ್ಬ ಏಕ ಕಾಲದಲ್ಲಿ ಆನೆ ಮತ್ತು ಪ್ರಜೆಗೆ ಮೋಸಮಾಡುತ್ತಾನೆ  ಕೃತಿಕಾರ ಆತನನ್ನು ಬೆತ್ತಲಾಗಿಸಿದ್ದಾರೆ. ಮಧ್ಯದಲ್ಲಿ ಚಿಕಿತ್ಸೆಗೆ ಇಟ್ಟಿದ್ದ ಹಣ ಕಳೆದು ಹೋಗುತ್ತೆ ಅಂತಹ ಸಂಧರ್ಭದಲ್ಲಿ ಧರ್ಮ ಮತ್ತು ಜಾತಿಗಿಂತ ಹೆಚ್ಚಾಗಿ ಮಾನವೀಯತೆ ರಾರಾಜಿಸುತ್ತದೆ, ಎಲ್ಲೋ ಒಂದು ಕಡೆ ಕೃತಿಯ ಜಾಡು ಹಿಡಿದು ಹೊರಟಾಗ ಕೃತಿಕಾರ ಹೇಳಿದಂತೆ ಮಹಾಗುರು ತೇಜಸ್ವಿಗೆ ಸಿಕ್ಕ ಮರ-ಗಿಡ, ಹಳ್ಳಿಯ ಭಾಷೆ-ಬೈಗುಳ ಸಾಹಿತ್ಯದ  ಎಲ್ಲವೂ ಮಹಾಗುರುವನ್ನು ನೆನೆಪಿಸಿವಂತೆ ಮಾತನಾಡುತ್ತೆ. ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಬಣ್ಣ ಬಣ್ಣದ ಮುಖವಾಡದ ಬೆಂಗಳೂರು  ಈ ಮೊದಲೆ ನಮ್ಮ ಮನಸಿನಲ್ಲಿ ಮೂಡಿದ ಚಿತ್ರ ಸ್ಪಷ್ಟವಾಗುವಂತೆ ಮಾಡುತ್ತೆ.

     ಕೆಲವೊಂದು ಹೊಡೆತಗಳು ನಮ್ಮ ಬಡತನಕ್ಕೆ ಸ್ವಾಭಿಮಾನಕ್ಕೆ ಮತ್ತು ಅಸಾಯಕತೆಗೆ ಬಿದ್ದ ಏಟುಗಳು ಎಂದು ಕೃತಿಕಾರರೇ ಹೇಳಿರುವ ಹಾಗೆ ಅದು ಹಾಗೆ ಆಗಿದ್ದರೆ ಮಾತ್ರ ನಮ್ಮ ಕಾರ್ಯವಾಗಲಿ ಕವನ ಕಾವ್ಯವಾಗಲಿ ಗಟ್ಟಿತನ ಪಡೆದುಕೊಳ್ಳುವುದಕ್ಕೆ ಸಾಧ್ಯ.. ನೀರಿನ ಮಹತ್ವದಿಂದ ಮೊದಲುಗೊಂಡು ನೀರೆಯ ನೋವಿನೊಂದಿಗೆ ಅಂತ್ಯವಾಗುವ ಕೃತಿ ತನ್ನ ಬಾಲ್ಯದೊಂದಿಗೆ ನಲಿಯುತ್ತಾ-ಕಲಿಯುತ್ತಾ ಒಂದು ಪ್ರೀತಿಯ  ಕಥೆಗೆ ಬಂದು ನಿಂತಿರುವುದು ಅಭಿನಂದನಾರ್ಹ. ಮುಂದಿನ ದಿನಗಳಲ್ಲಿ ಕೃತಿಕಾರನ ಲೇಖನಿಯಿಂದ ಮತ್ತಷ್ಟು ಬರಹ ಮೂಡಬಹುದು ಎಂದು ನಿರೀಕ್ಷೆ ನನ್ನದು. 

Friday, 27 November 2015

ಗಾಯದ ಹೂವುಗಳು ಮತ್ತು ನಲ್ಮೆಯ ಸತೀಶ್......

ಧನಂಜಯ ಮಡಿಕೇರಿ.

ಕಾಜೂರು ಶಾಲೆ ಹತ್ತಿರ ಇರುವ ಪಶುವೈದ್ಯ ಶಾಲೆ ಬಳಿ ಆಲದ ಮರವಿದೆ ಅದರ ಬೇರುಗಳನ್ನು ಹಿಡಿದು ಉಯ್ಯಾಲೆ ಆಡಿದ ನೆನಪು ಮಾತ್ರ ನನಗೆ ಇರುವುದು. ಆದರೆ ನೀವು ಮರವನ್ನೇರಿ ಅದರ ಶೃಂಗದಲ್ಲಿ ನಿಂತು ಹೊರ ಜಗತ್ತನ್ನು ನೋಡಿದ ರೀತಿ ಮಾತ್ರ ಅದ್ಭುತ. ಹಾಗಂತ ನಿಮ್ಮ ಗಾಯದ ಹೂವುಗಳು ನನ್ನಲ್ಲಿ ಪಿಸುಗುಟ್ಟಿದವು. ಗಾಯದ ಹೂವುಗಳು ಕವನ ಸಂಕಲನ ನಿಮ್ಮ ದೈನಂದಿನ ಗೆಳೆಯರು ಯಾರು ? ನಿಮ್ಮ ಆದ್ಯತೆ ಏನು  ಎನ್ನುವುದನ್ನು ನನಗೆ ಅರ್ಥೈಸಿದೆ.
        ಇರುವೆಯ ಮೂಲಕ ಪ್ರಾರಂಭವಾಗುವ ನಿಮ್ಮ ಕವಿತೆ ಎಲ್ಲಾ ಕಡೆ ಇರುವೆ ಎನ್ನುವ ಸಂದೇಶದೊಂದಿಗೆ ಅದು ಊದುಗೋಳವೆ, ಖಾಲಿ ಡಬ್ಬ, ಚಪ್ಪಲಿಗಳು ಏನೇ ಆಗಿರಲಿ ಅದನ್ನು ನಿಮ್ಮ ಬರವಣಿಗೆ ಮೂಲಕ ಸ್ಪರ್ಶಿಸಿದ ರೀತಿ ಅದ್ಭುತವಾಗಿದೆ. ಕವಿತೆಗಳು ಅಸ್ವಸ್ಥವಾಗಿದೆ ವೈದ್ಯನಿಗೆ ಕೊಡಲು ಕಾಸಿಲ್ಲದೆ ಹಾಸಿಗೆಯ ಮೇಲೆ ನರಳುತ್ತಲೇ ಇವೆ ಎನ್ನುವುದು ನಿಮ್ಮ ಹೃದಯ ವಿಶಾಲತೆ ಅಲ್ಲದೆ ಬೇರೇನು ? ಇರಬಹುದು ನಿನ್ನೆ ಹುಟ್ಟಿದನ್ನು ಬೀದಿಯಲ್ಲಿ ಮೊನ್ನೆ ಹುಟ್ಟಿದನ್ನು ಚರಂಡಿಯಲ್ಲಿ ಎಸೆದಿರಬಹುದು. ಅದಕ್ಕೂ ಹಿಂದಿನದನ್ನು ಪೆನ್ನು ಇಂಕುಗಳೊಂದಿಗೆ  ಬೆಂಕಿ ಹಚ್ಚಿ ಸುಟ್ಟಿರಬಹುದು ಅದು ಅತಿಯಾಗಿ ಗಾಯಗೊಂಡವೇ ? ಎನ್ನುವುದು ನನ್ನ ಸಾತ್ವಿಕ ಪ್ರಶ್ನೆ. ಹಾಗಾದರೆ  ಗಡಿನಾಡ ಸಂಚಾರಿ, ಶಕ್ತಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಉದಯವಾಣಿ, ಅವಧಿ, ಪಂಜು ಮುಂತಾದ ಕಡೆ ನುಸುಳಿದವು ಗಾಯದ ಹೂವುಗಳು ಅಲ್ಲವೇ.? ಹೌದು, ಅವೆಲ್ಲವೂ ಗಾಯದ ಹೂವುಗಳೇ ಅದನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಿರಿ ಮುಲಾಮು ಹಚ್ಚುವವರು ಹಚ್ಚಲಿ ? ಕೆರೆದು ಗಾಯ ಮಾಡುವವರು  ಮಾಡಲಿ  ತಪ್ಪೇನು.?
 ನಿಮ್ಮ ಕಾವ್ಯ ಕೃಷಿಯಲ್ಲಿ ನನಗೆ ಕಂಡಿದ್ದು ಸೂಕ್ಷ್ಮತೆ, ಬದುಕಿನ ಪದರುಗಳನ್ನು ನೀವು ಪ್ರವೇಶಿಸಿದ ರೀತಿ, ಅದರ ಒಳಹೊಕ್ಕು ನೋಡಿದ ರೀತಿ ಮತ್ತು ಅನಾವರಣಗೊಳಿಸಿದ ಶೈಲಿ, ಅನುಭವ, ಕೋಮಲತೆ, ತೀಕ್ಷಣತೆ ಮತ್ತು ಕಾವ್ಯ ಕೃಷಿಯಲ್ಲಿ ನಿಮಗಿರುವ ಪ್ರಭುದ್ದತೆ ಭಕ್ತಿ ಎಲ್ಲವನ್ನು ನಾನು ಕಂಡೆ.
        ಸಾಹಿತ್ಯ ಲೋಕದ ಜನಪ್ರಿಯ ಕವಿಗಳ ಸಾಲಿಗೆ ಸೇರುವ ಎಲ್ಲಾ ರೀತಿಯ ಅರ್ಹತೆ  ಮತ್ತು ಸಾಮರ್ಥ್ಯ ಗಾಯದ ಹೂವುಗಳಿಗೆ ಇದೆ. ಆ ಮೂಲಕ ಕವಿಯಾದ ನಿಮಗೂ ಇದೆ ಎಂದು ಸಾಕ್ಷಿಕರಿಸಿದ್ದಿರಿ. ಗಾಯದ ಹೂವುಗಳ ಬುಟ್ಟಿಯಲ್ಲಿ ಭಾಷೆ, ಮಣ್ಣಿನ ಸತ್ವ, ಪ್ರಕೃತಿಯ ವೈಭವ, ಹಕ್ಕಿಗಳ ಚಿಲಿಪಿಲಿ, ಪ್ರತಿಭಟನೆ, ಆಧುನಿಕ ಬದುಕು, ಅದರೊಳಗಿನ ಜಟಿಲತೆ, ಕುಟಿಲತೆ ಎಲ್ಲವೂ ಅನಾವರಣಗೊಳಿಸುವ ನಿಮ್ಮ ಶ್ರಮ ಇಷ್ಟವಾಯಿತು. ಪ್ರಕೃತಿ ಮತ್ತು ಮನುಷ್ಯನ ನಡುವೆ ನಿಂತು ಜಗತ್ತನ್ನು ನೋಡಿದ ದೃಷ್ಟಿಕೋನ ನನಗೆ ಒಟ್ಟಾರೆ ನಿಮ್ಮ ಕವನ ಸಂಕಲನ ಓದಿಕೊಂಡು ಹೋದಾಗ  ಇಷ್ಟವಾಗಿದ್ದು. ಕವಿತೆಯನ್ನು ಕ್ಲೀಷ್ಟತೆಯ ಗೂಡಾಗಿಸದೆ ಇಷ್ಟವಾಗಿ ಓದಿಕೊಂಡು ಹೋಗುವಂತೆ ಮಾಡಿದ ನಿಮ್ಮ ಶ್ರಮ ಸಾರ್ಥಕವಾಗಿದೆ . ನಿಮ್ಮ ಲೇಖನಿಯಿಂದ ಹೆಚ್ಹು ಹೆಚ್ಚು ಕವಿತೆಗಳು ಮೂಡಲಿ ಬದುಕು ಸುಂದರವಾಗಿರಲಿ.

Wednesday, 24 July 2013

ಬಿಗ್ ಬಾಸ್ ಮತ್ತು ಧೋನಿ ಮಧ್ಯೆ ನಗಣ್ಯವಾದ ಸೈನಿಕ ?

ಧನಂಜಯ ಮಡಿಕೇರಿ

ಸೈನ್ಯ ,ಚಾಂಪಿಯನ್ ಟ್ರೋಫಿ ಮತ್ತು ಬಿಗ್ ಬಾಸ್ ಈ ಮೂವರಲ್ಲಿ ಯಾರು ಹಿತವರು ಎಂಬ ಪ್ರಶ್ನೆ ಉದ್ಭವವಾದರೆ ನಿಮ್ಮ ಉತ್ತರ ಏನು? ಆದರೆ ನನ್ನ ಉತ್ತರ ಮಾತ್ರ ಸೈನ್ಯ. ಇತ್ತೀಚಿಗೆ ಮುಗಿದ ಚಾಂಪಿಯನ್ ಟ್ರೋಫಿ ಕ್ರಿಕೇಟ್, ಇತ್ತೀಚಿಗೆ ಮುಗಿದ ಈ ಟಿ.ವಿ ಕನ್ನಡ ವಾಹಿನಿಯ ಬಿಗ್ ಬಾಸ್ ಇವು ಮೂರು ವಿಷಯಗಳನ್ನು ಗಮನಿಸಿದಾಗ ನನಗೊಂದು ಪ್ರಶ್ನೆ ಉದ್ಭವವಾಯಿತು ಅದನ್ನು ನಿಮ್ಮ ಮುಂದೆ ಇಟ್ಟು ಬಿಡುವ ಎನ್ನುವ ಕಸರತ್ತು ಈ ಲೇಖನ.

    ನಮ್ಮ ಈ ಟಿ.ವಿ ಕನ್ನಡ ವಾಹಿನಿಯಲ್ಲಿ  ಮೂಡಿ ಬಂದ ಬಿಗ್ ಬಾಸ್ ಕಾರ್ಯಕ್ರಮ ಕನ್ನಡದ ಪ್ರಥಮ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆ ಈ ವಾಹಿನಿಗೆ ಇದ್ದರೂ, ಸಮಾಜಕ್ಕೆ ಈ ಕಾರ್ಯಕ್ರಮದ  ಮೂಲಕ ಸಂದೇಶ ಇಲ್ಲದೇ ಹೋದರು ಈ ಕಾರ್ಯಕ್ರಮದ ಮೂಲಕ ಅದರ ಟಿ.ಆರ್.ಪಿ ( ಟೆಲಿವಿಷನ್ ರೇಟಿಂಗ್ ಪಾಯಿಂಟ್) ಜಾಸ್ತಿಯಾಗಿದ್ದು ಮಾತ್ರ ಸುಳ್ಳಲ್ಲ. ಕೆಲವು ದೃಶ್ಯಗಳನ್ನು ನಾನು ಕೂಡ ವೀಕ್ಷಣೆ ಮಾಡಿದ್ದೇನೆ ನನ್ನಂತೆ ಹಲವರು ವೀಕ್ಷಿಸಿ ಇದೆಂತಾ ಕಾರ್ಯಕ್ರಮ ಎನ್ನುತ್ತಾ ಸಂಪೂರ್ಣ ಅಧ್ಯಾಯ ಮುಗಿಯುವವರೆಗೆ ನೋಡಿದವರು ಅದೇಷ್ಟೋ ಮಂದಿ ನಮ್ಮ  ಮಧ್ಯೆ ಇದ್ದಾರೆ. ಒಟ್ಟಿನಲ್ಲಿ ಸಮಾಜಕ್ಕೆ ಸಂದೇಶವಿಲ್ಲದೆ ಮುಕ್ತಾಯಗೊಂಡ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಎನ್ನುವುದು ಮಾತ್ರ ಸುಳ್ಳಲ್ಲ.
ಇನ್ನು ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್ ಟ್ರೋಫಿ ಕ್ರಿಕೇಟ್, ಭಾರತದ ಮಟ್ಟಿಗೆ ಕ್ರಿಕೇಟ್ ಒಂದು ಜನಪ್ರಿಯ ಕ್ರೀಡೆ  ಏನೋ  ಸರಿ, ಅದಕ್ಕಿರುವ  ಜನ ಬೆಂಬಲ  ಬೇಡವೆಂದರೂ ನಮ್ಮ  ದೇಶದಲ್ಲಿ  ಅದಕ್ಕಾಗಿ ತುಡಿಯುವ ಮಿಡಿಯುವ ಸಾಕಷ್ಟು ಮಸಸ್ಸುಗಳು ನಮ್ಮ ಮಧ್ಯೆ ಇವೇ. ಅದು ಪರೋಕ್ಷವಾಗಿ ಆ ಕ್ರೀಡೆಗೆ ಇರುವ ಜನಪ್ರಿಯತೆಯು  ಹೌದು. ಒಂದು ಕಾಲದಲ್ಲಿ ಜಂಟಲ್ ಮ್ಯಾನ್ ಗೇಮ್ ಎಂಬ ಹೆಗ್ಗಳಿಕೆ ಇದ್ದ ಕ್ರಿಕೇಟ್ ಕ್ರಮೇಣವಾಗಿ ಆ ಪಟ್ಟವನ್ನು ಕಳೆದುಕೊಂಡರು, ಅದರ ಜನಪ್ರಿಯತೆ ಮಾತ್ರ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿರುವುದು ಕೂಡ ಅಷ್ಟೇ ಸತ್ಯ. ಕೆಲವರಿಗೆ ಕ್ರಿಕೇಟ್ ಜೂಜು, ಮನೋರಂಜನೆ ಮತ್ತೆ ಕೆಲವರಿಗೆ ಅದೊಂದು ಸೋಮಾರಿಗಳನ್ನು ಸೃಷ್ಟಿಸುವ ಕ್ರೀಡೆ ಹಲವರಿಗೆ ಅದೊಂದು ಧರ್ಮ. ಒಟ್ಟಿನಲ್ಲಿ ಅವರವರ ಭಾವಕ್ಕೆ ಭಕುತಿಗೆ. ಇತ್ತೀಚೆಗೆ ಮುಕ್ತಾಯವಾದ ಚಾಂಪಿಯನ್ ಟ್ರೋಫಿ  ಕ್ರಿಕೇಟ್ ಮ್ಯಾಚ್ ಫಿಕ್ಸಿಂಗ್ ಮತ್ತು ಹಗರಣಗಳಿಂದ ಕುಸಿದ ಭಾರತೀಯ ಕ್ರಿಕೇಟ್ ಗೆ  ಚೇತರಿಕೆ ನೀಡುವುದರೊಂದಿಗೆ ಮತ್ತಷ್ಟು ಅದರ ಮಾರುಕಟ್ಟೆಯನ್ನು ಹೆಚ್ಚಿಸಿಕೊಂಡಿದೆ ಎನ್ನಬೇಕು.
      ಇವೆರಡನ್ನೂ ಅವಲೋಕಿಸಿದರೆ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಮನರಂಜನೆಗೆ ಸೀಮಿತವಾಗಿ ಸಮಾಜಕ್ಕೆ ಯಾವುದೇ ಸಂದೇಶವಿಲ್ಲದ ಕಾರ್ಯಕ್ರಮವಾದರೆ, ಚಾಂಪಿಯನ್ ಟ್ರೋಫಿ ಕ್ರಿಕೇಟ್ ಕೇವಲ ಮನರಂಜನೆಗೆ ಸೀಮಿತವಾಯಿತು. ಆದರೆ ಉತ್ತರಖಂಡ ರಾಜ್ಯದಲ್ಲಿ ನಡೆದ ರಾಷ್ಟ್ರೀಯ ದುರಂತ ಒಂದಷ್ಟು ನೋವು, ದೇಶದ ಸೈನಿಕರು ಮತ್ತು ಅದರ ಕಾರ್ಯದ ಬಗ್ಗೆ ದೇಶದ ಎಲ್ಲಾ ಜನರ ಅಂತರಂಗದ ದೃಷ್ಟಿಯನ್ನು ತೆರೆಸಿದ್ದು ಸುಳ್ಳಲ್ಲ. ದೇಶದ ಸೈನ್ಯದ ಅಂಗವಾಗಿರುವ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್(ITBP) ತಂಡ ಮತ್ತು ಅದರ ಜವಾನರು ಜೀವದ ಹಂಗು ತೊರೆದು ನಮ್ಮ ಜನರ ಕೆಲಸ ಮಾಡಿದ್ದು ಇದೆಯಲ್ಲ ಅದು ಇಂದಿನ ಯುವ ಪೀಳಿಗೆಗೆ ನಮ್ಮ ದೇಶ ಎಂದರೆ ಏನು ? ಅಲ್ಲಿಯ ಜನರು ಯಾರು ನಮಗೆ ಏನು ಸಂಭಂದ ಮತ್ತು ನಾವು ಅವರಿಗಾಗಿ ಏಕೆ ಕೆಲಸ ಮಾಡಬೇಕು? ಎನ್ನುವುದನ್ನು ಮಾಡಿ ತೋರಿಸಿದರಲ್ಲ ಅದು ನಿಜವಾದ ಸಂದೇಶ. (ಅದನ್ನು ಎಷ್ಟು ಮಂದಿ ಇಷ್ಟ ಪಟ್ಟಿದಾರೋ ನೋಡಿದ್ದಾರೋ ಅದು ಬೇರೆ ವಿಷಯ) ಅದು ದೇಶದ ಸಾಕಷ್ಟು ಮಂದಿಯ ಅಂತರಂಗದ ದೃಷ್ಟಿ ತೆರೆಸಿರುವುದು ಸುಳ್ಳಲ್ಲ. ದೇಶದ ಸೈನ್ಯವೆಂದರೇನು ಅದರ ಕೆಲಸವೇನು ಅದರ ಬದ್ದತೆಗಳು ಏನು? ಎಂದು ಅದನ್ನು ದೇಶದ ಜನರಿಗೆ ಮೂಲೆ ಮೂಲೆ ತಲುಪಿಸಿದ ಕೀರ್ತಿ ಮಾತ್ರ ನಮ್ಮ ದೃಶ್ಯ ಮಾಧ್ಯಮಗಳದ್ದು ಮತ್ತು ಸಾಮಾಜಿಕ ತಾಣಗಳದ್ದು. ಇದನ್ನೆಲ್ಲ ಯೋಚಿಸಿದರೆ ನಾವು ಎಲ್ಲೋ ಒಂದು ಕಡೆ ಮಾತಿಗೆ ಸೀಮಿತವಾಗುತ್ತಿದ್ದೇವೆ. ನಮ್ಮ ನುಡಿ ನಡೆಯಷ್ಟು ತೂಕವಿಲ್ಲ, ಇದರ ಮಧ್ಯೆ ನಾವು ಗಮನಿಸ ಬೇಕಾದ ವಿಷಯವೆಂದರೆ ಚಾಂಪಿಯನ್ ಟ್ರೋಫಿ ಗೆದ್ದ ಪ್ರತಿಯೊಬ್ಬ ಆಟಗಾರನಿಗೆ ಒಂದು ಕೋಟಿ ಬಹುಮಾನ , ಸಮಾಜಕ್ಕೆ  ಯಾವುದೇ ಸಂದೇಶವಿಲ್ಲದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗೆದ್ದವರಿಗೆ ೫೦ ಲಕ್ಷ, ದೇಶಕ್ಕಾಗಿ ತನ್ನ ಸಂಸಾರ ಮಕ್ಕಳನ್ನು ತೊರೆದು ಅದೆಷ್ಟೋ ಕಿ.ಮೀ ದೂರದಲ್ಲಿ ಈ ದೇಶ ನನ್ನ ತಾಯಿ , ಇಲ್ಲಿಯ ಜನರು ನನ್ನ ಸಂಸಾರ ಎಂದು ದುಡಿಯುತ್ತಿರುವ ಸೈನಿಕ ತನ್ನ ಮಕ್ಕಳನ್ನು ಅನಾಥವಾಗಿಸಿ ಮಡದಿಯನ್ನು ವಿಧವೆಯಾಗಿಸಿ ದೇಶಕ್ಕಾಗಿ ದುಡಿಯುತ್ತಾ ಮಡಿದರೆ ಕೇವಲ ೨೦ ಲಕ್ಷ.! ದುರಂತವೆಂದರೆ ಇದಲ್ಲವೇ ? 
ನಾವು ಈ ದೇಶದಲ್ಲಿ ಒಂದು ನೂರಾ ಇಪ್ಪತ್ತೆರಡು ಕೋಟಿ ಜನರಿದ್ದೇವೆ ಏನು ಪ್ರಯೋಜನ.? ತಲಾ ಒಂದು ರುಪಾಯಿ ನೀಡಲು ನಮಗೆ ಯೋಗ್ಯತೆ ಇಲ್ಲವೇ.? ದೇಶದ ಸಾರ್ವಜನಿಕ ವ್ಯವಸ್ಥೆ, ಸೈನಿಕನ ಬಗ್ಗೆ ಗಂಟೆಗಟಲೆ ಮಾತನಾಡುವ ನಾವು ನಮಗಿರುವ ಬದ್ದತೆ ಇದೇನಾ ಎನ್ನುವುದು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಒಬ್ಬ ಸೈನಿಕನಾಗಲಿ ಅಥವಾ ಒಬ್ಬ ಸಾಮಾನ್ಯ ವ್ಯಕ್ತಿಯಾಗಲಿ ಯೋಚಿಸ ಬೇಕಾಗಿರುವುದು ನಾವು ಹುಟ್ಟಿದ್ದು ಇಲ್ಲಿ, ನನ್ನನ್ನು ಕಾಪಾಡಿದ್ದು ಈ ದೇಶದ ಸಾರ್ವಜನಿಕ ವ್ಯವಸ್ಥೆ, ನನ್ನನ್ನು ಬೆಳೆಸಿ ಕಾಪಾಡಿ ನನಗೆ ಸಮಾಜದಲ್ಲಿ ಒಂದು ಗೊತ್ತಾದ ಸ್ಥಾನ ನೀಡಿದ್ದು ಈ ದೇಶದ ಕಾನೂನು ಕಟ್ಟುಪಾಡು. ಇಂತಹ ಸನ್ನಿವೇಶದಲ್ಲಿ ನಮ್ಮ ದೇಶಕ್ಕೆ ಸೈನಿಕರು ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಾಗೇ ನಾವು ಮಾಡಿಕೊಂಡಿದ್ದೆವೆಯೇ? ಚಾಂಪಿಯನ್ ಟ್ರೋಫಿ ಪಂದ್ಯಕ್ಕೆ ರಕ್ಷಣೆ ಕೊಟ್ಟಿದ್ದು ಆ ದೇಶದ ರಕ್ಷಣಾ ಪಡೆ, ಬಿಗ್ ಬಾಸ್ ಕಾರ್ಯಕ್ರಮಕ್ಕೆ ರಕ್ಷಣೆ ಕೊಟ್ಟಿದ್ದು ಆ ರಾಜ್ಯದ ಭದ್ರತಾ ಪಡೆ ಇವೆಲ್ಲವನ್ನೂ ನಿರ್ಭಯ ಮತ್ತು ನಿರ್ಭೀತಿಯಿಂದ ಸದಾ ನೋಡುತ್ತಿರಿ ಎಂದು ನಮ್ಮನ್ನು ಸದಾ ರಕ್ಷಣೆ ಮಾಡುತ್ತಿರುವುದು ನಮ್ಮ ದೇಶದ ಸೈನಿಕ ವ್ಯವಸ್ಥೆ. ಆದರೆ ಅಂತಹ ಒಬ್ಬ ಸೈನಿಕ ಮೃತಪಟ್ಟಾಗ ನಾವು ಒಂದು ನೂರಾ ಇಪ್ಪತ್ತೆರಡು ಕೋಟಿ ಜನರಿದ್ದರೂ ನಾವು ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲವಲ್ಲ ಇದನ್ನು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕಾಗಿದೆ. ಜೊತೆಗೆ ಈ ದೇಶದ ಸೈನಿಕನಾಗಲಿ ಒಬ್ಬ ಸಾಮನ್ಯ ಪ್ರಜೆಯಾಗಲಿ ಮೃತಪಟ್ಟಾಗ ಅವರ ಸಂಭಂದಿಕರಿಗೆ ಆಗುವ ನೋವು ನಮ್ಮ ನೋವು ಕೂಡ ಆಗಿರಲಿ ಎನ್ನುವುದೇ ನಮ್ಮ ಕಳಕಳಿ ಏನಂತಿರಾ..?

Sunday, 21 July 2013

ಕಟ್ಟ ಕಡಕಡ ಇಲ್ಲದೇ ಹೋದರೆ ಡಿಡಾ ಡಿಡ್ ಡಾ ಇದೆಯಲ್ಲ.....!

ಧನಂಜಯ ಮಡಿಕೇರಿ                     
ಅಮ್ಮ ನಾನು ನ್ಯುಯಾರ್ಕ್ ನಗರಕ್ಕೆ ವಿಧ್ಯಾಭ್ಯಾಸ ಮಾಡುವ ಸಲುವಾಗಿ ಹೋಗುತ್ತಿದ್ದೇನೆ, ನಿನ್ನ ಸಂಪರ್ಕವಿಲ್ಲದೇ,ನಿನ್ನ ಪ್ರೀತಿ ಇಲ್ಲದೆ ಹೇಗೆ ಇರಲಿ ಅಮ್ಮ?ನಿನ್ನನ್ನು ಸಂಪರ್ಕಿಸುವ ಒಂದು ಸಂಪರ್ಕ ಮಾಧ್ಯಮವನ್ನು ನಾನು ಕಂಡು ಹಿಡಿಯುತ್ತೇನೆ ಆ ಮೂಲಕ ನಿನ್ನನ್ನು ನಾನು ಸಂಪರ್ಕ ಮಾಡುತ್ತೇನೆ ಎಂಬುದನ್ನು ತಿಳಿಸಿದವನೇ ಸ್ಯಾಮುಯಲ್  ಎಪ್.ಬಿ.ಮೊರ್ಸ್. ಎಪ್ರಿಲ್ 27, 1791 ರಿಂದ 1872 ಎಪ್ರಿಲ್ 2 ರವರೆಗೆ ಬಾಳಿ ಬದುಕಿದ ಮೊರ್ಸ್ ಜಗತ್ತು ನಿನ್ನೆವರೆಗೆ ಕಳುಹಿಸುತ್ತಿದ್ದ ಟೆಲಿಗ್ರಾಂ ಸಂದೇಶದ ಜನಕ ಎನ್ನಲೇ ಬೇಕು.  
ಆತನ ಮೊರ್ಸ್ ಕೋಡ್ ಬಳಸಿ ನಿನ್ನೆಯವರೆಗೆ ಕಳುಹಿಸುತ್ತಿದ್ದ ಟೆಲಿಗ್ರಾಂ ಸಂದೇಶ  ಮುಕ್ತ ಸಾರ್ವಜನಿಕ ಸೇವೆಯಿಂದ ನಿಂತು ಹೋಗಿರಬಹುದು, ಆದರೆ ದೇಶದ ಸೇನೆ ಮತ್ತು ಪೊಲೀಸ್ ಇಲಾಖೆಯಲ್ಲಿ ಇದು ಇನ್ನು ಜೀವಂತವಾಗಿದೆ. ಇದು ಪೋಸ್ಟ್ ಆಫೀಸ್ ನಲ್ಲಿ ಕಟ್ಟ ಕಡಕಡ ಆದರೆ ಪೊಲೀಸ್ ಮತ್ತು ಸೇನೆಯಲ್ಲಿ ಡಿಡಾ ಡಿಡ್ ಡಾ ಆಗಿ ಇನ್ನು ಚಾಲ್ತಿಯಲ್ಲಿದೆ. ಅದನ್ನು ಕೇಳುತ್ತಾ ಹೋದಂತೆ ಒಂದು ಸುಂದರ ಸಂಗೀತ ಕೇಳಿದಾಗೆ ಅನುಭವವಾಗುತ್ತೆ. ಅದೇನೆ ಇರಲಿ ಒಬ್ಬ ತಾಯಿಯ ಸಂಪರ್ಕಕ್ಕೆ ಸಾಧನೆ ಮಾಡಿದ ಒಂದು ಕೆಲಸ ಆತನ ತಲೆಮಾರಿನಿಂದ ತಲೆಮಾರಿನವರೆಗೆ ಈ ಜಗತ್ತಿನಲ್ಲಿ ಚಾಲ್ತಿಯಲ್ಲಿತ್ತು ಎಂದರೆ ಆತನ ಸಾಧನೆಗೆ ಇದಕಿಂತ ದೊಡ್ಡ ಪುರಸ್ಕಾರ ಬೇಕಿಲ್ಲ ಅನಿಸುತ್ತೆ.
 ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯೂಯಾರ್ಕ್ ನಗರದಿಂದ ಇಂಗ್ಲೆಂಡ್ ತನಕ ಸಮುದ್ರದಲ್ಲಿ ಕೇಬಲ್ ಹಾಕಿ ಸಂದೇಶ ಕಳುಹಿಸುವುದರೊಂದಿಗೆ ಒಂದು ಬದಿಯಿಂದ ಶಬ್ದ ತರಂಗಗಳನ್ನು ವಿದ್ಯುತ್ ತರಂಗಕ್ಕೆ ಬದಲಾಯಿಸಿ ನಂತರ ಅದು ಸ್ವೀಕೃತಿವಾಗುವಾಗ, ಮತ್ತೆ ಶಬ್ದ ತರಂಗವಾಗಿ ಪರಿವರ್ತನೆಯಾಗಿ ಸಂದೇಶ ಸ್ವಿಕೃತವಾಗುವ ಒಂದು ಮಾಧ್ಯಮ. ಈ ಮೊರ್ಸ್ ವಿದ್ಯೆಯಲ್ಲಿ ಪರಿಣತಿ ಇಲ್ಲದೆ ಸಂದೇಶವನ್ನು ತಪ್ಪಾಗಿ ಸ್ವೀಕರಿಸಿ ಅದನ್ನು ತಪ್ಪಾಗಿ ಜನರಿಗೆ ಕೊಟ್ಟು ಆ ಮೂಲಕ ಸಾಕಷ್ಟು ತಪ್ಪುಗಳಿಗೆ ಮತ್ತು ಟೀಕೆಗಳಿಗೆ ಅಂಚೆ ಇಲಾಖೆ ಒಳಗಾಗಿದೆ.ಇಂದು ಬೆಳೆಯುತ್ತಿರುವ ತಂತ್ರಜ್ಞಾನದ ಮೂಲಕ  ಅದು ಕೂಡ ಇತಿಹಾಸದ ಪುಟ ಸೇರಿದೆ. ದೇಶದ ಕಟ್ಟ ಕಡೆಯ ಸಂದೇಶ ದೂರದರ್ಶನದ ನ್ಯೂಸ್ ವಿಭಾಗದ ಅಶ್ವಿನಿ ಮಿಶ್ರಾರವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ  ಕಳುಹಿಸಿದ “success and happiness in life’’ ಸಂದೇಶ ಕೊನೆಯ ಟೆಲಿಗ್ರಾಂ ಸಂದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದ ಮಟ್ಟಿಗೆ 1850 ರಲ್ಲಿ ಮೊದಲ ಬಾರಿಗೆ ಪ್ರಾಯೋಗಿಕ ಟೆಲಿಗ್ರಾಪ್ ಮಾರ್ಗ ಕೊಲ್ಕತಾ ಮತ್ತು ಡೈಮಂಡ್ ಹಾರ್ಬರ್ ಮಧ್ಯೆ ಪ್ರಾರಂಭವಾಯಿತು. 1851 ರಲ್ಲಿ ಬ್ರಿಟೀಶ್ ಈಸ್ಟ್ ಇಂಡಿಯ ಕಂಪನಿಯ ಬಳಕೆಗೆ ಈ ಸೇವೆಯನ್ನು ಬಳಸಲಾಯಿತು 1853 ರಲ್ಲಿ ಇದರ ಸೇವೆಗೆ ಪ್ರತ್ಯೇಕ ಇಲಾಖೆ,1854 ರಲ್ಲಿ ಭಾರತಾದ್ಯಂತ 4000 ಮೈಲು ಟೆಲಿಗ್ರಾಂ ಲೈನ್ ನಿರ್ಮಾಣ, 1885 ಭಾರತೀಯ ಟೆಲಿಗ್ರಾಪ್ ಖಾಯಿದೆ ಜಾರಿ,1902ರಲ್ಲಿ ವೈರ್ಲೆಸ್ ಸಂಪರ್ಕ ಬಳಸಿ ಬಳಕೆ, 1927 ರಲ್ಲಿ ಭಾರತ ಮತ್ತು ಬ್ರಿಟನ್ ಮಧ್ಯೆ  ರೇಡಿಯೋ ಟೆಲಿಗ್ರಾಪ್ ವ್ಯವಸ್ಥೆ. 1995 ರಲ್ಲಿ ಅಂತರ್ಜಾಲ ಭಾರತಕ್ಕೆ ಕಾಲಿಟ್ಟ ನಂತರ ಇದರ ಅಂತ್ಯದ ದಿನಕ್ಕೆ ಕ್ಷಣಗಣನೆ ಆರಂಭವಾಯಿತು. ಆದರೆ ಸೇನೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಇಂದಿಗೂ ಘೋರ ಅರಣ್ಯದ ಮಧ್ಯೆಯಿಂದ ತಂತಿ ರಹಿತ ಸಂದೇಶ ಕಳುಹಿಸುವಲ್ಲಿ ಈ ಮಾಧ್ಯಮ ಯಶಸ್ವಿಯಾಗಿದೆ. ಆ ಮೂಲಕ ಜಮ್ಮು ಕಾಶ್ಮೀರ ಮತ್ತು ಇತರ ಸಂಪರ್ಕವೇ ಇಲ್ಲದ ಗಡಿಗಳಲ್ಲಿ ಯಾವುದೇ ಒಂದು ಅನಾಹುತ ಮತ್ತು ಸಾವು ನೋವು ಸಂಭವಿಸಿದಾಗ ಅಲ್ಲಿಂದ sos (…---…save our souls) ಎಂಬ ಸಂದೇಶ ರವಾನೆಯಾಗುತ್ತದೆ. ಆ ಮೂಲಕ ಭದ್ರತಾ ವ್ಯವಸ್ಥೆಯಲ್ಲಿ ತಂತಿ ರಹಿತ ಸಂದೇಶವಾಗಿ ಇನ್ನು ಚಾಲ್ತಿಯಲ್ಲಿದೆ. ಇದರಲ್ಲಿ ಸಂಪೂರ್ಣ A ಯಿಂದ  Z,ವರೆಗೆ ಮತ್ತು  1 ರಿಂದ 9 ವರೆಗೆ ಜೊತೆಗೆ ಎಲ್ಲಾ ಸಂಕೇತಗಳಿಗೆ ಇದರಲ್ಲಿ ಒಂದು ಚುಕ್ಕಿ ಮತ್ತು ಒಂದು ಅಡ್ಡ ಗೆರೆಯ ಮೂಲಕ ಗುರುತಿಸಲಾಗಿದೆ ಅಂತಾರಾಷ್ಟ್ರೀಯ ಭಾಷೆಯಲ್ಲಿ ಇದಕ್ಕೆ ಕ್ರಮವಾಗಿ.di –daa ಎಂದು ಕರೆಯಲಾಗುತ್ತದೆ. ಇಂದು 160 ವರ್ಷಗಳ ಇತಿಹಾಸವಿರುವ ಸಂದೇಶ ಪ್ರಕಾರ ಸಾರ್ವಜನಿಕ ಸೇವೆಯಿಂದ ಮರೆಗೆ ಸರಿಯುತ್ತಿರಬಹುದು, ಆದರೆ ಸಾರ್ವಜನಿಕರಿಂದ ಅಲ್ಲ, ಇಂದು ಸ್ಯಾಮುಯಲ್ ಮೊರ್ಸ್ ನಮ್ಮಿಂದ ಮರೆಗೆ ಸರಿದಿರಬಹುದು ಆದರೆ ಆತನ ಮೋರ್ಸ್ ಕೋಡ್ ಅಲ್ಲಾ..




Tuesday, 4 June 2013

ಹೊದ್ದು ಮಲಗೋ ಸುಖ ಇರೋ ಮಡಿಕೇರಿ.....!

ಧನಂಜಯ ಮಡಿಕೇರಿ

ನನ್ನ ಜಿಲ್ಲೆ ಮತ್ತು ಮಡಿಕೇರಿ ರಾಜ್ಯದಲ್ಲಿ ಗಮನ ಸೆಳೆಯೋ ಪ್ರದೇಶ. ಕೊಡಗು ಎಂದ ಕ್ಷಣ  ಹೊರಗಿನ ಮಂದಿಗೆ ಅದೇಕೋ ಒಂದು ರೋಮಾಂಚನ. ನೂರಾರು ಊರು ಸುತ್ತಿ ಏನೇನೋ ಕಂಡ ಮೇಲು ಕಂಬಳಿ ಹೊದ್ದು ಮಲಗೋ ಸುಖ ಇರೋದು ಮಾತ್ರ ಮಡಿಕೇರಿಯಲ್ಲೇ..? ಪ್ರಕೃತಿಯ ಸೆರಗು ಯಾವ ಜೀವವನ್ನು ಸೆಳೆಯದೆ ಇರದು .

ಸೆರಗು, ತುದಿ, ಚುಂಗು ಮುಂತಾದ ಅದೇ ನಮೂನೆಯ ಇಲ್ಲದ ಏನೋ ವಿಶೇಷತೆ ಈ ಶಬ್ದಕ್ಕಿದೆ. ಸೆರಗು ಅಂದೊಡನೆ ಅದು ನಿಶ್ಚಯವಾಗಿ ಸೀರೆಯ ಸೇರಗೆ, ಇಲ್ಲಿ ಹಸಿರು ಸೀರೆ ಉಟ್ಟ ನನ್ನ ಕೊಡಗಿನ ಪ್ರಕೃತಿ ಮಾತೆ ತನ್ನ ಸೀರೆಯ ಸೆರಗನ್ನು ಜಿಲ್ಲೆಯಾದ್ಯಂತ ತೇಲಿ ಬಿಟ್ಟಿದ್ದಾಳೆ ( ಕೆಲವರಿಗೆ ಸೆರಗು ಅಂದರೆ ಮತ್ಯರಾರೋ ನೆನಪಾಗ ಬಹುದು) ಪ್ರಕೃತಿ ಎಂಬ ನನ್ನ ತಾಯಿ ಹುಟ್ಟಿರುವ ಸೀರೆ ಅಷ್ಟು ಗಟ್ಟಿಯಾಗಿರುವುದರಿಂದಲೇ ನನ್ನ ಜಿಲ್ಲೆಗೆ ಮಂಗನ ಖಾಯಿಲೆ,ಚಿಕನ್ ಗುನ್ಯ ಯಾವುದು ಸುಳಿಯಲಿಲ್ಲ. ನನ್ನ ತಾಯಿ ಉಟ್ಟಿರುವ ಹಸಿರು ಸೀರೆ, ಆಕೆಯ ಬಗಲಲ್ಲಿ ನಾವುಗಳು ಕೆಟ್ಟ ಕಣ್ಣುಗಳಿಂದಲೋ ಪಾರಾಗಲು ಮಗು ಆಶ್ರಯಿಸಿರುವಂತೆ ನಾನು ಆಶ್ರಯಿಸಿರುವುದು ಈ ತಾಯಿಯ ಸೀರೆಯ ಸೇರಗಿನಲ್ಲೇ..! ಆ ಸೆರಗಿನ ಮುಸುಕು, ಆ ಮುಸುಕು ಕೂಡ ಕಂಬಳಿ ಹೊದ್ದ ಆಗಲ್ಲ ಅದೊಂದು ತರಹ ಮಂಜು, ಆ ಮಂಜಿನ ತೆಳ್ಳನೆಯ ಪರದೆಯ ಮೂಲಕ ಮಬ್ಬು ಮಬ್ಬಾಗಿ ಕಾಣುವ ನನ್ನ ಜನ್ಮ ನೀಡಿದ ಮಾತೆಯ ಊರಾದ ದೂರದ ಕಾಸರಗೋಡುವಿನ ಉಪ್ಪಳವನ್ನು ನೆನೆಸುತ್ತಾ ರಾಜಶೀಟಿನ ಸೂರ್ಯಾಸ್ತಮ ನೋಡುತ್ತಾ ಕುಳಿತಿರುವಾಗ ದೂರದಿಂದ ಮತ್ತೆ ಅದೇ ನನ್ನ ಪ್ರಕೃತಿ ಮಾತೆ ತನ್ನ ಬಿಳಿಯ ಸೆರಗನ್ನ ತೇಲಿ ಬಿಡುತ್ತಿರುವುದನ್ನು ಕಂಡು ಕೊಡಗಿನ ಎಲ್ಲರಂತೆ ಸೆರಗಿನ ಮಗುವಾಗಿರುವ ನಾನು ಜನ್ಮ ನೀಡಿದ ಆಶ್ರಯ ನೀಡಿದ ಮಾತೆಯರ ನೆನೆದು ಧನ್ಯನಾದೆ.

Saturday, 23 March 2013

ಸಾವು ಎದುರಿಗಿದ್ದರೂ ಬದುಕನ್ನು ಪ್ರೀತಿಸಿದ ಪಾಠ – ‘ದಿ ಲಾಸ್ಟ್ ಲೆಕ್ಚರ್’

ಧನಂಜಯ ಮಡಿಕೇರಿ















              ಎಲ್ಲಾ ಶಿಕ್ಷಕರೂ ಪಾಠ ಹೇಳುತ್ತಾರೆ ಆದರೆ ಕೆಲವೇ ಮಂದಿ ಬದುಕನ್ನು ಓದಿಸಬಲ್ಲರು, ಎಲ್ಲಾ ಪುಸ್ತಕಗಳು ಮಾಹಿತಿ ನೀಡುತ್ತವೆ, ಆದರೆ ಕೆಲವೇ ಪುಸ್ತಕಗಳು ನಮ್ಮೊಳಗಿನ ಮೌನವನ್ನು ಕದಡುತ್ತವೆ. ಅಂಥದ್ದೇ ಒಂದು ಕೃತಿ  “ದಿ ಲಾಸ್ಟ್ ಲೆಕ್ಚರ್” ಈ ಕೃತಿ ಅಮೇರಿಕದ ಖ್ಯಾತ ಕಂಪ್ಯೂಟರ್ ವಿಜ್ಞಾನಿ ಡಾ. ರಾಂಡಿ ಪಾಶ್ ಅವರ ಜೀವನಾನುಭವಗಳ ಸಂಕಲನ. ಇದು ಆತ್ಮಕಥೆಯಲ್ಲ, ಆತ್ಮಪಾಠ. ಇದು ಉಪನ್ಯಾಸವಲ್ಲ, ಬದುಕಿನ ಎದುರು ನಿಂತು ಹೇಳುವ ಒಪ್ಪಿಗೆ ಮಾತು.  ರಾಂಡಿ ಪಾಷ್ ವಿಶ್ವಾದ್ಯಂತ ಪ್ರಸಿದ್ಧರಾದದ್ದು ಅವರ “The Last Lecture”  ಎಂಬ ಭಾಷಣದಿಂದ. ಈ ಪುಸ್ತಕ ಪ್ರಮುಖ  ಸಂದೇಶಗಳುಜೀವನದಲ್ಲಿ  ಕನಸುಗಳನ್ನು ಹಿಂಬಾಲಿಸಬೇಕು, ಸೋಲು ಬಂದರೂ   ನಿರಾಶರಾಗಬಾರದು, ಮೌಲ್ಯಗಳು, ಶಿಸ್ತು ಮತ್ತು ಧನಾತ್ಮಕ ಚಿಂತನೆ ಮುಖ್ಯ, ಇತರರಿಗೆ ಸಹಾಯ ಮಾಡುವುದೇ ನಿಜವಾದ ಯಶಸ್ಸು.

ಅವರು ಅಗ್ನ್ಯಾಶಯ ಕ್ಯಾನ್ಸರ್ (Pancreatic Cancer) ಕಾಯಿಲೆಯಿಂದ ಬಳಲುತ್ತಿದ್ದು, ತಮ್ಮ ಜೀವನದ ಅಂತಿಮ ಹಂತದಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಜನರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಉಪನ್ಯಾಸ ನೀಡಿದರು. ಕ್ಯಾನ್ಸರ್ ಎಂಬ  ಮರಣಶಾಸನ ಕೈಯಲ್ಲಿ ಇಟ್ಟುಕೊಂಡು, ಬದುಕು ಹೇಗೆ ಸುಂದರವಾಗಿಸಬಹುದು ಎಂಬುದನ್ನು ರಾಂಡಿ ಪಾಶ್ ಈ ಕೃತಿಯಲ್ಲಿ ನಮಗೆ ತೋರಿಸುತ್ತಾರೆ. ಕಾರ್ನಿಗಿ ಮೆಲನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ರಾಂಡಿ ಪಾಶ್, ವಿಜ್ಞಾನಿಯಾಗಿ, ಶಿಕ್ಷಕರಾಗಿ, ಸಂಶೋಧಕರಾಗಿ ಯಶಸ್ಸಿನ ಶಿಖರ ತಲುಪಿದವರು. ಗೂಗಲ್, ಅಡೋಬ್ ಮುಂತಾದ ಜಾಗತಿಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಅವರದು. ಆದರೆ ಈ ಎಲ್ಲಾ ಸಾಧನೆಗಳಿಗೂ ಮೀರಿದ್ದು ಅವರು ಬದುಕನ್ನು ನೋಡುವ ದೃಷ್ಟಿಕೋನ. ಮೂರು ತಲೆಮಾರಿಗೆ ಸಾಕಾಗುವಷ್ಟು ಸಂಪತ್ತು ಇದ್ದರೂ, ಅದನ್ನು ಬದುಕಿನ ಗುರಿಯನ್ನಾಗಿ ಮಾಡಿಕೊಂಡವರಲ್ಲ ರಾಂಡಿ ಪಾಶ್. ಹಣ ಇದ್ದರೂ, ಸಾವನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ಕಠಿಣ ಸತ್ಯವನ್ನು ಅವರು ಅತ್ಯಂತ ಶಾಂತವಾಗಿ ಒಪ್ಪಿಕೊಂಡವರು.

ಬಾಲ್ಟಿಮೋರ್ನ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯ ಖ್ಯಾತ ವೈದ್ಯರು “ಕ್ಯಾನ್ಸರ್ ಅಂತಿಮ ಹಂತದಲ್ಲಿದೆ”  “I am sorry dear, cancer is in the final stage” ಎಂಬ ವಾಕ್ಯ ಕೇಳಿದಾಗ, ಬದುಕಿನ ಒಂದು ನಿರ್ವಿವಾದ ಸತ್ಯ ಅವರಿಗೆ ಸ್ಪಷ್ಟವಾಯಿತು ಬದುಕಿನಲ್ಲಿ ಅಧಿಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ, ಗೆಳೆಯರ ವಿರುದ್ಧ ಹೋರಾಡಿ ಗೆಲ್ಲಬಹುದು, ಆದರೆ ಸಾವಿನ ವಿರುದ್ಧ ಅಲ್ಲ, ಕ್ಯಾನ್ಸರ್ ಎಂಬ ಭೀಕರ ರೋಗ ಅಂತಿಮ ಹಂತದಲ್ಲಿದೆ ಎಂಬ ಸತ್ಯ ತಿಳಿದ ಬಳಿಕವೂ, ರಾಂಡಿ ಪಾಶ್ ಬದುಕಿನ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಹಣ, ವೈದ್ಯಕೀಯ ಸೌಲಭ್ಯ, ಜಗತ್ತಿನ ಅತ್ಯುತ್ತಮ ಆಸ್ಪತ್ರೆಗಳು ಎಲ್ಲವೂ ಅವರ ಬಳಿ ಇದ್ದರೂ, ಸಾವನ್ನು ಸೋಲಿಸಲಾಗುವುದಿಲ್ಲ ಎಂಬ ಸರಳ ಸತ್ಯವನ್ನು ಅವರು ಶಾಂತವಾಗಿ ಒಪ್ಪಿಕೊಂಡರು. ಆದರೆ ಆ ಸಾವು ತನ್ನ ಹತ್ತಿರ ಬರುವವರೆಗೂ ಬದುಕನ್ನು ಅವರು ಅತ್ಯಂತ ಅರ್ಥಪೂರ್ಣವಾಗಿ ರೂಪಿಸಿಕೊಂಡರು. ಅವರು ಕುಸಿಯಲಿಲ್ಲ, ಬದಲಿಗೆ, ತಮ್ಮ ಬದುಕನ್ನು ಇನ್ನಷ್ಟು ಪ್ರಾಮಾಣಿಕವಾಗಿ ಬದುಕಲು ತೀರ್ಮಾನಿಸಿದರು. ಈ ಪುಸ್ತಕದಲ್ಲಿ ಅವರು ತಮ್ಮ ಮಕ್ಕಳಿಗಾಗಿ ಬದುಕನ್ನು ಬಿಟ್ಟು ಹೋಗುವ ಮೊದಲು ಏನು ಕೊಟ್ಟು ಹೋಗಬೇಕು ಎಂಬುದನ್ನು ಯೋಚಿಸುತ್ತಾರೆ. ಹಣವಲ್ಲ, ಮನೆಯಲ್ಲ ಮಠವಲ್ಲ ಮೌಲ್ಯಗಳು, ಕನಸುಗಳು ಮತ್ತು ಧೈರ್ಯ. ಸಾವು ನನ್ನನ್ನು ಗೆಲ್ಲಬಹುದು, ಆದರೆ ನನ್ನ ಬದುಕಿನ ಅರ್ಥವನ್ನು ಅಲ್ಲ ಎಂಬ ಧ್ವನಿ ಈ ಕೃತಿಯ ಪ್ರತಿಯೊಂದು ಪುಟದಲ್ಲೂ ಕೇಳಿಸುತ್ತದೆ.

ಪುಸ್ತಕಕ್ಕೆ ಮುನ್ನುಡಿ ಬರೆದಿರುವ ವಿಶ್ವೇಶ್ವರ ಭಟ್ ಅವರು ಹೇಳುವಂತೆ, ಸಾವಿನ ಬಗ್ಗೆ ಬರೆಯುವುದು ಸುಲಭ, ಸಾವಿನ ಬಗ್ಗೆ ಮಾತನಾಡುವುದು ಇನ್ನೂ ಸುಲಭ ಆದರೆ ತನ್ನ ಪ್ರೀತಿಯ ಮಡದಿಯ ಹಣೆಗೆ ಮುತ್ತಿಟ್ಟು ಇದು ನಾನು ನಿನ್ನ ಜೊತೆಯಲ್ಲಿರುವ ನಿನ್ನ ಕೊನೆಯ ಹುಟ್ಟುಹಬ್ಬ ಮುಂದಿನ ವರ್ಷದ ಹುಟ್ಟುಹಬ್ಬಕ್ಕೆ ನಾನು ನಿನ್ನ ಜೊತೆ ಇರಲ್ಲ ಎಂದು ಹೇಳಿ ನಗುತ್ತಾ “Life is beautiful, be happy always”  ಎಂದು  ಹೇಳುವುದಕ್ಕೆ ಗುಂಡಿಗೆ ಗಟ್ಟಿ ಇರಬೇಕು ಅಂತಹ ಧೈರ್ಯವೇ ರಾಂಡಿ ಪಾಶ್.

ಮೈಸೂರಿನ ಉಮೇಶ್ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ರೀತಿ ಪ್ರಶಂಸನೀಯ. ಮೂಲ ಕೃತಿಯ ಭಾವನೆ, ಸರಳತೆ ಮತ್ತು ತೀವ್ರತೆ ಯಾವುದೂ ಕಳೆದು ಹೋಗದೆ ಕನ್ನಡದಲ್ಲಿ ಜೀವಂತವಾಗಿದೆ. ಅದಕ್ಕಾಗಿಯೇ ಈ ಕೃತಿಗೆ ಅರಳು ಸಾಹಿತ್ಯ ಪ್ರಶಸ್ತಿ ದೊರೆತಿರುವುದು ಅತ್ಯಂತ ಸಾರ್ಥಕ. ಇಂದು ಸಣ್ಣ ಆರೋಗ್ಯ ಸಮಸ್ಯೆ ಬಂದರೂ ಬದುಕನ್ನು ಕೈ ಬಿಡುವ ಮನಸ್ಥಿತಿಯಲ್ಲಿ ಇರುವ ಹಲವರಿಗೆ ಈ ಪುಸ್ತಕ ಒಂದು ಮಾನಸಿಕ ಔಷಧಿ. ವಿದ್ಯಾರ್ಥಿಗಳಿಗೆ ಇದು ಕನಸನ್ನು ಬಿಟ್ಟು ಕೊಡಬೇಡಿ ಎಂಬ ಸಂದೇಶವಾದರೆ, ಶಿಕ್ಷಕರಿಗೆ ಇದು ಬದುಕು ಇದನ್ನೂ ಪಾಠ ಮಾಡಬಹುದು ಎಂಬ ನೆನಪಾದರೆ, ಪೋಷಕರಿಗೆ ಇದು ಮಕ್ಕಳಿಗೆ ಏನು ಬಿಟ್ಟು ಹೋಗಬೇಕು ಎಂಬ ಆತ್ಮ ಪರಿಶೀಲನೆ.

ದಿ ಲಾಸ್ಟ್ ಲೆಕ್ಚರ್’ ಓದಿದ ಮೇಲೆ ಬದುಕು ಬದಲಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ ಬದುಕನ್ನು ನೋಡುವ ದೃಷ್ಟಿಕೋನ ಖಂಡಿತ ಬದಲಾಗುತ್ತದೆ, ಸಾವು ಎದುರಿಗಿದ್ದರೂ ಬದುಕನ್ನು ಪ್ರೀತಿಸಬಹುದು ಎಂಬ ಪಾಠವನ್ನು ಸರಳವಾಗಿ ಹೇಳುವ ಈ ಕೃತಿ, ಓದಲು ಮಾತ್ರವಲ್ಲ, ಒಳಗೆ ಇಟ್ಟುಕೊಳ್ಳಬೇಕಾದದ್ದು, ಅದೇ ಈ ಪುಸ್ತಕದ ದೊಡ್ಡ ಸಾಧನೆ.