
ಅವರು ಅಗ್ನ್ಯಾಶಯ ಕ್ಯಾನ್ಸರ್ (Pancreatic
Cancer) ಕಾಯಿಲೆಯಿಂದ
ಬಳಲುತ್ತಿದ್ದು, ತಮ್ಮ ಜೀವನದ ಅಂತಿಮ ಹಂತದಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಜನರಿಗೆ ಪ್ರೇರಣೆ ನೀಡುವ
ಉದ್ದೇಶದಿಂದ ಈ ಉಪನ್ಯಾಸ ನೀಡಿದರು. ಕ್ಯಾನ್ಸರ್ ಎಂಬ
ಮರಣಶಾಸನ ಕೈಯಲ್ಲಿ ಇಟ್ಟುಕೊಂಡು, ಬದುಕು ಹೇಗೆ ಸುಂದರವಾಗಿಸಬಹುದು ಎಂಬುದನ್ನು ರಾಂಡಿ ಪಾಶ್ ಈ
ಕೃತಿಯಲ್ಲಿ ನಮಗೆ ತೋರಿಸುತ್ತಾರೆ. ಕಾರ್ನಿಗಿ ಮೆಲನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ
ರಾಂಡಿ ಪಾಶ್, ವಿಜ್ಞಾನಿಯಾಗಿ, ಶಿಕ್ಷಕರಾಗಿ, ಸಂಶೋಧಕರಾಗಿ ಯಶಸ್ಸಿನ ಶಿಖರ ತಲುಪಿದವರು. ಗೂಗಲ್,
ಅಡೋಬ್ ಮುಂತಾದ ಜಾಗತಿಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಅವರದು.
ಆದರೆ ಈ ಎಲ್ಲಾ ಸಾಧನೆಗಳಿಗೂ ಮೀರಿದ್ದು ಅವರು ಬದುಕನ್ನು ನೋಡುವ ದೃಷ್ಟಿಕೋನ. ಮೂರು ತಲೆಮಾರಿಗೆ
ಸಾಕಾಗುವಷ್ಟು ಸಂಪತ್ತು ಇದ್ದರೂ, ಅದನ್ನು ಬದುಕಿನ ಗುರಿಯನ್ನಾಗಿ ಮಾಡಿಕೊಂಡವರಲ್ಲ ರಾಂಡಿ ಪಾಶ್. ಹಣ
ಇದ್ದರೂ, ಸಾವನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ಕಠಿಣ ಸತ್ಯವನ್ನು ಅವರು ಅತ್ಯಂತ ಶಾಂತವಾಗಿ
ಒಪ್ಪಿಕೊಂಡವರು.
ಬಾಲ್ಟಿಮೋರ್ನ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯ ಖ್ಯಾತ ವೈದ್ಯರು
“ಕ್ಯಾನ್ಸರ್ ಅಂತಿಮ ಹಂತದಲ್ಲಿದೆ” “I
am sorry dear, cancer is in the final stage” ಎಂಬ ವಾಕ್ಯ ಕೇಳಿದಾಗ,
ಬದುಕಿನ ಒಂದು ನಿರ್ವಿವಾದ ಸತ್ಯ ಅವರಿಗೆ ಸ್ಪಷ್ಟವಾಯಿತು ಬದುಕಿನಲ್ಲಿ
ಅಧಿಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ,
ಗೆಳೆಯರ ವಿರುದ್ಧ ಹೋರಾಡಿ ಗೆಲ್ಲಬಹುದು,
ಆದರೆ ಸಾವಿನ ವಿರುದ್ಧ ಅಲ್ಲ,
ಕ್ಯಾನ್ಸರ್ ಎಂಬ ಭೀಕರ ರೋಗ ಅಂತಿಮ ಹಂತದಲ್ಲಿದೆ ಎಂಬ ಸತ್ಯ ತಿಳಿದ
ಬಳಿಕವೂ, ರಾಂಡಿ ಪಾಶ್ ಬದುಕಿನ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಹಣ,
ವೈದ್ಯಕೀಯ ಸೌಲಭ್ಯ, ಜಗತ್ತಿನ ಅತ್ಯುತ್ತಮ ಆಸ್ಪತ್ರೆಗಳು ಎಲ್ಲವೂ ಅವರ ಬಳಿ ಇದ್ದರೂ,
ಸಾವನ್ನು ಸೋಲಿಸಲಾಗುವುದಿಲ್ಲ ಎಂಬ ಸರಳ ಸತ್ಯವನ್ನು ಅವರು ಶಾಂತವಾಗಿ
ಒಪ್ಪಿಕೊಂಡರು. ಆದರೆ ಆ ಸಾವು ತನ್ನ ಹತ್ತಿರ ಬರುವವರೆಗೂ ಬದುಕನ್ನು ಅವರು ಅತ್ಯಂತ
ಅರ್ಥಪೂರ್ಣವಾಗಿ ರೂಪಿಸಿಕೊಂಡರು. ಅವರು ಕುಸಿಯಲಿಲ್ಲ, ಬದಲಿಗೆ,
ತಮ್ಮ ಬದುಕನ್ನು ಇನ್ನಷ್ಟು ಪ್ರಾಮಾಣಿಕವಾಗಿ ಬದುಕಲು
ತೀರ್ಮಾನಿಸಿದರು. ಈ ಪುಸ್ತಕದಲ್ಲಿ ಅವರು ತಮ್ಮ ಮಕ್ಕಳಿಗಾಗಿ ಬದುಕನ್ನು ಬಿಟ್ಟು ಹೋಗುವ ಮೊದಲು
ಏನು ಕೊಟ್ಟು ಹೋಗಬೇಕು ಎಂಬುದನ್ನು ಯೋಚಿಸುತ್ತಾರೆ. ಹಣವಲ್ಲ,
ಮನೆಯಲ್ಲ ಮಠವಲ್ಲ ಮೌಲ್ಯಗಳು,
ಕನಸುಗಳು ಮತ್ತು ಧೈರ್ಯ. ಸಾವು ನನ್ನನ್ನು ಗೆಲ್ಲಬಹುದು,
ಆದರೆ ನನ್ನ ಬದುಕಿನ ಅರ್ಥವನ್ನು ಅಲ್ಲ ಎಂಬ ಧ್ವನಿ ಈ ಕೃತಿಯ
ಪ್ರತಿಯೊಂದು ಪುಟದಲ್ಲೂ ಕೇಳಿಸುತ್ತದೆ.
ಪುಸ್ತಕಕ್ಕೆ ಮುನ್ನುಡಿ ಬರೆದಿರುವ ವಿಶ್ವೇಶ್ವರ ಭಟ್ ಅವರು ಹೇಳುವಂತೆ,
ಸಾವಿನ ಬಗ್ಗೆ ಬರೆಯುವುದು ಸುಲಭ, ಸಾವಿನ
ಬಗ್ಗೆ ಮಾತನಾಡುವುದು ಇನ್ನೂ ಸುಲಭ ಆದರೆ ತನ್ನ ಪ್ರೀತಿಯ ಮಡದಿಯ ಹಣೆಗೆ ಮುತ್ತಿಟ್ಟು ಇದು ನಾನು
ನಿನ್ನ ಜೊತೆಯಲ್ಲಿರುವ ನಿನ್ನ ಕೊನೆಯ ಹುಟ್ಟುಹಬ್ಬ ಮುಂದಿನ ವರ್ಷದ ಹುಟ್ಟುಹಬ್ಬಕ್ಕೆ ನಾನು
ನಿನ್ನ ಜೊತೆ ಇರಲ್ಲ ಎಂದು ಹೇಳಿ ನಗುತ್ತಾ “Life is beautiful,
be happy always” ಎಂದು ಹೇಳುವುದಕ್ಕೆ
ಗುಂಡಿಗೆ ಗಟ್ಟಿ ಇರಬೇಕು ಅಂತಹ ಧೈರ್ಯವೇ ರಾಂಡಿ ಪಾಶ್.
ಮೈಸೂರಿನ ಉಮೇಶ್ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ
ರೀತಿ ಪ್ರಶಂಸನೀಯ. ಮೂಲ ಕೃತಿಯ ಭಾವನೆ, ಸರಳತೆ ಮತ್ತು ತೀವ್ರತೆ ಯಾವುದೂ ಕಳೆದು ಹೋಗದೆ ಕನ್ನಡದಲ್ಲಿ
ಜೀವಂತವಾಗಿದೆ. ಅದಕ್ಕಾಗಿಯೇ ಈ ಕೃತಿಗೆ ಅರಳು ಸಾಹಿತ್ಯ ಪ್ರಶಸ್ತಿ ದೊರೆತಿರುವುದು ಅತ್ಯಂತ
ಸಾರ್ಥಕ. ಇಂದು ಸಣ್ಣ ಆರೋಗ್ಯ ಸಮಸ್ಯೆ ಬಂದರೂ ಬದುಕನ್ನು ಕೈ ಬಿಡುವ ಮನಸ್ಥಿತಿಯಲ್ಲಿ ಇರುವ
ಹಲವರಿಗೆ ಈ ಪುಸ್ತಕ ಒಂದು ಮಾನಸಿಕ ಔಷಧಿ. ವಿದ್ಯಾರ್ಥಿಗಳಿಗೆ ಇದು ಕನಸನ್ನು ಬಿಟ್ಟು ಕೊಡಬೇಡಿ ಎಂಬ
ಸಂದೇಶವಾದರೆ, ಶಿಕ್ಷಕರಿಗೆ ಇದು ಬದುಕು ಇದನ್ನೂ ಪಾಠ ಮಾಡಬಹುದು ಎಂಬ ನೆನಪಾದರೆ,
ಪೋಷಕರಿಗೆ ಇದು ಮಕ್ಕಳಿಗೆ ಏನು ಬಿಟ್ಟು ಹೋಗಬೇಕು ಎಂಬ ಆತ್ಮ ಪರಿಶೀಲನೆ.
‘ದಿ
ಲಾಸ್ಟ್ ಲೆಕ್ಚರ್’ ಓದಿದ ಮೇಲೆ ಬದುಕು ಬದಲಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ
ಬದುಕನ್ನು ನೋಡುವ ದೃಷ್ಟಿಕೋನ ಖಂಡಿತ ಬದಲಾಗುತ್ತದೆ, ಸಾವು
ಎದುರಿಗಿದ್ದರೂ ಬದುಕನ್ನು ಪ್ರೀತಿಸಬಹುದು ಎಂಬ ಪಾಠವನ್ನು ಸರಳವಾಗಿ ಹೇಳುವ ಈ ಕೃತಿ,
ಓದಲು ಮಾತ್ರವಲ್ಲ, ಒಳಗೆ ಇಟ್ಟುಕೊಳ್ಳಬೇಕಾದದ್ದು, ಅದೇ ಈ
ಪುಸ್ತಕದ ದೊಡ್ಡ ಸಾಧನೆ.
